ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್‌ಗೆ ಡಿಕೆ, ಬಿಕೆ, ಸಿದ್ದು ಇಂದು ದೆಹಲಿಗೆ

Published : Jul 27, 2026, 05:08 AM ISTUpdated : Jul 27, 2026, 05:10 AM IST
BK Hariprasad

ಸಾರಾಂಶ

ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಿಡಬ್ಲ್ಯುಸಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಹೈಕಮಾಂಡ್‌ ನಾಯಕರೊಂದಿಗೆ  ಮಹತ್ವದ ಸಭೆ ನಡೆಸಲಿದ್ದಾರೆ.

 ಬೆಂಗಳೂರು :  ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಿಡಬ್ಲ್ಯುಸಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಹೈಕಮಾಂಡ್‌ ನಾಯಕರೊಂದಿಗೆ ಸೋಮವಾರ ಇಲ್ಲವೇ ಮಂಗಳವಾರ ಮಹತ್ವದ ಸಭೆ ನಡೆಸಲಿದ್ದಾರೆ.

ಹೈಕಮಾಂಡ್‌ ನಾಯಕರೊಂದಿಗೆ ಸಭೆಗೆ ಇನ್ನೂ ನಿರ್ದಿಷ್ಟ ಸಮಯ ನಿಗದಿಯಾಗಿಲ್ಲ, ಸೋಮವಾರ ನಿಗದಿಯಾಗಲಿದೆ. ಒಂದು ವೇಳೆ ಸೋಮವಾರ ಸಮಯ ನಿಗದಿಯಾಗದಿದ್ದಲ್ಲಿ ಮಂಗಳವಾರ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಹೈಕಮಾಂಡ್‌ ಬುಲಾವ್‌ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯೇ ಮೂವರೂ ನಾಯಕರು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌, ರಣದೀಪ್‌ ಸುರ್ಜೇವಾಲ ಅವರೊಂದಿಗೆ ರಾಜ್ಯ ನಾಯಕರು ದೆಹಲಿಯಲ್ಲಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲಿದ್ದಾರೆ. ಈಗಾಗಲೇ ಹಿಂದೆ ನಡೆದಿರುವ ಪೂರ್ವಭಾವಿ ಸಭೆಗಳಲ್ಲಿ ರಾಜ್ಯ ನಾಯಕರು ಮತ್ತು ಎಐಸಿಸಿ ನಾಯಕರು ಪ್ರತ್ಯೇಕವಾದ ಸಂಭಾವ್ಯ ಸಚಿವರ ಪಟ್ಟಿಗಳನ್ನು ನೀಡಿದ್ದಾರೆ. ಸೋಮವಾರದ ಸಭೆಯಲ್ಲಿ ಈ ಪಟ್ಟಿಗಳನ್ನು ಪರಿಶೀಲಿಸಿ ಜಿಲ್ಲಾವಾರು ಹಾಗೂ ಸಮುದಾಯವಾರು ಪ್ರಾತಿನಿಧ್ಯ ಅನುಸರಿಸಿ ಹೈಕಮಾಂಡ್‌ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ದಿನಾಂಕವೂ ನಿಗದಿ ಸಾಧ್ಯತೆ:

ಜೊತೆಗೆ ಸಂಪುಟ ವಿಸ್ತರಣೆಗೆ ಸಭೆಯಲ್ಲಿ ದಿನಾಂಕ ನಿಗದಿಪಡಿಸುವ ಸಾಧ್ಯತೆಯೂ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬುಧವಾರ ನೂತನ ಸಚಿವರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

13 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದ ಸಂಪುಟದಲ್ಲಿ ಜೂ.3ರಂದು 13 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಈ ವೇಳೆ ಯಾವ್ಯಾವ ಜಿಲ್ಲೆ, ಸಮುದಾಯಗಳಿಗೆ ಪ್ರಾತಿನಿದ್ಯ ದೊರಕಿದೆಯೋ ಅದನ್ನು ಬಿಟ್ಟು ಉಳಿದ ಜಿಲ್ಲೆ, ಸಮುದಾಯಗಳಿಗೆ ಈಗಿನ ಸಂಪುಟ ವಿಸ್ತರಣೆಯಲ್ಲಿ ಆದ್ಯತೆ ನೀಡಲಾಗುತ್ತದೆ. ಇನ್ನು, ಕೆಲ ಪ್ರಬಲ ಸಮುದಾಯ ಹಾಗೂ ಜಿಲ್ಲೆಗಳಿಗೆ ಹೆಚ್ಚುವರಿ ಅವಕಾಶ ಸಿಗುವ ಸಾಧ್ಯತೆ ಇದೆ.

