ಕನ್ನಡಪ್ರಭ ವಾರ್ತೆ ಬೆಂಗಳೂರು
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ದೈನಂದಿನ ಖರ್ಚಿನ ಮೇಲೆ ನಿಗಾ ಇಡಲು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 31 ತಂಡಗಳನ್ನು ರಚಿಸಲಾಗಿದೆ.
ಚುನಾವಣಾ ನೀತಿಯ ಪ್ರಕಾರ ನಿತ್ಯ ರಾಜಕೀಯ ಪಕ್ಷಗಳು ಖರ್ಚಿನ ವಿವರ ಸಲ್ಲಿಸಬೇಕು, ಆದರೆ ಲೋಕಸಭಾ ಚುನಾವಣೆ ಘೋಷಣೆಯಾಗಿ 6 ದಿನಗಳಾದರೂ ಈವರೆಗೆ ರಾಜಕೀಯ ಪಕ್ಷಗಳು ತಮ್ಮ ದೈನಂದಿನ ಖರ್ಚಿನ ಲೆಕ್ಕ ನೀಡಿಲ್ಲ.
ಹೀಗಾಗಿಯೇ ಚುನಾವಣಾ ವೆಚ್ಚದ ಮೇಲೆ ನಿಗಾವಹಿಸಲು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಿಂದ 31 ತಂಡಗಳನ್ನು ರಚಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಎಲ್ಲ 28 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದು ತಂಡ ಹಾಗೂ ಮೂರು ಲೋಕಸಭಾ ಕ್ಷೇತ್ರಗಳಿಗೆ ಒಂದು ತಂಡವನ್ನು ನೇಮಿಸಲಾಗಿದೆ.
ಈ ತಂಡಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ರಾಜಕೀಯ ಸಭೆ-ಸಮಾರಂಭ, ಚುನಾವಣಾ ರ್‍ಯಾಲಿ ಸೇರಿದಂತೆ ಇನ್ನಿತರ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳ ಮೇಲೆ ನಿಗಾವಹಿಸಲಿದ್ದಾರೆ. ಜತೆಗೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡಲಾದ ವೆಚ್ಚದ ಬಗ್ಗೆಯೂ ಲೆಕ್ಕ ಹಾಕಲಿದ್ದಾರೆ.
ಈ ತಂಡಗಳ ಲೆಕ್ಕವನ್ನು ಅಂತಿಮವಾಗಿ ಚುನಾವಣೆ ಪೂರ್ಣಗೊಂಡ ನಂತರ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಸಲ್ಲಿಕೆ ಆಗಲಿದೆ.
ಅಲ್ಲಿ ಎಲ್ಲ ವೆಚ್ಚದ ಲೆಕ್ಕ ಹಾಕಿ, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ ನಿಗದಿಗಿಂತ ಹೆಚ್ಚಿನ ವೆಚ್ಚ ಮಾಡಿದ್ದರೆ ಅಥವಾ ವೆಚ್ಚದ ಕುರಿತ ಮಾಹಿತಿ ಅಪೂರ್ಣ ಎಂದಿದ್ದರೆ ಅಭ್ಯರ್ಥಿಗಳಿಂದ ಮತ್ತು ರಾಜಕೀಯ ಪಕ್ಷಗಳಿಂದ ಮಾಹಿತಿ ಪಡೆಯಲಾಗುತ್ತದೆ.