ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದ ಎದುರಾಗಿರುವ ಬರದ ಛಾಯೆಯನ್ನು ಸಮರ್ಥವಾಗಿ ಎದುರಿಸಲು ಯಾವೆಲ್ಲಾ ಪರಿಹಾರ ಕ್ರಮಗಳು, ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಚರ್ಚಿಸಲು ಭಾನುವಾರ ತುರ್ತು ಸಚಿವ ಸಂಪುಟ ಸಭೆ ಕರೆಯಲಾಗಿದೆ.

ಇದರ ಪೂರ್ವಭಾವಿಯಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಭಾನುವಾರ ಬೆಳಗ್ಗೆ ವಿಧಾನಸೌಧದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಜಿಲ್ಲಾವಾರು ಮಳೆ ಕೊರತೆ, ಬರ ಪರಿಸ್ಥಿತಿ, ಕೃಷಿ ಚಟುವಟಿಕೆ, ಕುಡಿಯುವ ನೀರು, ಜಾನುವಾರುಗಳ ಮೇವಿನ ಅಭಾವ, ಜಲಾಶಯಗಳ ನೀರಿನ ಪ್ರಮಾಣದ ಕುರಿತು ಮಾಹಿತಿ ಪಡೆಯಲಿದ್ದಾರೆ. ಇದಾದ ಬಳಿಕ ಅವರ ಅಧ್ಯಕ್ಷತೆಯಲ್ಲಿ ಸಂಜೆ 4.30ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದೆ.

ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಡಿ.ಕೆ.ಶಿವಕುಮಾರ್‌, ಬರದ ವಿಚಾರ ಚರ್ಚೆಗೆ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದೇನೆ. ಗುರುವಾರವೇ ನಡೆಸಬೇಕಿದ್ದ ಸಭೆ ಇದು. ಆದರೆ, ದೆಹಲಿಗೆ ಹೋಗಿದ್ದರಿಂದ ಸಭೆ ನಡೆಸಲು ಆಗಿರಲಿಲ್ಲ. ಹಾಗಾಗಿ ಭಾನುವಾರ ಕರೆಯಲಾಗಿದ್ದು, ಬರದ ಬಗ್ಗೆ ವಿಶೇಷ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ಬೆಳಗ್ಗೆ ಎಲ್ಲಾ ಡಿಸಿ, ಸಿಇಒಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾಹಿತಿ ಕಲೆ ಹಾಕಲಾಗುವುದು. ಇದಾದ ನಂತರ ಸಂಜೆ ಸಂಪುಟ ಸಭೆ ನಡೆಯಲಿದೆ. ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿ ನಿಭಾಯಿಸಲು ತುರ್ತಾಗಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಇಂಥ ಬರ ಪರಿಸ್ಥಿತಿ ಸಮಯದಲ್ಲಿ ಯಾವ್ಯಾವ ಇಲಾಖೆಗಳಿಂದ ಏನೇನು ಯೋಜನೆ, ಕಾರ್ಯಕ್ರಮಗಳನ್ನು ತರಬೇಕಾಗುತ್ತದೆ ಎಂಬ ವಿವರಣೆ ಪಡೆದು, ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಶೇಷವಾದ ಚರ್ಚೆ ನಡೆಸಿ ಸೂಕ್ತ ತೀರ್ಮಾನಗಳನ್ನು ಮಾಡುತ್ತೇವೆ.

ಗುಳೆ ತಡೆಗೆ ಕ್ರಮ:

ವಿಶೇಷವಾಗಿ ಬರ ಪರಿಸ್ಥಿತಿಯಿಂದ ಗ್ರಾಮೀಣ ಭಾಗದಿಂದ ಜನರು ಗುಳೆ ಹೋಗುವುದು ಹೆಚ್ಚಾಗಿದೆ ಎಂಬ ಮಾಹಿತಿ ಅಧಿಕಾರಿಗಳಿಂದ ಬಂದಿದೆ. ಅದನ್ನು ತಡೆಯಲು ಸ್ಥಳೀಯವಾಗಿಯೇ ಅವರಿಗೆ ಉದ್ಯೋಗಾವಕಾಶ ನೀಡುವುದು, ಕೃಷಿಗೆ ಪರ್ಯಾಯವಾಗಿ ಏನೆಲ್ಲಾ ಕಾರ್ಯಕ್ರಮಗಳನ್ನು ನೀಡಬಹುದು ಆ ಬಗ್ಗೆ ಚರ್ಚಿಸಿ ಸಂಪುಟದಲ್ಲಿ ಅಗತ್ಯ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ ಎಂದರು.

