ನ್ಯಾಯಾಂಗ ವ್ಯವಸ್ಥೆಯ ವಿಕೇಂದ್ರೀಕರಣದಿಂದ ತಾಲೂಕು ಹಂತದಲ್ಲಿನ ವ್ಯಾಜ್ಯಗಳು ವೇಗವಾಗಿ ಬಗೆಹರಿಯಲಿವೆ.

ಕನಕಗಿರಿ: ಗ್ರಾಮೀಣ ಭಾಗದ ಜನರಿಗೆ ಕಾನೂನು ನೆರವು ಸಮೀಪದಲ್ಲಿಯೇ ದೊರೆಯುವ ನಿಟ್ಟಿನಲ್ಲಿ ನ್ಯಾಯಾಂಗ ಇಲಾಖೆ ಶ್ರಮಿಸುತ್ತಿದ್ದು, ರಾಜ್ಯದ ನಾನಾ ಕಡೆಗಳಲ್ಲಿ ನ್ಯಾಯಾಲಯಗಳ ಸ್ಥಾಪನೆ ಆಗಬೇಕಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಪೂಣಚ್ಚ ಹೇಳಿದರು.

ಅವರು ನ್ಯಾಯಾಂಗ ಇಲಾಖೆ, ಕೊಪ್ಪಳ ಮತ್ತು ಬಾರ್ ಅಸೋಸಿಯೇಷನ್ ಗಂಗಾವತಿ ಸಹಯೋಗದಲ್ಲಿ ಶುಕ್ರವಾರ ಪಟ್ಟಣದ ಎಪಿಎಂಸಿ ಆವರಣದ ಶ್ರಮಿಕ ಭವನದಲ್ಲಿ ನಡೆದ ಐಟಿನರರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದರು.

ನ್ಯಾಯಾಂಗ ವ್ಯವಸ್ಥೆಯ ವಿಕೇಂದ್ರೀಕರಣದಿಂದ ತಾಲೂಕು ಹಂತದಲ್ಲಿನ ವ್ಯಾಜ್ಯಗಳು ವೇಗವಾಗಿ ಬಗೆಹರಿಯಲಿವೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಮಯ ಹಾಗೂ ಹಣದ ಉಳಿತಾಯವಾಗಲಿದೆ. ಕನಕಗಿರಿ ಭಾಗದ ಜನರು ಸಣ್ಣಪುಟ್ಟ ಕಾನೂನು ವ್ಯವಹಾರಗಳಿಗೂ ದೂರದ ನಗರಗಳಿಗೆ ಅಲೆಯುವುದನ್ನು ತಪ್ಪಿಸಲು ಈ ನ್ಯಾಯಾಲಯ ಅನುಕೂಲವಾಗಲಿದೆ. ಅಲ್ಲದೇ ಸ್ಥಳೀಯ ಮಟ್ಟದಲ್ಲಿಯೇ ನ್ಯಾಯ ಸಿಗಲಿದೆ. ಗ್ರಾಮೀಣ ಭಾಗದ ಜನರಲ್ಲಿ ಕಾನೂನಿನ ಅರಿವು ಮೂಡಿಸುವುದು ಮತ್ತು ನ್ಯಾಯದಾನ ಪ್ರಕ್ರಿಯೆ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವುದು ಇಂದಿನ ಆಧುನಿಕತೆಯಲ್ಲಿ ಅಗತ್ಯವಾಗಿದೆ. ವಕೀಲರು ಮತ್ತು ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಸಾರ್ವಜನಿಕರಿಗೆ, ವಿಶೇಷವಾಗಿ ಬಡ ಮತ್ತು ಶೋಷಿತ ವರ್ಗದವರಿಗೆ ಸಕಾಲದಲ್ಲಿ ನ್ಯಾಯ ಒದಗಿಸಲು ಶ್ರಮಿಸಬೇಕು ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಮಾತನಾಡಿ, ನ್ಯಾಯಾಲಯಗಳು ಕೇವಲ ಕಾನೂನು ಪಾಲನೆಯ ಕೇಂದ್ರಗಳಲ್ಲ, ಅವು ಸಾಮಾನ್ಯ ಜನರ ಹಕ್ಕು ರಕ್ಷಿಸುವ ಪವಿತ್ರ ತಾಣಗಳಾಗಿವೆ. ಕನಕಗಿರಿಯಲ್ಲಿ ಸಂಚಾರಿ ನ್ಯಾಯಾಲಯ ಆರಂಭವಾಗಿರುವುದರಿಂದ ಕಕ್ಷಿದಾರರಿಗೆ ಹಣ ಮತ್ತು ಸಮಯ ಎರಡೂ ಉಳಿತಾಯವಾಗಲಿದೆ. ಅಲ್ಲದೇ ಗ್ರಾಹಕರ ನ್ಯಾಯಾಲಯ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕುಕನೂರು ಮತ್ತು ಕಾರಟಗಿ ತಾಲೂಕಿನ ನ್ಯಾಯಾಲಯಗಳ ಹೊಸ ಕಟ್ಟಡ ನಿರ್ಮಿಸಲು ತಲಾ ₹9 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರಲ್ಲದೇ ಈ ನ್ಯಾಯಾಲಯ ಸ್ಥಾಪಿಸಲು ಸಹಕರಿಸಿದ ಶಾಸಕ ಶಿವರಾಜ ತಂಗಡಗಿ, ಜಿಲ್ಲಾಧಿಕಾರಿ, ಎಪಿಎಂಸಿ ಕಾರ್ಯದರ್ಶಿ ಹಾಗೂ ಶ್ರಮಿಕರು ಮತ್ತು ವಕೀಲರಿಗೆ ಧನ್ಯವಾದ ಅರ್ಪಿಸಿದರು.

