ಬೆಂಗಳೂರು : ‘ಸ್ಟಿಂಗ್ ಆಪರೇಷನ್ ತನಿಖೆ ಕುರಿತು ಪೊಲೀಸ್ ಕಮಿಷನರ್ ಹೆಡ್ ಕ್ಲರ್ಕ್ಗಿಂತ ಕಡೆಯಾಗಿ ಹೇಳಿಕೆ ನೀಡಿದ್ದಾರೆ. ಸ್ಟಿಂಗ್ ಆಪರೇಷನ್ ಯಾರಿಗೆ ತಿರುಗುಬಾಣ ಆಗಲಿದೆ ಎಂಬುದನ್ನು ಸೋಮವಾರ ಬಹಿರಂಗಪಡಿಸುತ್ತೇನೆ’ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.
ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಬಗ್ಗೆ ರಹಸ್ಯ ಮಾಹಿತಿಗಳನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೋರಿಕೆ ಮಾಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ನನ್ನ ವಿರುದ್ಧ ಹಗೆ ಸಾಧಿಸುತ್ತಿದೆ ಎಂದು ಕಿಡಿಕಾರಿದರು.
ಪೊಲೀಸ್ ಆಯುಕ್ತರು ತಮ್ಮ ಹುದ್ದೆ ಉಳಿಸಿಕೊಳ್ಳಲು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಇಲಾಖೆ ಒಳಗೆ ಏನೇನು ನಡೆಯುತ್ತಿದೆ ಎಂಬುದನ್ನು ನಾನು ಹೇಳುತ್ತೇನೆ. ಸೋಮವಾರ ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತೇನೆ ಎಂದು ತೀಕ್ಷ್ಣವಾಗಿ ಹೇಳಿದರು
ಯಾರ್ರೀ ಅದು ಪೊಲೀಸ್ ಕಮಿಷನರ್? ಅವರು ಪೊಲೀಸ್ ಕಮೀಷನರಾ? ಹೆಡ್ ಕ್ಲರ್ಕ್ಗಿಂತ ಕಡೆಯಾಗಿ ಹೇಳಿಕೆ ಕೊಟ್ಟಿದ್ದಾರೆ. ಅವರು ಯಾರ ಹಂಗಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನನ್ನು ಮುಟ್ಟುವುದು ಸುಲಭವಲ್ಲ:
ನಮ್ಮ ಬಗ್ಗೆ ಯಾರೂ ಗಾಬರಿ ಆಗಬೇಕಿಲ್ಲ. ಸ್ಟಿಂಗ್ ಆಪರೇಷನ್ ಬಗ್ಗೆ ತನಿಖೆ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಮತ್ತು ಯಾವ ಮಟ್ಟಕ್ಕೆ ಹೋಗುತ್ತಿದೆ ಎಂಬುದು ನನಗೆ ತಿಳಿದಿದೆ. ಈ ಸರ್ಕಾರದ ಆಡಳಿತ ಯಾವ ರೀತಿ ಇದೆ ಎಂಬುದನ್ನೂ ಹೇಳುತ್ತೇನೆ. ಈ ಕುಮಾರಸ್ವಾಮಿಯನ್ನು ಈ ಸರ್ಕಾರ, ಈ ಅಧಿಕಾರಿಗಳು ಟಚ್ ಮಾಡಲು ಆಗಲ್ಲ. ಕುಮಾರಸ್ವಾಮಿಯನ್ನು ಅಷ್ಟು ಸುಲಭವಾಗಿ ಇವರು ಎದುರಿಸಲು ಆಗಲ್ಲ ಎಂದು ಹರಿಹಾಯ್ದರು.
ಸರ್ಕಾರ ಯಾರನ್ನೆಲ್ಲ ರಕ್ಷಣೆ ಮಾಡುತ್ತಿದೆ ಎಂಬುದನ್ನು ಬಲ್ಲೆ
ಈ ಸರ್ಕಾರ ಯಾರನ್ನೆಲ್ಲ ರಕ್ಷಣೆ ಮಾಡುತ್ತಿದೆ ಎಂಬುದನ್ನು ಬಲ್ಲೆ. ಸಿದ್ದರಾಮಯ್ಯ ಅವರು ಯಾಕೆ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಯತೀಂದ್ರ ಸಿದ್ದರಾಮಯ್ಯ ತಮ್ಮ ಪಕ್ಷದವರೇ ಸ್ಟಿಂಗ್ ಮಾಡಿದ್ದಾಗಿ ಹೇಳಿದ್ದಾರೆ ಎಂದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟ್ರೈಲರ್ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಇದೆಲ್ಲಾ ಯಾವ ಟ್ರೈಲರ್? ನಾನು ಸಿನಿಮಾ ಮಾಡಿರೋನು. ಇವರು ಈಗ ಸಿನಿಮಾ ಮಾಡೋಕೆ ಶುರು ಮಾಡಿದ್ದಾರೆ. ಇವರ ಸಿನಿಮಾ ಬಗ್ಗೆ ಸೋಮವಾರ ನಾನು ವಿವರವಾಗಿ ಹೇಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
