ಛಲವಾದಿಗೆ ಘೇರಾವ್‌ ಕೇಸ್‌ ಹಕ್ಕು ಬಾಧ್ಯತಾ ಸಮಿತಿಗೆ

Published : Aug 12, 2025, 10:03 AM IST
Chalavadi Narayanaswamy

ಸಾರಾಂಶ

ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ತಮಗೆ ಘೇರಾವ್‌ ಹಾಕಿ ಕೆಲ ಗಂಟೆ ದಿಗ್ಬಂಧನದಲ್ಲಿಟ್ಟ ವಿಷಯವನ್ನು ಸೋಮವಾರ ಸದನದಲ್ಲಿ ಪ್ರಸ್ತಾಪಿಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ

 ವಿಧಾನ ಪರಿಷತ್ತು :  ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ತಮಗೆ ಘೇರಾವ್‌ ಹಾಕಿ ಕೆಲ ಗಂಟೆ ದಿಗ್ಬಂಧನದಲ್ಲಿಟ್ಟ ವಿಷಯವನ್ನು ಸೋಮವಾರ ಸದನದಲ್ಲಿ ಪ್ರಸ್ತಾಪಿಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಈ ಸಂಬಂಧ ಜಿಲ್ಲಾ ಉಸ್ತುವಾರಿ ಪ್ರಿಯಾಂಕ್‌ ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸಿದರಲ್ಲದೆ, ಗೂಂಡಾ ಎಂದು ಟೀಕಿಸಿದರು. ಇದು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಗದ್ದಲಕ್ಕೆ ಕಾರಣವಾಯಿತು.

ಕೊನೆಗೆ ಸಭಾಪತಿ ಸ್ಥಾನದಲ್ಲಿದ್ದ ಭೋಜೇಗೌಡ ಅವರು ‘ಗೂಂಡಾ’ ಪದವನ್ನು ಕಡತದಿಂದ ತೆಗೆಸಿ ವಿಷಯದ ಚರ್ಚೆ ಮುಗಿಸಿದರು.

ಶೂನ್ಯವೇಳೆ ಬಳಿಕ ಈ ವಿಷಯ ಪ್ರಸ್ತಾಪಿಸಿದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಭಾಪತಿ ಅವರು, ಈ ಪ್ರಸ್ತಾಪವನ್ನು ಸದನದ ಹಕ್ಕುಬಾಧ್ಯತಾ ಸಮಿತಿಗೆ ವರ್ಗಾಯಿಸಲಾಗಿದೆ. ವರದಿ ಬಂದ ಬಳಿಕ ಚರ್ಚಿಸಿ ಎಂದರು. ಆದರೂ, ನಾರಾಯಣಸ್ವಾಮಿ ಅವರು ಈ ಬಗ್ಗೆ ಸದನದಲ್ಲಿ ಚರ್ಚಿಸಲು ಅವಕಾಶ ಕೋರಿದರು. ಭೋಜನ ವಿರಾಮದ ಬಳಿಕ ಚರ್ಚೆಗೆ ಅವಕಾಶ ನೀಡಲಾಯಿತು.

