ವಾಷಿಂಗ್ಟನ್: ಸಂಧಾನ ಮಾತುಕತೆ ಮತ್ತು ತನ್ನ ಪಟ್ಟಿಗೆ ಸಿಕ್ಕಿಹಾಕಿಕೊಳ್ಳದೇ ತಪ್ಪಿಸಿಕೊಳ್ಳುತ್ತಿರುವ ಇರಾನ್ ಮೇಲೆ ಮತ್ತೊಂದು ಸುತ್ತಿನ ಚುಟುಕು, ಆದರೆ ಭರ್ಜರಿ ದಾಳಿ ನಡೆಸಲು ಅಮೆರಿಕ ಯೋಜಿಸಿದೆ ಎಂದು ವರದಿಗಳು ಹೇಳಿವೆ.
ಅಣ್ವಸ್ತ್ರ ಬಳಕೆ ಸಂಬಂಧ ನಮ್ಮ ಷರತ್ತಿಗೆ ಒಪ್ಪದೇ ಹೋದರೆ ಇರಾನ್‌ನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಪದೇ ಪದೇ ಎಚ್ಚರಿಸುತ್ತಲೇ ಬಂದಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್, ಇದೀಗ ಅಂಥದ್ದೊಂದು ದಾಳಿಗೆ ಸಜ್ಜಾಗಿದ್ದಾರೆ. ಈ ಮೂಲಕ ಇರಾನ್‌ನ ಅನ್ನು ಅನಿವಾರ್ಯವಾಗಿ ಮಾತುಕತೆ ವೇದಿಕೆಗೆ ಸೆಳೆಯುವ ಉದ್ದೇಶವನ್ನು ಅವರು ಹೊಂದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.
ಎಲ್ಲೆಲ್ಲಿ ದಾಳಿ ಮಾಡಬೇಕು? ದಾಳಿ ಹೇಗಿರಬೇಕು? ಚುಟುಕು ದಾಳಿ ನಡೆಸಿ ಇರಾನ್‌ಗೆ ದೊಡ್ಡ ಪೆಟ್ಟು ನೀಡಬೇಕು? ಒಂದು ವೇಳೆ ಅದಕ್ಕೆ ಇರಾನ್ ತಿರುಗೇಟು ನೀಡಿದರೆ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ಅಮೆರಿಕ ಸೇನೆ ಈಗಾಗಲೇ ವಿಸ್ತೃತ ವರದಿ ತಯಾರಿಸಿದ್ದು, ಸೆಂಟ್‌ಕಾಮ್‌ನ ಕಮಾಂಡರ್ ಬ್ರಾಡ್ ಕೂಪರ್ ಈ ಕುರಿತು ಗುರುವಾರ ಟ್ರಂಪ್‌ಗೆ ವಿವರಣೆ ನೀಡಲಿದ್ದಾರೆ. ಬಳಿಕ ದಾಳಿಯ ಕುರಿತು ಟ್ರಂಪ್ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಈ ದಾಳಿಯ ಜೊತೆಗೆ ಭೂಸೇನೆ ಬಳಸಿಕೊಂಡು ಹೋರ್ಮುಜ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಅಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆಯೂ ಸೇನೆಯ ಹಿರಿಯ ಅಧಿಕಾರಿಗಳು ಟ್ರಂಪ್‌ಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದುಬೈ: ಅಣ್ವಸ್ತ್ರ ತಯಾರಿಯನ್ನು ಕೈಬಿಡಬೇಕು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ನಿರಂತರವಾಗಿ ಇರಾನ್‌ಗೆ ಎಚ್ಚರಿಕೆ ನೀಡುತ್ತಿರುವ ಮಧ್ಯೆಯೇ, ‘ಇರಾನ್ ತನ್ನ ಅಣು ಮತ್ತು ಕ್ಷಿಪಣಿ ಸಾಮರ್ಥ್ಯಗಳನ್ನು ರಾಷ್ಟ್ರೀಯ ಸಂಪತ್ತಾಗಿ ರಕ್ಷಿಸುತ್ತದೆ. ಇರಾನಿಗರು ದೇಶದ ನೀರು, ಭೂಮಿ ಮತ್ತು ಆಕಾಶವನ್ನು ರಕ್ಷಿಸುವಂತೆಯೇ ಇವುಗಳನ್ನೂ ರಕ್ಷಿಸುತ್ತಾರೆ’ ಎಂದು ಇರಾನ್ ಸರ್ವೋಚ್ಚ ನಾಯಕ ಮೊಜ್ತವಾ ಖಮೇನಿ ಗುರುವಾರ ಸ್ಪಷ್ಟಪಡಿಸಿದ್ದಾರೆ. ಮೊಜ್ತಬಾರ ಈ ಲಿಖಿತ ಹೇಳಿಕೆಯನ್ನು ಇರಾನ್‌ನ ರಾಷ್ಟ್ರೀಯ ಸುದ್ದಿವಾಹಿನಿ ಪ್ರಸಾರ ಮಾಡಿದೆ.
