ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದ್ದು, ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಶನಿವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಉತ್ತರ ಕರ್ನಾಟಕ, ಮೈಸೂರು ಭಾಗದಲ್ಲಿ ಪ್ರತಿಭಟನೆಯ ಕಾವು ಜೋರಾಗಿತ್ತು.
ಬೆಂಗಳೂರು : ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದ್ದು, ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಶನಿವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.
ಉತ್ತರ ಕರ್ನಾಟಕ, ಮೈಸೂರು ಭಾಗದಲ್ಲಿ ಪ್ರತಿಭಟನೆಯ ಕಾವು ಜೋರಾಗಿತ್ತು. ಬೆಳಗಾವಿ ಜಿಲ್ಲೆ ಸ್ತಬ್ಧವಾದರೆ, ಹಾವೇರಿ, ಗದಗ, ವಿಜಯನಗರ, ಧಾರವಾಡ, ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬಂದ್ ಆಚರಿಸಲಾಯಿತು. ಈ ಮಧ್ಯೆ, ನವೆಂಬರ್ 1ರ ರಾಜ್ಯೋತ್ಸವ ನಿಮಿತ್ತ ಪ್ರತಿಭಟನೆಯನ್ನು ವಾಪಸ್ ಪಡೆದಿರುವ ರೈತರು, ಸೋಮವಾರ ಮತ್ತೆ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ.
ಯಾವ ಜಿಲ್ಲೆಲ್ಲಿ ಏನಾಯ್ತು?:
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ರೈತರು ಧರಣಿ ನಡೆಸಿ, ಬಸ್ ಸಂಚಾರ ತಡೆದರು. ಸವದತ್ತಿ-ಬೈಲಹೊಂಗಲ-ಬೆಳಗಾವಿ, ನಿಪ್ಪಾಣಿ-ಮೂಡಲಗಿ, ಕಾಗವಾಡ-ಜಮಖಂಡಿ, ಕಾಗವಾಡ-ಬೆಳಗಾವಿ, ಕಾಗವಾಡ-ವಿಜಯಪುರ ರಾಜ್ಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಗಳ ಮೇಲೆ ಮುಳ್ಳಿನ ಕಂಟಿ ಹಾಕಿ, ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕಾಗವಾಡ ತಾಲೂಕಿನ ಉಗಾರದಲ್ಲಿ ರೈತರು ರಸ್ತೆಯಲ್ಲೇ ಅಡುಗೆ ಮಾಡಿ, ಊಟ ಮಾಡಿದರು. ಇದರಿಂದಾಗಿ ವಾಹನ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಮನೆಗೆ ರೈತರು ಮುತ್ತಿಗೆ ಹಾಕಿದರು.
ಹಾವೇರಿಯಲ್ಲಿ ರೈತರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವುದರ ಜತೆಗೆ ಬಸ್ ನಿಲ್ದಾಣಗಳಿಗೂ ನುಗ್ಗಿ ಪ್ರತಿಭಟನೆ ನಡೆಸಿದರು. ಕೆಲವೆಡೆ ವ್ಯಾಪಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಬಸ್ ನಿಲ್ದಾಣದ ಅಂಗಡಿಗಳಲ್ಲಿದ್ದ ತಿನಿಸು ಹಾಗೂ ವಸ್ತುಗಳನ್ನು ರಸ್ತೆಗೆ ಚೆಲ್ಲಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಹಾವೇರಿ ಬಸ್ ನಿಲ್ದಾಣದಲ್ಲಿ ಬಸ್ ಮುಂದೆ ಮಲಗಿ ಪ್ರತಿಭಟನೆ ನಡೆಸಿದರು.
ಇಳಕಲ್ಲ-ಶಿಕಾರಿಪುರ, ಹಾವೇರಿ-ಗುತ್ತಲ ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಹಳೇ ಹುಬ್ಬಳ್ಳಿ ಭಾಗದಲ್ಲಿ ಪ್ರತಿಭಟನಾಕಾರರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ದುರ್ಗದಬೈಲ್ ವೃತ್ತದಿಂದ ಇಂಡಿ ಪಂಪ್ ವೃತ್ತಕ್ಕೆ ಮೆರವಣಿಗೆ ಮೂಲಕ ಸಾಗಿ ಧರಣಿ ನಡೆಸಿದರು. ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಈ ವೇಳೆ, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ, ತಳ್ಳಾಟ-ನೂಕಾಟ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಧಾರವಾಡದ ಮನಸೂರು ಕ್ರಾಸ್ ಬಳಿ 2-3 ತಾಸು ಧಾರವಾಡ-ಹಳಿಯಾಳ-ದಾಂಡೇಲಿ ರಸ್ತೆ ಬಂದ್ ಮಾಡಿ, ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ನರಗುಂದದಲ್ಲಿ ಬಂದ್ ಆಚರಿಸಲಾಯಿತು. ತಾಲೂಕಿನ ಕೊಣ್ಣೂರಲ್ಲಿ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದರು. ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಪ್ರತಿಭಟನಾಕಾರರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಸಕ್ಕರೆ ದಾಸ್ತಾನು ಮಳಿಗೆಗೆ ಬೀಗ ಹಾಕಿದರು.