ಕಳೆದ ವಾರ ರಾಜ್ಯ ನಾಯಕರು ವರಿಷ್ಠರ ಭೇಟಿಗೆ ದೆಹಲಿಗೆ ತೆರಳಿದ್ದರಾದರೂ ನೀಟ್‌ ಅಕ್ರಮ ಖಂಡಿಸಿ ಕಾಕ್ರೋಚ್‌ ಜನತಾ ಪಾರ್ಟಿ ನಡೆಸುತ್ತಿದ್ದ ಹೋರಾಟ ಬೆಂಬಲಿಸಿ ರಾಹುಲ್‌ ಗಾಂಧಿ, ಪ್ರಿಯಾಂಕ್‌ ಗಾಂಧಿ ಸೇರಿ ಕಾಂಗ್ರೆಸ್‌ ನಾಯಕರೂ ಹೋರಾಟ ನಡೆಸಿದ್ದರಿಂದ ಚರ್ಚೆ ಸಾಧ್ಯವಾಗಿರಲಿಲ್ಲ. ಇದೀಗ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಯಿಂದ ಹೋರಾಟಕ್ಕೆ ವಿರಾಮ ದೊರಕಿರುವುದರಿಂದ ವರಿಷ್ಠರು ರಾಜ್ಯ ನಾಯಕರಿಗೆ ದೆಹಲಿಗೆ ಬರುವಂತೆ ಆಹ್ವಾನಿಸಿದ್ದರು. ಹೀಗಾಗಿ ಈ ಬಾರಿ ಬಹುತೇಕ ಸಂಪುಟ ವಿಸ್ತರಣೆಗೆ ಪಟ್ಟಿ ಅಂತಿಮಗೊಳಿಸಿ, ದಿನಾಂಕವೂ ನಿಗದಿಯಾಗಲಿದೆ ಎಂದು ತಿಳಿದು ಬಂದಿದೆ.

ದಿಲ್ಲೀಲಿಂದು ರಾಜ್ಯ ಎಂಪಿಗಳ ಜತೆ ಸಿಎಂ ಸಭೆ

 ಕೇಂದ್ರ ಸರ್ಕಾರದಲ್ಲಿ ಬಾಕಿ ಇರುವ ರಾಜ್ಯದ ಯೋಜನೆಗಳು ಸೇರಿ ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕರ್ನಾಟಕದ ಎಲ್ಲಾ ಸಂಸದರು, ರಾಜ್ಯಸಭಾ ಸದಸ್ಯರೊಂದಿಗೆ ನವದೆಹಲಿಯಲ್ಲಿ ಸೋಮವಾರ ಸಂಜೆ ಸಭೆ ನಡೆಸಲಿದ್ದಾರೆ.

ಸೋಮವಾರ ಬೆಳಗ್ಗೆಯೇ ಬೆಂಗಳೂರಿನಿಂದ ದೆಹಲಿಗೆ ತೆರಳುವ ಮುಖ್ಯಮಂತ್ರಿ ಅವರು, ಸಂಜೆ ಸಂಸದರೊಂದಿಗೆ ಸಭೆ ನಡೆಸಲಿದ್ದಾರೆ. ಈ ವೇಳೆ ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ, ಜಲಾಶಯಗಳಲ್ಲಿ ನೀರಿನ ಕ್ಷಾಮ, ಕಾವೇರಿ ನೀರಿನ ವಿಚಾರದ ಬಗ್ಗೆಯೂ ಚರ್ಚೆ ನಡೆಸಲಿದ್ದು, ಸಂಸತ್‌ ಅಧಿವೇಶನದಲ್ಲಿ ರಾಜ್ಯದ ಪರವಾಗಿ ದನಿ ಎತ್ತಲು ಸಂಸದರಿಗೆ ಮುಖ್ಯಮಂತ್ರಿ ಅವರು ಕೋರಲಿದ್ದಾರೆ. ಜೊತೆಗೆ ಪ್ರಧಾನಿ ಅವರ ಬಳಿಗೆ ಸರ್ವಪಕ್ಷ ನಿಯೋಗ ತೆರಳುವ ಕುರಿತೂ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಮುಖ್ಯಮಂತ್ರಿ ಅವರ ಕಚೇರಿಯಿಂದ ಎಲ್ಲ ಸಂಸದರಿಗೂ ಪತ್ರದ ಮೂಲಕ ಸಭೆಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಲ್ಲಿ ರಾಜ್ಯಕ್ಕೆ ಸಂಬಂದಿಸಿದ ಬಾಕಿ ಇರುವ ಪ್ರಸ್ತಾವನೆಗಳು ಹಾಗೂ ರಾಜ್ಯದ ಒಟ್ಟಾರೆ ಅಭಿವೃದ್ದಿಯ ಕುರಿತು ಕೇಂದ್ರದ ಸಹಕಾರ ಒದಗಿಸುವ ಕುರಿತು ಚರ್ಚಿಸಲು ಸೋಮವಾರ ಸಂಜೆ 6.30ಕ್ಕೆ ನವದೆಹಲಿಯ ಕರ್ನಾಟಕ ಭವನ -1(ಕಾವೇರಿ)ರಲ್ಲಿ ಸಭೆ ಆಯೋಜಿಸಲಾಗಿದೆ. ಸಭೆಗೆ ಎಲ್ಲರೂ ಆಗಮಿಸಿ ತಮ್ಮ ಅಮೂಲ್ಯ ಸಲಹೆ, ಸೂನಚೆಗಳನ್ನು ನೀಡಬೇಕೆಂದು ಪತ್ರದಲ್ಲಿ ಕೋರಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬರ ಸ್ಥಿತಿ ವಿವರಣೆಗೆ ಸರ್ವಪಕ್ಷ ನಿಯೋಗ : ಡಿಕೆಶಿ
ಪ್ರಶ್ನೆಪತ್ರಿಕೆ ಲೀಕ್‌ಗೆ 10 ವರ್ಷ ಜೈಲು, ₹10 ಕೋಟಿ ದಂಡ : ನಾಳೆ ಬಿಲ್‌ ಮಂಡನೆ