ಸಿದ್ದಾಪುರ ತಾಲೂಕಿನ ನಾಣಿಕಟ್ಟಾದ ಸರ್ಕಾರಿ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಸಿದ್ದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಸಿದ್ದಾಪುರ: ಪತ್ರಕರ್ತರು ಯಾವುದೇ ಆಸೆ-ಆಕಾಂಕ್ಷೆಗಳಿಲ್ಲದೆ, ವೈಯಕ್ತಿಕ ಸುಖ-ದುಃಖಗಳನ್ನು ಬದಿಗಿಟ್ಟು ಸಮಾಜದ ಸ್ವಾಸ್ಥ್ಯಕ್ಕಾಗಿ ಹಗಲಿರುಳು ಶ್ರಮಿಸುವ ನೈಜ ಸಿವಿಲ್ ವಾರಿಯರ್ಸ್ ಆಗಿದ್ದಾರೆ ಎಂದು ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಅಭಿಪ್ರಾಯಪಟ್ಟರು.

ತಾಲೂಕಿನ ನಾಣಿಕಟ್ಟಾದ ಸರ್ಕಾರಿ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಸಿದ್ದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕೋದ್ಯಮದ ಸುದೀರ್ಘ ಇತಿಹಾಸ ತೆರೆದಿಟ್ಟ ಅವರು, 1780ರಲ್ಲಿ ಜೇಮ್ಸ್ ಆಗಸ್ಟಸ್ ಹಿಕಿ ಆರಂಭಿಸಿದ ಬೆಂಗಾಲ್ ಗ್ಯಾಜೆಟ್ ಭಾರತೀಯ ಪತ್ರಿಕಾರಂಗದ ಉಗಮಕ್ಕೆ ಕಾರಣವಾದರೆ, 1843ರಲ್ಲಿ ಹರ್ಮನ್ ಮೊಗ್ಲಿಂಗ್ ಅವರು ತಂದ ಮಂಗಳೂರು ಸಮಾಚಾರ ಪತ್ರಿಕೆ ಕನ್ನಡ ಪತ್ರಿಕೋದ್ಯಮದ ಮೈಲಿಗಲ್ಲಾಯಿತು. ಸಂವಿಧಾನದಲ್ಲಿ ಪತ್ರಿಕೆ ಎಂಬ ಪದ ನೇರವಾಗಿ ಇಲ್ಲದಿದ್ದರೂ, ಅಭಿವ್ಯಕ್ತಿ ಸ್ವಾತಂತ್ರ್ಯವೇ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗಕ್ಕೆ ನಿಜವಾದ ಬಲ ನೀಡಿದೆ. 1975ರ ತುರ್ತು ಪರಿಸ್ಥಿತಿಯಂತಹ ಕರಾಳ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಿದಾಗಲೂ ಪತ್ರಿಕಾರಂಗ ಸತ್ಯ ಎತ್ತಿಹಿಡಿದಿತ್ತು. ಮಳೆ, ಬಿರುಗಾಳಿ, ಸಾಮಾಜಿಕ ಗಲಭೆಗಳಂತಹ ಕಠಿಣ ಸಂದರ್ಭಗಳಲ್ಲೂ ಪ್ರಾಣದ ಹಂಗು ತೊರೆದು, ಹೆಂಡತಿ-ತಂದೆಯ ಸಾವಿನಂತಹ ವೈಯಕ್ತಿಕ ದುಃಖದ ಸಮಯದಲ್ಲೂ ಕರ್ತವ್ಯ ಮರೆಯದೆ ನಿಖರ ಸುದ್ದಿ ತಲುಪಿಸುವ ಪತ್ರಕರ್ತರ ಬದುಕು ಅತ್ಯಂತ ಸವಾಲುಗಳಿಂದ ಕೂಡಿದೆ. ದೇಶ ಕಾಯುವ ಯೋಧರಂತೆ ಸಮಾಜ ಕಾಯುವ ಪತ್ರಕರ್ತರನ್ನು ಕೇವಲ ವರದಿಗಾರರನ್ನಾಗಿ ನೋಡದೆ, ಅವರಿಗೆ ಸೂಕ್ತ ರಕ್ಷಣೆ, ಗೌರವ ಹಾಗೂ ಸವಲತ್ತುಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

