ಈ ವರ್ಷ ಮುಂಗಾರು ಮಳೆ ಸಕಾಲಕ್ಕೆ ಬಾರದೇ ಮುನಿಸಿಕೊಂಡಿದೆ. ಸಾಲ-ಶೂಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಮೊಳೆಕೆಯಲ್ಲೇ ಕಮರಿವೆ. ಬೆಳೆ ಕಂಡು ರೈತ ಕಂಗಾಲಾಗಿದ್ದಾನೆ.
ಸಿ.ಕೆ. ನಾಗರಾಜ
ಹೊಸಪೇಟೆ: ಈ ವರ್ಷ ಮುಂಗಾರು ಮಳೆ ಸಕಾಲಕ್ಕೆ ಬಾರದೇ ಮುನಿಸಿಕೊಂಡಿದೆ. ಸಾಲ-ಶೂಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಮೊಳೆಕೆಯಲ್ಲೇ ಕಮರಿವೆ. ಬೆಳೆ ಕಂಡು ರೈತ ಕಂಗಾಲಾಗಿದ್ದಾನೆ. ಇನ್ನು ಕೆಲವರು ಬಿತ್ತನೆ ಬೀಜ ಖರೀದಿ ಮಾಡಿಕೊಂಡು ನಿತ್ಯವೂ ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ. ಹೊಲದಲ್ಲಿ ಕೆಲಸ ಮಾಡಲು ಕೆಲಸವಿಲ್ಲದೇ ದುಡಿಮೆ ಇಲ್ಲದೇ ಮಾಡಿದ ಸಾಲ ತೀರಿಸಲು ವಿಜಯನಗರ ಜಿಲ್ಲೆಯಲ್ಲಿ ಅನೇಕ ತಾಂಡದ ರೈತರು ಗುಳೆ ಹೋಗುತ್ತಿರುವುದು ನಿರಂತರವಾಗಿ ನಡೆಯುತ್ತಿದೆ.ಕಳೆದ ಕೆಲ ದಿನಗಳಿಂದ ಕೂಡ್ಲಿಗಿ, ಕೊಟ್ಟೂರು ತಾಲೂಕಿನಿಂದ ಜನ ಗುಳೆ ಹೋಗುತ್ತಿದ್ದಾರೆ. ಈಗ ಮತ್ತೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಮರಿಯಮ್ಮನಹಳ್ಳಿ ತಾಂಡ, ಗುಂಡಾ ತಾಂಡ, ತಾಳೆಬಸಾಪುರ ತಾಂಡ, ಜಿ.ನಾಗಲಾಪುರ ತಾಂಡ ಸೇರಿದಂತೆ ಅನೇಕ ತಾಂಡಗಳ ರೈತರು ಮಂಗಳವಾರ ಸೀತ್ಲಾ ಹಬ್ಬ ಮುಗಿಸಿಕೊಂಡು ಜಿಲ್ಲೆಯ ಅನೇಕ ತಾಂಡಗಳಿಂದ ಸಹಸ್ರ ಸಂಖ್ಯೆಯಲ್ಲಿ ದುಡಿಯಲು ಗುಳೆ ಹೋಗುತ್ತಿದ್ದಾರೆ.
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ನೇಮರಾಜ್ ನಾಯ್ಕ ಅವರ ಹುಟ್ಟೂರು ಮರಿಯಮ್ಮನಹಳ್ಳಿ ತಾಂಡವೊಂದರಲ್ಲಿಯೇ ಗುರುವಾರ ರಾತ್ರಿ 60-70ಕ್ಕೂ ಹೆಚ್ಚು ಕುಟುಂಬಗಳಿಂದ ಸಾವಿರಕ್ಕೂ ಅಧಿಕ ಜನರು 15 ಲಾರಿ ಹಾಗೂ 5 ಟಾಟಾ ಏಸ್, 20 ಟ್ರ್ಯಾಕ್ಟರ್‌ಗಳಲ್ಲಿ ಶಿವಮೊಗ್ಗ, ಮೈಸೂರು, ಮಂಡ್ಯ ಸೇರಿದಂತೆ ಹಲವು ಕಡೆಗೆ ಕೂಲಿ ಅರಸಿ ಗೂಳೆ ಹೋದರು.ಚಿಕ್ಕಮಕ್ಕಳನ್ನು ಊರಲ್ಲೇ ಬಿಟ್ಟು ಲಾರಿಗೆ ಸಾಮಾನು- ಸರಂಜಾಮು ತುಂಬಿಕೊಂಡು ಹೋಗುವಾಗ ಪುರುಷರು-ಮಹಿಳೆಯರು ಕಣ್ಣೀರು ಹಾಕುತ್ತಾ ಗೋಳಿಡುತ್ತಿದ್ದರು. ನೆರೆದವರ ಕಣ್ಣಾಲಿಗಳು ತುಂಬಿದ್ದವು. ಕೆಲವೊಬ್ಬರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಇಂತಹವರ ಶಿಕ್ಷಣ ಅರ್ಧಕ್ಕೆ ನಿಂತಂತಾಗುತ್ತದೆ.
