ನಿವೇಶನಕ್ಕೆ ಜಾಗ ಗುರುತಿಸುವ ಕಾರ್ಯದಲ್ಲಿ ಪುತ್ತೂರು ಕ್ಷೇತ್ರ ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿದ್ದು, ನಿವೇಶನ ರಹಿತರು ಯಾವುದೇ ಗ್ರಾಮದವರಾಗಿದ್ದರೂ, ಅವರಿಗೆ ಇತರ ಯಾವುದೇ ಗ್ರಾಮದಲ್ಲಿ ಜಾಗ ಲಭ್ಯವಿದ್ದರೆ ನಿವೇಶನ ಕೊಡಬಹುದು ಎಂಬುದನ್ನು ತಾನೇ ಸರಕಾರದ ಗಮನಕ್ಕೆ ತಂದು ಸಿಎಂ ಅನುಮತಿಯನ್ನು ಪಡೆಯಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರು; ನಿವೇಶನಕ್ಕೆ ಜಾಗ ಗುರುತಿಸುವ ಕಾರ್ಯದಲ್ಲಿ ಪುತ್ತೂರು ಕ್ಷೇತ್ರ ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿದ್ದು, ನಿವೇಶನ ರಹಿತರು ಯಾವುದೇ ಗ್ರಾಮದವರಾಗಿದ್ದರೂ, ಅವರಿಗೆ ಇತರ ಯಾವುದೇ ಗ್ರಾಮದಲ್ಲಿ ಜಾಗ ಲಭ್ಯವಿದ್ದರೆ ನಿವೇಶನ ಕೊಡಬಹುದು ಎಂಬುದನ್ನು ತಾನೇ ಸರಕಾರದ ಗಮನಕ್ಕೆ ತಂದು ಸಿಎಂ ಅನುಮತಿಯನ್ನು ಪಡೆಯಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಶನಿವಾರ ಪುತ್ತೂರು ತಾ.ಪಂ.ಸಭಾಂಗಣದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ನಿವೇಶನ ಹಂಚಿಕೆಗೆ ಸಂಬಂಧಿಸಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದಲ್ಲಿ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ಕೊಡುವ ಕಾರ್ಯಕ್ಕೆ ಮುಖ್ಯಮಂತ್ರಿಗಳು ಆದೇಶ ನೀಡಿದ್ದು, ಪ್ರತಿ ಜಿಲ್ಲೆಯಲ್ಲೂ ಸುಮಾರು 50 ಸಾವಿರ ಕುಟುಂಬಗಳಿಗೆ ನಿವೇಶನ ಹಂಚಿಕೆಯ ಯೋಜನೆ ಹಾಕಿಕೊಳ್ಳಲಾಗಿದೆ. ಅದಕ್ಕಾಗಿ ಜಿಲ್ಲಾಧಿಕಾರಿಗಳಿಗೆ 2 ತಿಂಗಳಲ್ಲಿ ಜಾಗ ಗುರುತಿಸಿ ಲೇಔಟ್ ಅನುಮೋದನೆ ಪಡೆಯಲು ಆದೇಶಿಸಲಾಗಿದೆ. ಈ ಕಾರ್ಯದಲ್ಲಿ ನೈಜ ಫಲಾನುಭವಿಗಳನ್ನು ಗುರುತಿಸಿ ಅದನ್ನು ರಾಜೀವ ಗಾಂಧಿ ವಸತಿ ನಿಗಮದ ಪೋರ್ಟಲ್ ಗೆ ಅಪ್ ಲೋಡ್ ಮಾಡಬೇಕಿದೆ.ಜತೆಗೆ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಫಲಾನುಭವಿಗಳು ಇಲ್ಲದೇ ಇದ್ದಾಗ ಅಂತಹ ನಿವೇಶನಗಳನ್ನು ಇತರರಿಗೆ ನೀಡಬಹುದು ಎಂಬುದನ್ನೂ ಸರಕಾರದ ಗಮನಕ್ಕೆ ತರಲಾಗಿದೆ. ನಿವೇಶನ ರಹಿತರಿಗೆ ಸರಕಾರದ ನಿವೇಶನ ಹಂಚಿಕೆ ಮಾಡುವ ಸಂದರ್ಭದಲ್ಲಿ ವಸತಿ ಯೋಗ್ಯ ಜಾಗಗಳನ್ನೇ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಆದ್ಯತೆ ನೀಡಬೇಕಿದ್ದು, ಅಂತಹ ನಿವೇಶನಗಳಿಗೆ ಆದ್ಯತೆಯ ನೆಲೆಯಲ್ಲಿ ರಸ್ತೆ, ನೀರಿನ ಸಂಪರ್ಕ ಒದಗಿಸುವುದಕ್ಕೆ ಅನುದಾನಗಳನ್ನು ಕೊಡುವ ಕಾರ್ಯ ಮಾಡಲಾಗುವುದು ಎಂದರು.

ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ರು. ಕೋಟಿ ಅನುದಾನ ಬಂದಿದ್ದು, ಅದನ್ನು ಪ್ರತಿ ಗ್ರಾ.ಪಂ.ಗಳಿಗೆ ಹಂಚಿಕೆ ಮಾಡಿ ಇಂತಹ ನಿವೇಶನಗಳ ಜಾಗಕ್ಕೆ ಪೈಪುಲೈನ್ ಮಾಡುವ ಕಾರ್ಯಕ್ಕೆ ಆದ್ಯತೆಯ ನೆಲೆಯಲ್ಲಿ ಬಳಕೆ ಮಾಡಬೇಕು. ಪುತ್ತೂರು ಕ್ಷೇತ್ರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಡಿಸೆಂಬರ್ ನಲ್ಲಿ ಒಂದಷ್ಟು ಭಾಗಕ್ಕೆ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತದೆ.

ಅರಣ್ಯ ಜಾಗದಲ್ಲಿ ಪೈಪುಲೈನ್ ಕಾಮಗಾರಿ, ಟ್ಯಾಂಕ್ ನಿರ್ಮಾಣ ಕಾರ್ಯ ಬಾಕಿ ಇದ್ದು, ಅವರಿಗೆ ಪರ್ಯಾಯ ಜಾಗ ನೀಡಿ ಅಗತ್ಯ ಜಾಗವನ್ನು ಬಳಕೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಜತೆಗೆ ರಾಷ್ಟ್ರೀಯ ಹೆದ್ದಾರಿ ಬದಿ ಪೈಪುಲೈನ್ ಕಾಮಗಾರಿ ಬಾಕಿ ಇದ್ದು, ಅದರ ಕುರಿತು ಕೂಡ ಇಲಾಖಾ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿಗಮದ ಪೋರ್ಟಲ್ ಗೆ ಅರ್ಜಿ ಸಲ್ಲಿಕೆಯಾಗಿರುವ ಕುರಿತು ಪುತ್ತೂರು ತಾ.ಪಂ.ಇಒ ನವೀನ್ ಕುಮಾರ್ ಭಂಡಾರಿ ವಿವರ ನೀಡಿ, ಪುತ್ತೂರು ತಾಲೂಕಿನ 22 ಗ್ರಾ.ಪಂ.ಗಳಲ್ಲಿ 1744 ಅರ್ಜಿ, ಬಂಟ್ವಾಳ ತಾಲೂಕಿನ 9 ಗ್ರಾ.ಪಂ.ಗಳ 973 ಅರ್ಜಿ, ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 252 ಅರ್ಜಿ, ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 246 ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.ಪುತ್ತೂರು ಕ್ಷೇತ್ರದ ಪ್ರತಿ ಗ್ರಾ.ಪಂ.ಮಟ್ಟದಲ್ಲಿರುವ ನಿವೇಶನ ರಹಿತರ ವಿವರ, ನಿವೇಶನಕ್ಕೆ ಕಾದಿರಿಸಿದ ಜಾಗದ ವಿವರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು. ಈ ವೇಳೆ ಹೆಚ್ಚಿನ ಜಾಗವನ್ನು ಗುರುತು ಮಾಡುವಂತೆ ಆಯಾಯ ಗ್ರಾಮಗಳ ಪಿಡಿಒ, ವಿಎಒಗಳಿಗೆ ಗುರಿ ನೀಡಲಾಯಿತು.ವಿಟ್ಲಮುಡ್ನೂರಿನಲ್ಲಿ ತಾನೇ ಸುಮಾರು 8.50 ಎಕರೆ ಜಾಗವನ್ನು ಖರೀದಿ ಮಾಡಿದ್ದು, ಅದರ ಸ್ಥಿತಿ ಯಾವ ಹಂತದಲ್ಲಿದೆ ಎಂದು ಶಾಸಕರು ಮಾಹಿತಿ ಕೇಳಿದರು. ಅದರಲ್ಲಿ 166 ನಿವೇಶನಗಳನ್ನು ನೀಡಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಬಡಗನ್ನೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಕಾದಿರಿಸಿದ 3.50 ಎಕರೆ ಜಾಗವನ್ನು ಸ್ಥಳೀಯರೊಬ್ಬರು ಒತ್ತುವರಿ ಮಾಡಿ ತೋಟ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.

ವೇದಿಕೆಯಲ್ಲಿ ಪುತ್ತೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ತಹಶೀಲ್ದಾರ್ ಎಸ್.ಬಿ.ಕೂಡಲಗಿ, ಬಂಟ್ವಾಳ ತಹಶೀಲ್ದಾರ್ ಮಂಜುನಾಥ್, ಬಂಟ್ವಾಳ ತಾ.ಪಂ.ಇಒ ಸಚಿನ್ ಕುಮಾರ್ ವೇದಿಕೆಯಲ್ಲಿದ್ದರು.