ಕೇಂದ್ರದಿಂದ ಪ್ರತಿಕ್ರಿಯೆ ಬಂದಿಲ್ಲ:

ಇದೇ ವೇಳೆ, ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ತಜ್ಞರ ತಂಡ ಕಳುಹಿಸಲು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರಕ್ಕೆ ಪ್ರತಿಕ್ರಿಯೆ ಬಂದಿದೆಯೇ ಎಂಬ ಪ್ರಶ್ನೆಗೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾವು ಪತ್ರ ಬರೆದ ತಕ್ಷಣ ಅವರು ತಂಡ ಕಳುಹಿಸುವುದಿಲ್ಲ ಎನ್ನುವ ಅರಿವೂ ನನಗಿದೆ. ರಾಜ್ಯದಲ್ಲಿನ ಮಳೆ ಕೊರತೆ, ಬರ ಪರಿಸ್ಥಿತಿ ಕುರಿತು ದಾಖಲೆ ಸಹಿತ ಇನ್ನಷ್ಟು ನಿಖರ ಸತ್ಯಾಂಶಗಳ ಸಂಪೂರ್ಣ ಚಿತ್ರಣದ ವರದಿ ಕಳುಹಿಸಲಾಗುವುದು ಎಂದು ಹೇಳಿದರು.

ಡ್ಯಾಂಗಳ ನೀರು ವ್ಯವಸಾಯಕ್ಕೆ ಬಳಸಬೇಡಿ:

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳಲ್ಲಿ ಈಗಿರುವ ನೀರನ್ನು ಕುಡಿಯುವ ಉಪಯೋಗಕ್ಕಾಗಿ ಮಾತ್ರ ಬಳಸಬೇಕು. ಜಲಾಶಯಗಳಿಂದ ನೀರು ಬಿಟ್ಟಿದ್ದಾರೆಂದು ಯಾರೂ ವ್ಯವಸಾಯಕ್ಕೆ ಬಳಸುವಂತಿಲ್ಲ ಎಂದು ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳಿಗೆ ಹೆಚ್ಚು ನೀರು ಹರಿದು ಬಂದರೆ ವ್ಯವಸಾಯಕ್ಕೆ ನೀರು ಒದಗಿಸುವ ಬಗ್ಗೆ ತೀರ್ಮಾನ ಮಾಡಲಾಗುವುದು. ಆದರೆ, ರೈತರು ಈಗಲೇ ಜಲಾಶಯಗಳ ನೀರು ನಂಬಿಕೊಂಡು ಬಿತ್ತನೆ ಮಾಡಿ ನಂತರ ಸರ್ಕಾರದ ಮೇಲೆ ನೀರು ಬಿಡುವಂತೆ ಒತ್ತಡ ತರುವ ಕೆಲಸ ಮಾಡಬಾರದು. ಈಗ ಇರುವ ನೀರನ್ನು ಕುಡಿಯುವ ನೀರಿಗೆ ಮಾತ್ರ ಬಳಸಬೇಕು ಎಂದು ಹೇಳಿದರು.

ಅಣೆಕಟ್ಟಿನ ನೀರು ಕೃಷಿಗೆ ಬಳಕೆ ಬೇಡ

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳಲ್ಲಿ ಈಗಿರುವ ನೀರನ್ನು ಕುಡಿಯುವ ಉಪಯೋಗಕ್ಕಾಗಿ ಮಾತ್ರ ಬಳಸಬೇಕು. ಜಲಾಶಯಗಳಿಂದ ನೀರು ಬಿಟ್ಟಿದ್ದಾರೆಂದು ಯಾರೂ ವ್ಯವಸಾಯಕ್ಕೆ ಬಳಸುವಂತಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳಿಗೆ ಹೆಚ್ಚು ನೀರು ಹರಿದು ಬಂದರೆ ವ್ಯವಸಾಯಕ್ಕೆ ನೀರು ಒದಗಿಸುವ ಬಗ್ಗೆ ತೀರ್ಮಾನ ಮಾಡಲಾಗುವುದು.

ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