ಹಲವಾರು ಸಂದರ್ಭಗಳಲ್ಲಿ ನಮ್ಮ ರಾಷ್ಟ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಟೀಕೆ ಮಾಡುತ್ತೀರಿ. ಇತ್ತೀಚೆಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಅವರನ್ನು ಏಕ ವಚನದಲ್ಲಿ ಟೀಕಿಸುತ್ತೀರಿ. ನಮಗೂ ಸಹ ನಿಮಗಿಂತಲೂ ಹೆಚ್ಚಾಗಿ ಏಕವಚನ ಪ್ರಯೋಗಿಸಲು ತಿಳಿದಿದೆ. ಆದರೆ, ನಾವು ಅಂತಹ ದಾರಿ ಹಿಡಿಯುವುದಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಸ್ಟಿಂಗ್ ಆಪರೇಷ್ ಷಡ್ಯಂತ್ರ ಸೃಷ್ಟಿಸಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಒಡಕು ಮೂಡಿಸುವ ತಂತ್ರ ಯಾವುದೇ ಕಾರಣಕ್ಕೂ ಫಲಿಸುವುದಿಲ್ಲ. ಅದಕ್ಕೆ ನೀವೇ ಬಲಿಯಾಗುತ್ತೀರಿ ಎಂದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಎಚ್ಚರಿಕೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ವತಿಯಿಂದ ನಗರದ ಮಂಡ್ಯ ವಿವಿ ಆವರಣದಲ್ಲಿ ನಡೆದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಆಪರೇಷನ್ ಮಾಡಿ ಅದರಲ್ಲಿ ಡಿ.ಕೆ.ಶಿವಕುಮಾರ್ ಅವರನ್ನೂ ಸಿಲುಕಿಸಲು ತಂತ್ರ ನಡೆಸಿದ್ದೀರಿ. ಅದು ಎಂದಿಗೂ ಸಾಧ್ಯವಾಗದು ಎಂದರು.
ಹಲವಾರು ಸಂದರ್ಭಗಳಲ್ಲಿ ನಮ್ಮ ರಾಷ್ಟ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಟೀಕೆ ಮಾಡುತ್ತೀರಿ. ಇತ್ತೀಚೆಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಅವರನ್ನು ಏಕ ವಚನದಲ್ಲಿ ಟೀಕಿಸುತ್ತೀರಿ. ನಮಗೂ ಸಹ ನಿಮಗಿಂತಲೂ ಹೆಚ್ಚಾಗಿ ಏಕವಚನ ಪ್ರಯೋಗಿಸಲು ತಿಳಿದಿದೆ. ಆದರೆ, ನಾವು ಅಂತಹ ದಾರಿ ಹಿಡಿಯುವುದಿಲ್ಲ ಎಂದು ಎಚ್ಚರಿಸಿದರು.ಕರಾವಳಿಯಲ್ಲಿ ಕಿಚ್ಚು ಹಚ್ಚಲು ಬಿಡಲ್ಲ:
ಕರಾವಳಿ ಭಾಗದಲ್ಲಿ ಬಿಜೆಪಿಯವರು ಕಿಚ್ಚು ಹೊತ್ತಿಸಿ ಬಿಜೆಪಿ ಲಾಭ ಮಾಡಿಕೊಳ್ಳಲು ಮುಂದಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರು ಭಾಗಕ್ಕೆ ಹೆಚ್ಚುವರಿ ಅನುದಾನ ನೀಡಿ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಜೊತೆಗೆ ತುಳು ಭಾಷೆಗೆ ಅಂತಾರಾಷ್ಟ್ರೀಯ ಮಾನ್ಯತೆ ನೀಡಿದ್ದಾರೆ ಎಂದು ಬಿಜೆಪಿಯವರಿಗೆ ತಿರುಗೇಟು ನೀಡಿದರು.ಮೇಕೆದಾಟಿ ಯೋಜನೆಯ ಕನಸು ಕಂಡವರು ಡಿ.ಕೆ.ಶಿವಕುಮಾರ್ ಅವರು, ಅದಕ್ಕಾಗಿ ಹೋರಾಟವನ್ನೂ ಮಾಡಿದ್ದೇವೆ. ಕೇಂದ್ರ ಸಚಿವರು ತಾವು ಅಕಾರಕ್ಕೆ ಬಂದರೆ ಐದೇ ನಿಮಿಷದಲ್ಲಿ ಅನುಮತಿ ಕೊಡಿಸುವುದಾಗಿ ಹೇಳಿ ಈವರೆವಿಗೂ ಅನುಮತಿ ಕೊಡಿಸಲಿಲ್ಲ. ನಿತ್ಯ ಡಿ.ಕೆ.ಶಿ.ಯವರನ್ನು ಟೀಕಿಸುವುದೇ ಕಾಯಕವಾಗಿ ಮಾಡಿಕೊಂಡಿದ್ದೀರಿ. ಮೇಕೆದಾಟು ಯೋಜನೆಯಿಂದ ಶಿಂಷಾವರೆವಿಗೂ ನೀರು ಇರುತ್ತದೆ ಎಂಬುದನ್ನು ಜಿಲ್ಲೆಯ ಜನತೆ ಅರ್ಥ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಮೈಸೂರು ಮಹಾರಾಜರು ಅಣೆಕಟ್ಟೆ ಕಟ್ಟದಿದ್ದರೆ ಮಂಡ್ಯ ಇಷ್ಟೊಂದು ವೈಭವವಾಗಿ ಇರುತ್ತಿರಲಿಲ್ಲ. ಅವರು ಕೆ.ಆರ್.ಎಸ್. ಹಾಗೂ ನಾಲೆಗಳ ನಿರ್ಮಾಣ ಮಾಡಿದರು. ನಂತರ ಬಂದ ಬಿಜೆಪಿ, ಜೆಡಿಎಸ್ನವರು ನಾಲಾ ಆಧುನೀಕರಣ ಮಾಡಲಿಲ್ಲ. ಇದನ್ನರಿತ ಡಿ.ಕೆ.ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ ನಾಲಾ ಆಧುನೀಕರಣಕ್ಕೆ ಚಾಲನೆ ನೀಡಿದರು. ಅಲ್ಲಿಯವರೆಗೆ ಇವರ ಕಣ್ಣಿಗೆ ಕಾಣಲಿಲ್ಲವೇ, ನಾವೇ ಅಕಾರಕ್ಕೆ ಬರಬೇಕಾಯಿತೇ ಎಂದು ಪ್ರಶ್ನಿಸಿದರು.ಈ ಹಿಂದೆ ಅಧಿಕಾರದಲ್ಲಿದ್ದ ಜೆಡಿಎಸ್ನವರು ನಮ್ಮನ್ನು ಅಶಕ್ತರು, ಅವರಿಂದ ಏನೂ ಆಗುವುದಿಲ್ಲ ಎಂದು ಮೂದಲಿಸುತ್ತಿದ್ದರು. ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ನಮಗೆ ಧೈರ್ಯ ತುಂಬಿ ಚುನಾವಣಾ ಪೂರ್ವದಲ್ಲಿ ಏನೆಲ್ಲಾ ಮಾಡಬೇಕು ಹಾಗೂ ಕಾರ್ಯಕರ್ತರು ಹೇಗೆ ಕೆಲಸ ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿದ್ದರು ಎಂದು ವಿವರಿಸಿದರು.