ನಾರಾಯಣಸ್ವಾಮಿ ಅವರು ಮಾತನಾಡಿ, ಚಿತ್ತಾಪುರದಲ್ಲಿ ಪತ್ರಿಕಾಗೋಷ್ಠಿ ನಡೆಸುವಾಗ ಪ್ರಧಾನಿ ಮೋದಿ ಅವರ ಬಗ್ಗೆ ಕೆಲವರು ಮಾಡಿದ ಟೀಕೆಯ ಮಾತುಗಳಿಗೆ ರೂಢಿಗತವಾಗಿ ನಾಯಿ ಬೊಗಳಿದರೆ ಆನೆ ಹೆದರುವುದೇ ಎಂದು ಟೀಕಿಸಿದ್ದೆ. ಅದಕ್ಕೆ ಮೂವತ್ತು, ನಲವತ್ತು ಕಾಂಗ್ರೆಸ್‌ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದರು. ಐದು ಗಂಟೆ ಕೂಡಿಹಾಕಿದ್ದರು. ಇದಕ್ಕೆ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ. ಅವರನ್ನು ಸದನಕ್ಕೆ ಕರೆಸಿ ಉತ್ತರ ಕೊಡಿಸಬೇಕು ಇಲ್ಲವೇ ಮುಖ್ಯಮಂತ್ರಿ ಅವರು ಸಚಿವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸಚಿವರಾದ ಶರಣ್‌ಪ್ರಕಾಶ್‌ ಪಾಟೀಲ್‌, ಎಂ.ಬಿ.ಪಾಟೀಲ್‌, ಸಭಾನಾಯಕ ಬೋಸರಾಜು, ಸದಸ್ಯ ಎಂ.ಎ.ಸಲೀಂ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಪ್ರಚೋದನಕಾರಿ, ಉದ್ಧಟತನದ ಹೇಳಿಕೆ ನೀಡಿ ಜನರು ನಿಮ್ಮನ್ನು ಕೂಡಿಹಾಕುವಂತೆ ಮಾಡಿಕೊಂಡಿದ್ದು ನೀವು, ನಮ್ಮ ಸಚಿವರೇಕೆ ರಾಜೀನಾಮೆ ಕೊಡಬೇಕು. ಈ ವಿಷಯ ಹಕ್ಕು ಬಾಧ್ಯತಾ ಸಮಿತಿ ಮುಂದಿದೆ. ವರದಿ ಬಂದ ಮೇಲೆ ಮಾತನಾಡಿ ಎಂದರು.

ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ನಮ್ಮ ಪ್ರಧಾನಿಯವರನ್ನು ವಿಷ ಸರ್ಪ ಅನ್ನಬಹುದು, ನಾವು ಶ್ವಾನ ಎಂದರೆ ತಪ್ಪಾ? ನಾನು ದೂರು ನೀಡಿದಾಗ ಸಚಿವರ ಹೆಸರು ಬರೆದಿರಲಿಲ್ಲ. ಆದರೆ, ಈ ವಿಚಾರದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ದಿಗ್ಬಂಧನ ಹಾಕದೆ ನಾನೇನು ಪ್ರಶಸ್ತಿಗೆ ಶಿಫಾರಸು ಮಾಡಬೇಕಿತ್ತಾ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಇದರಿಂದ ಅವರೇ ಕಾರ್ಯಕರ್ತರನ್ನು ಕಳುಹಿಸಿರುವುದು ಎನ್ನುವುದು ತಿಳಿಯುತ್ತದೆ. ಈಗಲೂ ಹೇಳುತ್ತೇನೆ. ಪ್ರಿಯಾಂಕ್‌ ಖರ್ಗೆ ಗೂಂಡಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಶರಣ್‌ ಪ್ರಕಾಶ್‌ ಪಾಟೀಲ್‌, ಗೂಂಡಾಗಿರಿ ಸಂಸ್ಕೃತಿ ಬಿಜೆಪಿಯದ್ದು, ನಮ್ಮದಲ್ಲ. ಈ ಪದವನ್ನು ಕಡತದಿಂದ ತೆಗೆಸಬೇಕೆಂದು ಆಗ್ರಹಿಸಿದರು. ಈ ವೇಳೆ ಉಭಯ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಸಭಾಪತಿ ಪೀಠದಲ್ಲಿದ್ದ ಭೋಜೇಗೌಡ ಅವರು ಗೂಂಡಾ ಪದವನ್ನು ಕಡತದಿಂದ ತೆಗೆಸಿ ವಿಷಯ ಪ್ರಸ್ತಾಪ ಮುಗಿಸಿದರು.

PREV
Read more Articles on

Recommended Stories

ವಿದ್ಯುತ್‌ ಸ್ಮಾರ್ಟ್‌ ಮೀಟರ್‌ ಏನು ಚಿನ್ನದ್ದಾ? : ವಿಪಕ್ಷ ಕಿಡಿ
ಸದನದಿಂದ 18 ಮಂದಿ ಬಿಜೆಪಿ ಶಾಸಕರ ಅಮಾನತು ವಾಪಸ್‌