2 ಹಂತದಲ್ಲಿ ಸಂಪುಟ ರಚನೆ : ಖರ್ಗೆ - ಜೂ.3ಕ್ಕೆ ಸಿಎಂ ಜತೆ 10 ಸಚಿವರ ಪ್ರಮಾಣ

Published : Jun 01, 2026, 04:37 AM IST
Mallikarjun Kharge Siddaramaiah DK Shivakumar

ಸಾರಾಂಶ

ಜೂನ್‌ 3ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಮೊದಲ ಹಂತದಲ್ಲಿ ಎಂಟೋ, ಹತ್ತೋ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಾದ ನಂತರ, 15 ದಿನಗಳು ಅಥವಾ ತಿಂಗಳೊಳಗೆ ಮತ್ತೊಮ್ಮೆ ಸಂಪುಟ ವಿಸ್ತರಣೆ ನಡೆಯಲಿದೆ

  ಕಲಬುರಗಿ:  ಜೂನ್‌ 3ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಮೊದಲ ಹಂತದಲ್ಲಿ ಎಂಟೋ, ಹತ್ತೋ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಾದ ನಂತರ, 15 ದಿನಗಳು ಅಥವಾ ತಿಂಗಳೊಳಗೆ ಮತ್ತೊಮ್ಮೆ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಅಧಿಕ ಜೇಷ್ಠ ಪೂರ್ಣಿಮೆ ದಿನವಾದ ಭಾನುವಾರ, ಕಲಬುರಗಿಯ ಬುದ್ಧವಿಹಾರದಲ್ಲಿ ಪೂರ್ಣಿಮೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ರಾಜ್ಯ ರಾಜಕೀಯದ ಬಗ್ಗೆ ಮಹತ್ವದ ಮಾಹಿತಿ ನೀಡಿದರು.

ಸಂಪುಟ ಸೇರಲಿರುವ ಸಚಿವರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜೂನ್‌ 3ರಂದು ಮೊದಲ ಹಂತದಲ್ಲಿ ಎಂಟೋ, ಹತ್ತೋ ಸಚಿವರ ಪ್ರಮಾಣವಚನ ನಡೆಯಬಹುದು. ಅದಾದ 15 ದಿನ ಅಥವಾ ಒಂದು ತಿಂಗಳೊಳಗೆ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಹೇಳುವ ಮೂಲಕ 2 ಹಂತದಲ್ಲಿ ಡಿ.ಕೆ.ಶಿವಕುಮಾರ್‌ ಸರ್ಕಾರದ ಸಂಪುಟ ರಚನೆಯಾಗುವ ಸುಳಿವು ನೀಡಿದರು.

ಹೊಸ ಡಿಸಿಎಂ ಹುದ್ದೆ ಸೃಷ್ಟಿ ಮತ್ತು ಹೊಸ ಸಂಪುಟ ರಚನೆಯ ಬಗ್ಗೆ ನನ್ನ ಬಳಿಗೆ ಇದುವರೆಗೂ ಯಾವುದೇ ಅಧಿಕೃತ ಪ್ರಸ್ತಾವನೆ ಬಂದಿಲ್ಲ. ಪ್ರಸ್ತಾಪ ಬಂದ ಬಳಿಕವೇ ಡಿಸಿಎಂ ಹಾಗೂ ಸಚಿವರ ಸಂಖ್ಯೆ ತೀರ್ಮಾನವಾಗಲಿದೆ. ಸಿಎಂ ಮೊದಲು ಸಚಿವರ ಲಿಸ್ಟ್ ಅನ್ನು ನಮಗೆ ಕೊಡಲಿ. ಅದಾದ ನಂತರವಷ್ಟೇ ಎಷ್ಟು ಡಿಸಿಎಂ ಮಾಡಬೇಕು?, ಎಷ್ಟು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು? ಎಂಬುದನ್ನು ತೀರ್ಮಾನಿಸಲಾಗುವುದು. ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕವನ್ನೂ ಜೊತೆಯಲ್ಲೇ ಮಾಡಬೇಕಾ? ಎನ್ನುವ ಚರ್ಚೆ ಸಹ ನಡೆದಿದೆ. ಇವೆಲ್ಲವನ್ನೂ ಜೂನ್‌ 3ರ ನಂತರ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಹುದ್ದೆ:

ಕೆಪಿಸಿಸಿ ಅಧ್ಯಕ್ಷ ಹುದ್ದೆ ಕುರಿತು ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆದ ಬಳಿಕ ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾವಣೆ ಸಹಜ. ಮುಂಬರುವ ಚುನಾವಣೆ ದೃಷ್ಟಿಯಿಂದ ಎಲ್ಲರನ್ನೂ ಒಗ್ಗಟ್ಟಾಗಿ ಕೊಂಡೊಯ್ಯುವ, ಸಿಎಂ ಜೊತೆ ಉತ್ತಮ ಸಮನ್ವಯ ಹೊಂದಿರುವ ಸೂಕ್ತ ನಾಯಕನನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಚುನಾವಣೆಗೆ ಕೇವಲ 2 ವರ್ಷ ಮಾತ್ರ ಬಾಕಿಯಿದೆ. ಬಹಳ ವೇಗವಾಗಿ ಕೆಲಸ ಮಾಡಬೇಕಿದೆ. ವೇಗವಾಗಿ ಕೆಲಸ ಮಾಡುವ, ಸಾಮೂಹಿಕವಾಗಿ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ ಸಾಮರ್ಥ್ಯ ಇರುವ ನಾಯಕನನ್ನು ಹುಡುಕಬೇಕಿದೆ. ಜೊತೆಗೆ, ಅವರಿಗೆ ಸಹಕಾರ ನೀಡುವ ತಂಡವೂ ಇರಬೇಕಾಗುತ್ತದೆ. ಇವೆಲ್ಲವನ್ನೂ ವಿಚಾರ ಮಾಡಿ ನಾವು ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡುತ್ತೇವೆ ಎಂದರು.

ಖರ್ಗೆಯವರ ಕಲಬುರಗಿಯ ಈ ಭೇಟಿ, ಹೇಳಿಕೆಗಳು ಮಹತ್ವ

ಹೊಸ ಸಚಿವ ಸಂಪುಟ ರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕಸರತ್ತಿಗೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ತೀವ್ರ ಚರ್ಚೆಗಳ ನಡುವೆಯೇ ಖರ್ಗೆಯವರ ಕಲಬುರಗಿಯ ಈ ಭೇಟಿ, ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ನಂತರ, ಪ್ರಿಯಾಂಕ್ ಖರ್ಗೆ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಕೂಗು ಕಾಂಗ್ರೆಸ್ ವಲಯದಲ್ಲಿ ಜೋರಾಗಿದೆ. ಈ ಸಂದರ್ಭದಲ್ಲಿಯೇ ಖರ್ಗೆಯವರು ತಮ್ಮ ತವರು ಜಿಲ್ಲೆಯಾದ ಕಲಬುರಗಿಗೆ ಭೇಟಿ ನೀಡಿದ್ದಾರೆ. ಸ್ಥಳೀಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಶಾಸಕರು ಹಾಗೂ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಿ, ಗಮನ ಸೆಳೆದಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಪ್ರಿಯಾಂಕ್‌ ಖರ್ಗೆ ಡಿಸಿಎಂ ಏಕೆ ಆಗಬೇಕು ಗೊತ್ತಾ?
ಸಿದ್ದು, ಡಿಕೆಶಿ ಮನೆಗೆ ಶಾಸಕರ ದಂಡು, ಸಚಿವ ಸ್ಥಾನಕ್ಕೆ ಮನವಿ