ತಾಲೂಕು ಪತ್ರಕರ್ತರ ಯಾದಿ ಬಿಡುಗಡೆಗೊಳಿಸಿ ಮಾತನಾಡಿದ ಉ.ಕ. ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿಯ ಅಧ್ಯಕ್ಷ ನರಸಿಂಹ ಅಡಿ, ಇಂದಿನ ದಿನಗಳಲ್ಲಿ ಪತ್ರಕರ್ತರ ಬದುಕು ಸವಾಲುಗಳಿಂದ ಕೂಡಿದೆ. ಬೆಳ್ಳಂಬೆಳಗ್ಗೆ ಸಂಭವಿಸುವ ಘಟನೆಗಳಿರಲಿ, ಪ್ರವಾಹ ಅಥವಾ ಯಾವುದೇ ಕಠಿಣ ಪರಿಸ್ಥಿತಿಯಿರಲಿ, ಪ್ರಾಣದ ಹಂಗು ತೊರೆದು ಮೊದಲು ಧಾವಿಸುವವರೇ ಪತ್ರಕರ್ತರು. ಸಮಾಜವನ್ನು ಸುಧಾರಿಸುವ ಮತ್ತು ಎಚ್ಚರಿಸುವ ಇಂತಹ ಜವಾಬ್ದಾರಿಯುತ ಪತ್ರಕರ್ತರನ್ನು ಸಮಾಜವು ಭಿನ್ನ ದೃಷ್ಟಿಯಿಂದ ನೋಡಬಾರದು. ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಉಳಿಸಿ ಬೆಳೆಸುವಲ್ಲಿ ಪತ್ರಿಕೆಗಳ ಕೊಡುಗೆ ಅನನ್ಯವಾಗಿದೆ. ಸುದ್ದಿಗಳ ನೈಜತೆಗೆ ಮುದ್ರಣ ಮಾಧ್ಯಮವೇ ಆಧಾರವಾಗಿದೆ ಎಂದರು.

ಪ್ರಾಂಶುಪಾಲ ಎಂ.ಕೆ. ನಾಯ್ಕ ಹೊಸಳ್ಳಿ, ಸಾಹಿತಿ ಜಿ.ಜಿ. ಹೆಗಡೆ ಬಾಳಗೋಡ, ತ್ಯಾಗಲಿ ಸಹಕಾರಿ ಸಂಘದ ನಿರ್ದೇಶಕ ಸಚ್ಚಿದಾನಂದ ಹೆಗಡೆ, ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಮಹೇಶ ಹೆಗಡೆ ಮಾತನಾಡಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ರೀನಾ ನಾಯಕ ಹಾಗೂ ಉ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಶ್ರೀಧರ ಹೆಗಡೆ ಉಪಸ್ಥಿತರಿದ್ದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ ಹೆಗಡೆ ಹಾರ್ಸಿಮನೆ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಪತ್ರಕರ್ತರ ಸಂಘದಿಂದ ಹಿರಿಯ ಪತ್ರಿಕಾ ವಿತರಕ ಮಧುಕರ ಹೆಗಡೆ ತ್ಯಾಗಲಿ, ಮಾತೃಭಾಷೆಯ ಅಭಿಮಾನಿ ಹಾಗೂ ದೇಶಾಭಿಮಾನಿ ಸುನೀಲ್ ಗುಡಿಗಾರ ಹಾಗೂ ಗುರುಮನೆ ದತ್ತಿನಿಧಿ ಪ್ರಶಸ್ತಿಯನ್ನು ರಂಗಕರ್ಮಿ, ಒಡ್ಡೋಲಗ ಸಂಸ್ಥೆಯ ಗಣಪತಿ ಹಿತ್ಲಕೈ ಮತ್ತು ಪ್ರಜ್ಞಾ ಹೆಗಡೆ ಅವರಿಗೆ ನೀಡಿ ಸನ್ಮಾನಿಸಲಾಯಿತು.

ಗಣೇಶ ಭಟ್ಟ ಸ್ವಾಗತಿಸಿದರು. ಸುಜಯ್ ಭಟ್ಟ ಮುತ್ತಿಗೆ ಕಾರ್ಯಕ್ರಮ ನಿರ್ವಹಿಸಿದರು. ಗಂಗಾಧರ ಕೊಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧನುಷ್ ಭಟ್ಟ, ನಿತಿನ್ ಹೆಗಡೆ ಮುತ್ತಿಗೆ ಹಾಗೂ ಕೆಕ್ಕಾರ ನಾಗರಾಜ ಭಟ್ಟ ಸನ್ಮಾನ ಪತ್ರ ವಾಚಿಸಿದರು.

ಉ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ಶ್ರೀಧರ ಹೆಗಡೆ ಮದ್ದಿನಕೇರಿ ವಂದಿಸಿದರು.