ಕಲಬುರಗಿ ಜಿಲ್ಲೆ ಅಫಜಲಪುರದಲ್ಲಿ ಬಂದ್ ಆಚರಿಸಲಾಯಿತು. ಪಟ್ಟಣದ ಗುರುಭವನದಲ್ಲಿ ನಡೆಯುತ್ತಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಸಭಾಂಗಣಕ್ಕೆ ಎತ್ತಿನ ಬಂಡಿಗಳೊಂದಿಗೆ ನುಗ್ಗಿದ ರೈತರು, ಕುರ್ಚಿಗಳನ್ನು ಎಸೆದು, ಬ್ಯಾನರ್ಗಳನ್ನು ಹರಿದು, ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಹೆದರಿದ ಶಿಕ್ಷಕರು, ಶಿಕ್ಷಕಿಯರು ಹಾಗೂ ಆಹ್ವಾನಿತ ಗಣ್ಯರು ದಿಕ್ಕಾಪಾಲಾಗಿ ಓಡಿದರು.
ಇದೇ ವೇಳೆ, ಬೀದರ್, ವಿಜಯಪುರ, ರಾಮನಗರ, ಮಂಡ್ಯ, ಚಾಮರಾಜನಗರ, ರಾಯಚೂರು ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆ, ರಸ್ತೆ ತಡೆ ನಡೆಸಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಲಮಾಣಿ ಮನೆ ಎದುರು ಅಹೋರಾತ್ರಿ ಧರಣಿ
ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸದೆ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿರುವ ಕ್ರಮ ಖಂಡಿಸಿ ರೈತರು ಹಾವೇರಿಯಲ್ಲಿ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರ ನಿವಾಸದ ಎದುರು ಅಹೋರಾತ್ರಿ ಧರಣಿ ನಡೆಸಿದರು. ನಾಲ್ಕೈದು ಟ್ರ್ಯಾಕ್ಟರ್ನಲ್ಲಿ ಕಬ್ಬು ತಂದು ಸಚಿವರ ಮನೆ ಮುಂದೆ ನಿಲ್ಲಿಸಿ, ಶಾಮಿಯಾನ ಹಾಕಿಕೊಂಡು ಧರಣಿ ನಡೆಸಿದ ರೈತರು, ಶನಿವಾರ ಮಧ್ಯಾಹ್ನವೂ ಸಚಿವರ ಮನೆ ಎದುರೇ ಊಟ ತಯಾರಿಸಿಕೊಂಡರು. ಬಳಿಕ, ಡಿಸಿ,ಎಸ್ಪಿ ಮನವೊಲಿಕೆ ಹಿನ್ನೆಲೆಯಲ್ಲಿ ಧರಣಿಯನ್ನು ವಾಪಸ್ ಪಡೆಯಲಾಯಿತು.
ಬೊಮ್ಮಾಯಿಗೆ ರೈತರ ಘೇರಾವ್
ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಯಾಸೀರಖಾನ್ ಪಠಾಣ್ ಅವರ ಕಾರುಗಳನ್ನು ತಡೆದ ರೈತರು, ಟ್ರ್ಯಾಕ್ಟರ್ ಅಡ್ಡ ನಿಲ್ಲಿಸಿ, ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಕಬ್ಬಿನ ದರ ಘೋಷಿಸುವ ಮುನ್ನವೇ ಸಕ್ಕರೆ ಕಾರ್ಖಾನೆ ಆರಂಭಿಸಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ಯತ್ನ
ಈ ಮಧ್ಯೆ, ಮಂಡ್ಯದಲ್ಲಿ ಕಾಂಗ್ರೆಸ್ ಭವನ ಉದ್ಘಾಟನೆಗೆ ಆಗಮಿಸಿದ್ದ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದ ರೈತರನ್ನು ಪೊಲೀಸರು ತಡೆದರು.
- ರಾಜ್ಯಾದ್ಯಂತ ಕಬ್ಬು ಬೆಳೆಗಾರರ ಪ್ರತಿಭಟನೆ
- ಹಲವೆಡೆ ಹೆದ್ದಾರಿ ಬಂದ್, ಬಸ್ ಸಂಚಾರ ಸ್ಥಗಿತ
= ಟೈರ್ಗೆ ಬೆಂಕಿ, ಉಗಾರದಲ್ಲಿ ರಸ್ತೆಯಲ್ಲೇ ಅಡುಗೆ
- ಹೋರಾಟದ ಕಿಚ್ಚಿಗೆ ಬೆಳಗಾವಿ ಜಿಲ್ಲೆ ಸ್ತಬ್ಧ
- ರಾಜ್ಯೋತ್ಸವ ನಿಮಿತ್ತ ಇಂದು ಪ್ರತಿಭಟನೆಗೆ ಬ್ರೇಕ್