ನಾಗರಿಕರಿಂದ ಗೌರವ ಸನ್ಮಾನ:

ಕನಕಗಿರಿಯಲ್ಲಿ ಸಂಚಾರಿ ನ್ಯಾಯಾಲಯ ಸ್ಥಾಪನೆಗೆ ಶ್ರಮಿಸಿದ ನ್ಯಾಯಾಧೀಶರು, ಜಿಲ್ಲಾಡಳಿತ, ಶಾಸಕರಿಗೆ, ವಕೀಲರ ಸಂಘದ ಪದಾಧಿಕಾರಿಗಳಿಗೆ ತಾಲೂಕಿನ ಜನತೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಸ್ಥಳೀಯ ನ್ಯಾಯಾಧೀಶರಾದ ರೋಷನಿ ಪಾಟೀಲ್, ಗಂಗಾವತಿ ವಕೀಲರ ಸಂಘದ ಅಧ್ಯಕ್ಷ ಶರಣಬಸಪ್ಪ ನಾಯಕ, ಜಿಪಂ ಸಿಇಒ ವರ್ಣಿತ್ ನೇಗಿ, ಎಪಿಎಂಸಿ ಕಾರ್ಯದರ್ಶಿ ಸಾವಿತ್ರಿ ಪಾಟೀಲ್, ಕೆಆರ್‌ಐಡಿಎಲ್ ಎಂಜಿನಿಯರ್ ಅನಿಲ್ ಪಾಟೀಲ್, ವಕೀಲರಾದ ವೈಜನಾಥಸ್ವಾಮಿ, ವಿ.ಎನ್.ಪಾಟೀಲ್, ನಾಗನಗೌಡ, ಅಮರೇಶ ಪಟ್ಟಣಶೆಟ್ಟಿ, ಶರಣೇಗೌಡ ಪಾಟೀಲ್, ನಾಗರಾಜ ಗುತ್ತೆದಾರ, ಗಂಗಾಧರ, ನಾಗರಾಜ ಬೂದಿ, ಹನುಮೇಶ ಹೆಬ್ಬುಲಿ, ನಾಗರಾಜ ಗದ್ದಿ, ರಾಮಣ್ಣ ಹುಲಿಹೈದರ, ಮಾರುತಿ ಮೆತಗಲ್, ರಮೇಶ ಪಾಲಿ, ನಿಂಗೇಶ ತಳವಾರ, ನಿರುಪಾದಿ ಚಿಂಚಲಿ, ಹನುಮೇಶ ಜೀರಾಳ, ಕರಿಯಪ್ಪ ನಾಯಕ, ಮಾಬುಹುಸೇನ, ರಾಜಾಹುಸೇನ್‌, ಉಮೇಶ ಲಾಯದುಣಸಿ ಸೇರಿದಂತೆ ಇತರರು ಇದ್ದರು.