‘ದೇಶದ ಒಳಗೆ ಮತ್ತು ಹೊರಗೆ ಇರುವ 9 ಕೋಟಿ ಹೆಮ್ಮೆಯ ಮತ್ತು ಗೌರವಾನ್ವಿತ ಇರಾನಿಗರು ಆಧ್ಯಾತ್ಮಿಕ, ಮಾನವೀಯ, ವೈಜ್ಞಾನಿಕ, ಕೈಗಾರಿಕಾ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು, ನ್ಯಾನೋಟೆಕ್ನಾಲಜಿ ಮತ್ತು ಬಯೋಟೆಕ್ನಾಲಜಿಯಿಂದ ಹಿಡಿದು ಅಣು ಮತ್ತು ಕ್ಷಿಪಣಿ ಸಾಮರ್ಥ್ಯಗಳವರೆಗೆ - ರಾಷ್ಟ್ರೀಯ ಸಂಪತ್ತುಗಳೆಂದು ಪರಿಗಣಿಸುತ್ತಾರೆ. ದೇಶದ ನೀರು, ಭೂಮಿ ಮತ್ತು ಆಕಾಶವನ್ನು ರಕ್ಷಿಸುವಂತೆಯೇ ಇವುಗಳನ್ನೂ ರಕ್ಷಿಸುತ್ತಾರೆ’ ಎಂದು ತಿಳಿಸಿದ್ದಾರೆ.
ವಾಷಿಂಗ್ಟನ್: ಇತ್ತೀಚೆಗೆ ತಾವು ಮಷಿನ್ ಗನ್ ಹಿಡಿದುನಿಂತ ಎಐ ಫೋಟೊವನ್ನು ಹಂಚಿಕೊಳ್ಳುವ ಮೂಲಕ ಶತ್ರುದೇಶ ಇರಾನ್‌ಗೆ ಭೀಕರ ದಾಳಿಯ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ‘ಚಂಡಮಾರುತ ಬರುತ್ತಿದೆ. ಬರುವುದನ್ನು ಏನೂ ತಡೆಯಲಾರದು’ ಎಂಬ ರಹಸ್ಯಮಯ ಸಂದೇಶವನ್ನು ಟ್ರುತ್ ಸೋಶಿಯಲ್ ಮೂಲಕ ರವಾನಿಸಿದ್ದಾರೆ. ಅಮೆರಿಕ ಇರಾನ್ ಮೇಲೆ ಚುಟುಕಾದ ಆದರೆ ಭರ್ಜರಿ ದಾಳಿಗೆ ಯೋಜನೆಯನ್ನು ಸಿದ್ಧಪಡಿಸಿದೆ. ಟ್ರಂಪ್‌ಗೆ ಕಮಾಂಡ್‌ನ ಮುಖ್ಯಸ್ಥ ಬ್ರಾಡ್ ಕೂಪರ್ ಸಂಭಾವ್ಯ ದಾಳಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಆ್ಯಕ್ಸಿಯೋಸ್ ವರದಿ ಮಾಡಿತ್ತು. ಅದರ ಬೆನ್ನಲ್ಲೇ ಟ್ರಂಪ್‌ರಿಂದ ಎಚ್ಚರಿಕೆಯ ಪೋಸ್ಟ್ ಬಂದಿದೆ.
