ಮುಖ್ಯಮಂತ್ರಿ ಸಿದ್ದರಾಮಯ್ಯ ಟಾರ್ಗೆಟ್ ದಾಟಿದ ಜಾತಿಗಣತಿ

KannadaprabhaNewsNetwork |  
Published : Sep 29, 2025, 01:04 AM ISTUpdated : Sep 29, 2025, 04:11 AM IST
ಜಾತಿ ಗಣತಿ | Kannada Prabha

ಸಾರಾಂಶ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿಗಣತಿ) ಆಮೆಗತಿಯ ಪ್ರಗತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿ ಗುರಿ ನಿಗದಿಪಡಿಸಿದ ಬೆನ್ನಲ್ಲೇ ಸಮೀಕ್ಷಾ ಕಾರ್ಯ ಚುರುಕುಗೊಂಡಿದ್ದು, ಭಾನುವಾರ 12 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ.

  ಬೆಂಗಳೂರು :  ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿಗಣತಿ) ಆಮೆಗತಿಯ ಪ್ರಗತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿ ಗುರಿ ನಿಗದಿಪಡಿಸಿದ ಬೆನ್ನಲ್ಲೇ ಸಮೀಕ್ಷಾ ಕಾರ್ಯ ಚುರುಕುಗೊಂಡಿದ್ದು, ಭಾನುವಾರ 12 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಭೆ ನಡೆಸಿ ನಿಗದಿಪಡಿಸಿದ್ದ (11.85 ಲಕ್ಷ) ನಿತ್ಯ ಸಮೀಕ್ಷಾ ಗುರಿ ನಿಗದಿಪಡಿಸಿದ್ದರು. ಇದರ ಗುರಿಯನ್ನು ಮೀರಿ ಭಾನುವಾರ ಸಾಧನೆ ಮಾಡಲಾಗಿದ್ದು, ಶೇ.10ರ ಬದಲು ಸುಮಾರು ಶೇ.11ರಷ್ಟು ಮನೆಗಳ ಸಮೀಕ್ಷೆಯನ್ನು ಒಂದೇ ದಿನ ನಡೆಸಲಾಗಿದೆ. ಇದರೊಂದಿಗೆ ಈವರೆಗೆ ಒಟ್ಟು 26 ಲಕ್ಷ ಕುಟುಂಬಗಳ 90 ಲಕ್ಷ ಮಂದಿ ವಿವರ ದಾಖಲು ಮಾಡಿದಂತಾಗಿದೆ.

ಸೆ.22 ರಿಂದ ಆರಂಭವಾದ ಸಮೀಕ್ಷೆಯಲ್ಲಿ ಸರ್ವರ್, ನೆಟ್‌ವರ್ಕ್‌, ಆ್ಯಪ್‌ ಸಮಸ್ಯೆ ಸೇರಿ ಹಲವು ಕಾರಣಗಳನ್ನು ಮೊದಲ ಐದು ದಿನ ಕೇವಲ 4.36 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಲಾಗಿತ್ತು. ಈ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳೊಂದಿಗೆ ವರ್ಚುಯಲ್‌ ಸಭೆ ನಡೆಸಿ, ಸೆ.27 ರಿಂದ ಅ.7 ರವರೆಗೆ ಒಟ್ಟು ಸಮೀಕ್ಷಾ ಗುರಿಯ ಶೇ.10ರಷ್ಟು ಕುಟುಂಬಗಳ ಸಮೀಕ್ಷೆ ನಡೆಸಬೇಕು. ಅರ್ಥತ್‌ ನಿತ್ಯ ಕಡ್ಡಾಯವಾಗಿ 11,85,623 ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ತಿಳಿಸಿದ್ದರು.

ಸಿದ್ದರಾಮಯ್ಯ ಅವರ ಎಚ್ಚರಿಕೆ ಬೆನ್ನಲ್ಲೇ ಶನಿವಾರ ಒಂದೇ ದಿನ 9 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಸಮೀಕ್ಷೆ ನಡೆಸಿದ್ದರು. ಭಾನುವಾರ ಸಮೀಕ್ಷೆಗೆ ಮತ್ತಷ್ಟು ವೇಗ ನೀಡಿದ್ದು, ಸಂಜೆ 5 ಗಂಟೆಗೆ 10 ಲಕ್ಷ ಮನೆಗಳ ಸಮೀಕ್ಷೆ ನಡೆಸಿರುವುದಾಗಿ ಮುಖ್ಯಮಂತ್ರಿಗಳ ಕಚೇರಿ ಪ್ರಕಟಿಸಿತ್ತು. ಬಳಿಕ ಸಂಜೆ 7 ಗಂಟೆಗೆ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ಅಂಕಿ-ಅಂಶಗಳ ಪ್ರಕಾರ 12 ಲಕ್ಷ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ.