ಕನಕಗಿರಿಯ ಜನತೆಗೆ ಸ್ಥಳೀಯವಾಗಿಯೇ ಕಾನೂನು ಸೇವೆ ಮತ್ತು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಈ ಹೊಸ ಸಂಚಾರಿ ನ್ಯಾಯಾಲಯದ ಸ್ಥಾಪನೆ ಒಂದು ಮೈಲಿಗಲ್ಲಾಗಿದೆ. ಗ್ರಾಮೀಣ ಮತ್ತು ತಾಲೂಕು ಮಟ್ಟದ ಜನರಿಗೆ ನ್ಯಾಯಾಂಗ ವ್ಯವಸ್ಥೆಯು ಮತ್ತಷ್ಟು ಹತ್ತಿರವಾಗಲಿದೆ. ಬಡವರಿಗೆ ಉಚಿತ ಕಾನೂನು ಸೇವೆ ನೀಡಲು ಯುವ ವಕೀಲರು ಮುಂದಾಗಬೇಕು. ನ್ಯಾಯಾಂಗ ವ್ಯವಸ್ಥೆಯು ಸಾಮಾನ್ಯ ಜನರ ಮನೆ ಬಾಗಿಲಿಗೆ ತಲುಪಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಈಡೇರಲು ಸಾಧ್ಯ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಮಾಜಿ ಅಧ್ಯಕ್ಷ ಎನ್.ಎಸ್ ಪಾಟೀಲ್ ತಿಳಿಸಿದ್ದಾರೆ.

ಸ್ಥಳೀಯ ಮಟ್ಟದಲ್ಲಿ ನ್ಯಾಯಾಲಯಗಳು ಕಾರ್ಯಾರಂಭ ಮಾಡುವುದರಿಂದ ಸಾರ್ವಜನಿಕರಿಗೆ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದ ಜನರಿಗೆ ಕರಾರುವಕ್ಕಾದ ಸಮಯಕ್ಕೆ ನ್ಯಾಯ ಸಿಗಲು ಸಹಕಾರಿಯಾಗುತ್ತದೆ. ಜನರು ತಮ್ಮ ಕಾನೂನಾತ್ಮಕ ಸಮಸ್ಯೆ ಪರಿಹಾರಕ್ಕಾಗಿ ದೂರದ ನಗರಗಳಿಗೆ ಅಲೆಯುವುದು ತಪ್ಪುತ್ತದೆ. ಈ ನೂತನ ಸಂಚಾರಿ ನ್ಯಾಯಾಲಯಕ್ಕೆ ಶಾಸಕರು ಸರ್ಕಾರದಿಂದ ಅನುದಾನ ಕೊಡಿಸಿದ್ದಾರೆ. ಜಿಲ್ಲಾ ಪ್ರಧಾನ ನ್ಯಾಯಾಧೀಶರ ಶ್ರಮದಿಂದ ಕನಕಗಿರಿ ಹೊಸ ನ್ಯಾಯಾಲಯ ಕಾರ್ಯಾರಂಭವಾಗುತ್ತಿರುವುದು ತೃಪ್ತಿ ತಂದಿದೆ ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ತಿಳಿಸಿದ್ದಾರೆ.