ಪ್ರತಿ ಟನ್‌ ಕಬ್ಬಿಗೆ ₹5500 ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ರೈತ ಸಂಘಟನೆಗಳ ಆಶ್ರಯದಲ್ಲಿ ಕರೆ ನೀಡಿದ್ದ ಜಮಖಂಡಿ ಬಂದ್‌ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕನ್ನಡಪ್ರಭ ವಾರ್ತೆ ಜಮಖಂಡಿ

ಪ್ರತಿ ಟನ್‌ ಕಬ್ಬಿಗೆ ₹5500 ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ರೈತ ಸಂಘಟನೆಗಳ ಆಶ್ರಯದಲ್ಲಿ ಕರೆ ನೀಡಿದ್ದ ಜಮಖಂಡಿ ಬಂದ್‌ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಬೆಳಗಿನ 8 ಗಂಟೆಯಿಂದ ನಗರದ ದೇಸಾಯಿ ವೃತ್ತದಲ್ಲಿ ಜಮಾಯಿಸಿದ್ದ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನಗರದಾದ್ಯಂತ ಅಂಗಡಿ ಮುಂಗ್ಗಟ್ಟುಗಳು ಹೊಟೇಲ್‌ಗಳು ಬಂದ್‌ ಆಗಿದ್ದವು. ವ್ಯಾಪಾರಸ್ಥ ಸಂಘ, ವಕೀಲರ ಸಂಘ, ವಿವಿಧ ಮಠಾಧೀಶರು, ಕನ್ನಡಪರ ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು, ಶಾಲಾ ಕಾಲೇಜುಗಳಿಗೂ ರಜೆ ಇರಲಿಲ್ಲ. ಪ್ರತಿಭಟನೆ ಹಿನ್ನೆಲೆ ಬಸ್‌ಗಳು ರಸ್ತೆಗಿಳಿಯಲಿಲ್ಲ. ಬೆಂಗಳೂರು ಸೇರಿದೂರದ ಊರುಗಳಿಂದ ಜಮಖಂಡಿಗೆ ಬರಬೇಕಿದ್ದ ಬಸ್‌ಗಳು ಲೋಕಾಪುರ, ಮುಧೋಳ ಹತ್ತಿರ ಲಾಕ್‌ ಆದ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು.

ತಾಲೂಕಿನ ಹುಲ್ಯಾಳ ಕ್ರಾಸ್‌, ಚಿಕ್ಕಲಕಿಕ್ರಾಸ್‌, ಟಕ್ಕೊಡ ಕ್ರಾಸ್‌, ಹಿಪ್ಪರಗಿ, ಆಲಗೂರ, ಚಿಕ್ಕಪಡಸಲಗಿ ಮುಂತಾದ ಗ್ರಾಮಗಳಲ್ಲಿ ರೈತರು ರಸ್ತೆ ತಡೆದು ಪ್ರತಿಭಟಿಸಿದರು.

ರೈತರ ಹೋರಾಟದಲ್ಲಿ ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶ್ರೀಗಳು, ಓಲೆಮಠದ ಆನಂದ ದೇವರು, ಲಕ್ಷ್ಮಣ ಮುತ್ಯ , ಸಿದ್ಧಲಿಂಗ ದೇವರು, ಮುತ್ತೂರಿನ ಗವಿಸಿದ್ಧ ಶ್ರೀಗಳು, ರೈತ ಸಂಘದ ಶ್ರೀಶೈಲ ಭೂಮಾರ, ರಾಜು ನದಾಪ್, ಕಲ್ಲಪ್ಪ ಬಿರಾದಾರ, ಶಿವಶಂಕರ ಪಾಟೀಲ, ಬಾಹುಬಲಿ ನ್ಯಾಮಗೌಡ, ಮಲ್ಲಿಕಾರ್ಜುನ ಬೆಕ್ಕೇರಿ ಮುಖಂಡರಾದ ಬಿ.ಎಸ್‌. ಸಿಂಧೂರ, ಸುಶೀಲ ಬೆಳಗಲಿ, ಮಹದೇವ ಇಟ್ಟಿ, ಯೋಗಪ್ಪ ಸವದಿ, ಉಮೇಶ ಆಲಮೇಲ್ಕರ, ಸಿದ್ಧನಗೌಡ ಪಾಟೀಲ, ಸಚಿನ ಖಿದ್ರಾಪೂರ, ಅಣ್ಣಪ್ಪ ಪರಮಗೊಂಡ, ಸದಾಶಿವ ಕವಟಗಿ, ದೀಪಕ ಕದಮ, ಕಾಡಯ್ಯ ಹಿರೇಮಠ, ಪ್ರದೀಪ ಮೆಟಗುಡ್ಡ, ರಾಯಬಾ ಜಾಧವ, ಅಬ್ದುಲ್‌ ಜಮಾದಾರ, ಮಹೇಶ ಖೆಬ್ಬಾನಿ, ಮಲ್ಲಪ್ಪ ಮರನೂರ, ಸಚಿನ ಪರಮಗೊಂಡ, ಬಿ.ಜಿ.ಪಾಟೀಲ ಶ್ರೀಧರ ಕಂಬಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ನೂರಾರು ಜನ ರೈತರು ಭಾಗವಹಿಸಿದ್ದರು.