1.43 ಕೋಟಿ ಕುಟುಂಬಗಳ ಸಮೀಕ್ಷೆ ಗುರಿ:

ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದಲ್ಲಿ ಒಟ್ಟು 1.43 ಕೋಟಿ ಮನೆಗಳನ್ನು ಸಮೀಕ್ಷೆಗೆ ಗುರುತಿಸಲಾಗಿದೆ. ಇದಕ್ಕಾಗಿ 1,19,213 ಗಣತಿದಾರರನ್ನು ನಿಯೋಜಿಸಿದ್ದು 1,21,714 ಬ್ಲಾಕ್‌ಗಳನ್ನು ಗುರುತಿಸಲಾಗಿತ್ತು. ಮೊದಲ ಮೂರ್ನಾಲ್ಕು ದಿನಗಳು ಸಮೀಕ್ಷಾ ಆ್ಯಪ್ ಲಾಗ್‌ಇನ್, ಸರ್ವರ್, ನೆಟ್‌ವರ್ಕ್ ಮತ್ತಿತರ ಸಮಸ್ಯೆಗಳಿಂದ ಮಂದಗತಿಯಲ್ಲಿ ಗಣತಿ ನಡೆಯಿತು. ಅದರಲ್ಲೂ ಕೆಲವರು ಇದೇ ನೆಪದಲ್ಲಿ ಲಾಗಿನ್ ಕೂಡ ಆಗದೆ ಮನೆಯಲ್ಲೇ ಕುಳಿತಿದ್ದರು. ಆಯೋಗದ ಪ್ರಕಾರ ಮೊದಲ ಐದು ದಿನಗಳ ಕಾಲ 30 ಸಾವಿರದಷ್ಟು ಗಣತಿದಾರರು ಆ್ಯಪ್‌ ಸಹ ಡೌನ್‌ಲೋಡ್‌ ಮಾಡಿರಲಿಲ್ಲ. ಅಂತಹವರ ವಿರುದ್ಧ ಮೇಲಧಿಕಾರಿಗಳು ‘ಶಿಸ್ತು ಕ್ರಮ’ ಎಚ್ಚರಿಕೆ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದು, ಸಮೀಕ್ಷೆಯಲ್ಲಿ ತೊಡಗಿದ್ದಾರೆ.

ದ.ಕನ್ನಡ, ಉಡುಪಿಯಲ್ಲಿ ನೀರಸ:

ಸಮೀಕ್ಷೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಶೇ.30 ರಷ್ಟು ಗಣತಿ ಪೂರ್ಣಗೊಂಡಿದ್ದು, ಉಡುಪಿಯಲ್ಲಿ ಕೇವಲ 7.55 ಹಾಗೂ ದಕ್ಷಿಣ ಕನ್ನಡದಲ್ಲಿ ಶೇ.7.63 ರಷ್ಟು ಸಮೀಕ್ಷೆ ಮಾತ್ರ ಆಗಿದೆ. ಈ ಭಾಗದಲ್ಲಿ ಸಮೀಕ್ಷೆಗೆ ವಿಶೇಷ ಒತ್ತು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

- ಮೊದಲ 4-5 ದಿನ ಮಂಕಾಗಿ ಸಾಗಿದ್ದ ಜಾತಿ ಗಣತಿ ಕಾರ್ಯ

- ಇದರ ಬೆನ್ನಲ್ಲೇ ಸಭೆ ನಡೆಸಿ ಎಚ್ಚರಿಕೆ ನೀಡಿದ್ದ ಸಿದ್ದರಾಮಯ್ಯ

- ದಿನಕ್ಕೆ ಶೇ.10ರಷ್ಟು ಮನೆಗಳ ಜಾತಿಗಣತಿಗೆ ಸೂಚಿಸಿದ್ದ ಸಿಎಂ

- ಸಿಎಂ ಎಚ್ಚರಿಕೆ ಬೆನ್ನಲ್ಲೇ ರಾಜ್ಯಾದ್ಯಂತ ಗಣತಿ ಕಾರ್ಯ ಚುರುಕು

- ನಿನ್ನೆ ಶೇ.10ರ ದಿನದ ಗುರಿ ಬದಲು ಶೇ.11ರಷ್ಟು ಮನೆಗಳ ಗಣತಿ

- ಇದರೊಂದಿಗೆ ಒಟ್ಟು 26 ಲಕ್ಷ ಮನೆಗಳ 90 ಲಕ್ಷ ಜನರ ಗಣತಿ ಪೂರ್ಣ

ಲಾಗಿನ್‌ ಆಗಿ ಸ್ವಯಂಗಣತಿ ನಡೆಸಿ!

ಹಿಂದುಳಿದ ವರ್ಗಗಳ ಆಯೋಗವು ಜನರೇ ತಮ್ಮ ಮಾಹಿತಿ ನೀಡಿ ಸ್ವಯಂಘೋಷಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಇದಕ್ಕಾಗಿ https://kscbc.karnataka.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ ಲಾಗ್‌ಇನ್ ಆಗಬೇಕು. ಅಲ್ಲಿ ಮೊಬೈಲ್‌ಗೆ ಒಟಿಪಿ ಬರುತ್ತದೆ. ಹೊಸ ಸಮೀಕ್ಷೆ ಕ್ಲಿಕ್ ಮಾಡಿಕೊಂಡು ಸುಲಭವಾಗಿ ಸಮೀಕ್ಷೆಯಲ್ಲಿ ಭಾಗವಹಿಸಬಹುದಾಗಿದೆ. ಈ ಸ್ವಯಂಘೋಷಣೆಯಲ್ಲೂ ಆಧಾರ್ ಅಥವಾ ಪಡಿತರ ಚೀಟಿ ಇವೆರಡರಲ್ಲಿ ಯಾವುದಾದರೂ ಒಂದರಿಂದ ಲಾಗ್‌ಇನ್ ಆಗಲು ಅವಕಾಶ ಇದೆ ಎಂದು ಮೂಲಗಳು ತಿಳಿಸಿವೆ.

PREV
Read more Articles on

Recommended Stories

ಜಾತಿ ಗಣತಿಗೆ ಮಾಹಿತಿ ನೀಡಲು ಶೇ.1ರಷ್ಟು ಮಂದಿ ನಿರಾಕರಣೆ
ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ : ಗೀತಾ ಶಿವರಾಜ್‌ ಕುಮಾರ್‌ ಘೋಷಣೆ