ಅಧ್ಯಕ್ಷರಾಗಿರಲು ಟ್ರಂಪ್ ಮಾನಸಿಕ ಸಮರ್ಥರೇ: ಅಮೆರಿಕ ಸಂಸದರ ಪ್ರಶ್ನೆ
ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧ, ಅದಕ್ಕೆ ವ್ಯಯಿಸುತ್ತಿರುವ ಲಕ್ಷಾಂತರ ಕೋಟಿ ಹಣ ಮತ್ತು ಅಧ್ಯಕ್ಷ ಟ್ರಂಪ್ ಅವರ ವಿಚಿತ್ರ ನಡವಳಿಕೆ ಕುರಿತು ವಿಪಕ್ಷ ಡೆಮಾಕ್ರಟ್ ಸದಸ್ಯರು, ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ನಡೆಯಿತು.
ಫೆ.28ರಂದು ಯುದ್ಧ ಆರಂಭವಾದ ಬಳಿಕ ಇದೇ ಮೊದಲ ಬಾರಿ ಸಂಸತ್ ಸಶಸ್ತ್ರ ಪಡೆಗಳ ಸಮಿತಿ ಮುಂದೆ ಸಚಿವ ಹೆಗ್ಸೆತ್ ಹಾಜರಾಗಿದ್ದರು. ಈ ವೇಳೆ ಯುದ್ಧಕ್ಕೆ ವ್ಯಯಿಸಿದ ಮೊತ್ತ ಸುಮಾರು 2.38 ಲಕ್ಷ ಕೋಟಿ ರು. ಎಂದು ಸರ್ಕಾರ ತಿಳಿಸಿತು. ಇದಕ್ಕೆ ವಿಪಕ್ಷಗಳು ತೀವ್ರ ಅನುಮಾನ ವ್ಯಕ್ತಪಡಿಸಿದವು. ರಕ್ಷಣಾ ಸಚಿವನಾಗಿ ಹೆಗ್ಸೆತ್ ಅವರ ಸಾಮರ್ಥ್ಯವನ್ನು ಪ್ರಶ್ನಿಸಿ, ಅಧ್ಯಕ್ಷ ಟ್ರಂಪ್ ಮಾನಸಿಕವಾಗಿ ಸಮರ್ಥರಾಗಿದ್ದಾರೆಯೇ ಎಂದೂ ಕಟುವಾಗಿ ಪ್ರಶ್ನಿಸಿದವು. ಇದಕ್ಕೆ ಉತ್ತರಿಸಿದ ಹೆಗ್ಸೆತ್, ‘ಟ್ರಂಪ್ ತಲೆಮಾರುಗಳಿಂದಲೂ ನಾವು ಪಡೆದ ಅತ್ಯಂತ ಚುರುಕಾದ ಮತ್ತು ತೀಕ್ಷ್ಣವಾದ ನಾಯಕ’ ಎಂದು ಸಮರ್ಥಿಸಿಕೊಂಡರು.ಇರಾನ್ ಯುದ್ಧದ ಮಧ್ಯದಲ್ಲೇ ಸೇನೆಯ ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಿದ್ದಕ್ಕೆ ಡೆಮಾಕ್ರಟ್ ಮತ್ತು ಕೆಲವು ರಿಪಬ್ಲಿಕನ್ ಸದಸ್ಯರೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಈ ವಿಷಯದಲ್ಲಿ ಸರ್ಕಾರ ಜನರ ದಿಕ್ಕುತಪ್ಪಿಸಿದೆ ಎಂದೂ ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.