ಮರಿಯಮ್ಮನಹಳ್ಳಿ ತಾಂಡಾ, ಗುಂಡ ತಾಂಡ, ನಾಗಲಾಪುರ ತಾಂಡ, ತಾಳೆಬಸಾಪುರ ತಾಂಡದ ಬಡ ಜನತೆ ಕೂಲಿಯನ್ನೇ ನೆಚ್ಚಿಕೊಂಡಿದ್ದಾರೆ. ಕೃಷಿ ಮಾಡಿ ಬದುಕು ಸಾಗಿಸಲು ಅಗತ್ಯ ಜಮೀನು ಇಲ್ಲ. ಇರುವ ಒಣಬೇಸಾಯ ಭೂಮಿಯಲ್ಲಿ ಬೆವರು ಸುರಿಸಿ ದುಡಿಯೋಣ ಎಂದರೆ ಮಳೆ ಇಲ್ಲ. ಬಿತ್ತನೆಗಾಗಿ ಮತ್ತು ಮಕ್ಕಳ ಮದುವೆ- ಮುಂಜಿ, ಹಬ್ಬ ಹರಿದಿನಕ್ಕಾಗಿ ಮಾಡಿದ ಸಾಲ ತೀರಿಸಲು ಗುಳೆ ಹೊರಟಿದ್ದಾರೆ. ಹೀಗೆ ಹೋದ ಮಕ್ಕಳ ಶಿಕ್ಷಣ ಅರ್ಥಕ್ಕೆ ನಿಲ್ಲುತ್ತಿದೆ.ತಮಿಳುನಾಡು, ಗೋವಾ, ಮೈಸೂರು, ನಾಗಮಂಗಲ, ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ, ಕೆ.ಆರ್. ಪೇಟೆ, ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಇತರೆ ಪ್ರದೇಶದಲ್ಲಿ ಕಬ್ಬು ಕಟಾವು ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಕಬ್ಬು ಕಟಾವು ಕೆಲಸ ಮುಂದಿನ 5-6 ತಿಂಗಳು ಇರಲಿದೆ.
ವಯಸ್ಕ ಮಹಿಳೆ-ಪುರುಷರು ದುಡಿಯಲು ತೆರಳಿದರೆ, ವಯೋವೃದ್ಧರು, ಶಾಲೆಗೆ ಹೋಗುವ ಚಿಕ್ಕಮಕ್ಕಳು, ದನ-ಕರುಗಳನ್ನು ಬಿಟ್ಟು ಗುಳೆ ಹೋಗಿದ್ದಾರೆ.ಮರಿಯಮ್ಮನಹಳ್ಳಿ ತಾಂಡವೊಂದರಲ್ಲಿ ಸುಮಾರು 15 ಮೇಸ್ತ್ರಿಗಳ ಒಂದು ತಂಡದಲ್ಲಿ ಸುಮಾರು 300-400 ಜನರನ್ನು ಕಬ್ಬು ಕಟಾವಿಗಾಗಿ ತೆರಳಿದ್ದಾರೆ. ಇಲ್ಲಿ ಮಳೆ ಇಲ್ಲದೇ ಇರುವುದರಿಂದ ದುಡಿಯಲು ಗುಳೆ ಅನಿವಾರ್ಯವಾಗಿದೆ ಎನ್ನುತ್ತಾರೆ ಮರಿಯಮ್ಮನಹಳ್ಳಿ ತಾಂಡ ಕೂಲಿ ಕಾರ್ಮಿಕ ಉಮೇಶ್ ನಾಯ್ಕ.