ರಾಜ್ಯದ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರದ್ದೇ ಅಡ್ಡಿ : ಸಿಎಂ

KannadaprabhaNewsNetwork |  
Published : Feb 09, 2026, 03:30 AM ISTUpdated : Feb 09, 2026, 05:09 AM IST
CM Siddaramaiah

ಸಾರಾಂಶ

ರಾಜ್ಯದಲ್ಲಿ ಪ್ರಮುಖ ನೀರಾವರಿ ಯೋಜನೆಗಳು ಕೇಂದ್ರ ಸರ್ಕಾರದ ಅಸಹಕಾರದಿಂದಲೇ ನನೆಗುದಿಗೆ ಬಿದ್ದಿವೆ. ಮಹದಾಯಿ ಯೋಜನೆಗೆ 2018ರಲ್ಲಿಯೇ ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದ್ದು, ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ₹1,100 ಕೋಟಿ ಮೀಸಲಿರಿಸಿವೆ

 ಹುಬ್ಬಳ್ಳಿ :  ರಾಜ್ಯದಲ್ಲಿ ಪ್ರಮುಖ ನೀರಾವರಿ ಯೋಜನೆಗಳು ಕೇಂದ್ರ ಸರ್ಕಾರದ ಅಸಹಕಾರದಿಂದಲೇ ನನೆಗುದಿಗೆ ಬಿದ್ದಿವೆ. ಮಹದಾಯಿ ಯೋಜನೆಗೆ 2018ರಲ್ಲಿಯೇ ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದ್ದು, ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ₹1,100 ಕೋಟಿ ಮೀಸಲಿರಿಸಿ, ಟೆಂಡರ್ ಕರೆದು ಏಜೆನ್ಸಿ ಕೂಡ ಫಿಕ್ಸ್ ಮಾಡಿದೆ. ಕೇಂದ್ರದ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕರೆ, ನಾಳೆಯೇ ಕೆಲಸ ಪ್ರಾರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಭಾನುವಾರ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ತಮ್ಮ ಭಾಷಣದುದ್ದಕ್ಕೂ ಕೇಂದ್ರದ ಎನ್‌ಡಿಎ ಸರ್ಕಾರ ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದ ಸಿದ್ದರಾಮಯ್ಯ, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಮಹದಾಯಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿ ಮಾಡುತ್ತಿಲ್ಲ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಆದರೆ, ಕೇಂದ್ರದ ಪರಿಸರ ಇಲಾಖೆ ಅನುಮತಿ ಕೊಡದೇ ಇರುವುದರಿಂದ ಕಾಮಗಾರಿ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಗೋವಾ, ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಅರಣ್ಯ ಇಲಾಖೆಯ ಅನುಮತಿ ಕೊಡಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ರಾಜ್ಯ ಸರ್ಕಾರದ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ. ಅವರು ಈ ಕಾರ್ಯಕ್ರಮಕ್ಕೆ ಬಂದಿದ್ದರೆ ಈ ಬಗ್ಗೆ ಅವರನ್ನೇ ಕೇಳುತ್ತಿದ್ದೆ ಎಂದರು.

ಈ ಹಿಂದೆ ಯಡಿಯೂರಪ್ಪ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮಹದಾಯಿ ಜಾರಿ ಮಾಡುತ್ತೇವೆ. ಇದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಆದರೆ, ನಂತರ ಬಂದ ಬೊಮ್ಮಾಯಿ ಸರ್ಕಾರ ಈ ಯೋಜನೆಯ ಜಾರಿಗೆ ಮುಂದಾಗಲಿಲ್ಲ. ಮಹದಾಯಿಯಂತೆ, ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ 2003ರಲ್ಲಿಯೇ ಸುಪ್ರೀಂಕೋರ್ಟ್ ತೀರ್ಪು ಬಂದಿದೆ. ಆದರೆ, ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮಾಡದ ಹಿನ್ನೆಲೆಯಲ್ಲಿ ಈ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿ ತೆಲಂಗಾಣ, ಆಂಧ್ರಪ್ರದೇಶ ನಡುವೆ ತಿಕ್ಕಾಟ ಇದೆ. ಅದು ನಮಗೇನು ಸಂಬಂಧ? ಎಂದು ಪ್ರಶ್ನಿಸಿದರು.

ಇನ್ನು, ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಹಾಕಿದ ಅರ್ಜಿ ನವೆಂಬರ್ ತಿಂಗಳಲ್ಲಿಯೇ ವಜಾ ಆಗಿದೆ. ಆದರೂ, ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಅನುಮತಿ ನೀಡಿಲ್ಲ. ಅದೇ ರೀತಿ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ₹5,300 ಕೋಟಿ ಕೊಡುವುದಾಗಿ ಬಜೆಟ್‌ನಲ್ಲಿ ಘೋಷಿಸಿತ್ತು. ಬಜೆಟ್‌ನಲ್ಲಿ ಘೋಷಣೆಯಾಗಿ 3 ವರ್ಷವಾದರೂ ಬಿಡಿಗಾಸು ಬಂದಿಲ್ಲ. ಆಗ ರಾಜ್ಯದಲ್ಲಿ ಸಿಎಂ ಆಗಿದ್ದ ಬೊಮ್ಮಾಯಿಯವರು, ಇದನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುತ್ತೇವೆ ಎಂದಿದ್ದರು. ಅದೂ ಆಗಿಲ್ಲ ಎಂದು ಕಿಡಿಕಾರಿದರು.

ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ ಎಂದು ಬಿಜೆಪಿಯವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಆದರೆ, ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಲೇ ಇವೆ. ಇಂದು 200 ಕೋಟಿ ರು. ವೆಚ್ಚದಲ್ಲಿ ಬೆಣ್ಣೆ ಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಹಿಂದೆ 1,610 ಕೋಟಿ ರು. ಅಂದಾಜು ವೆಚ್ಚದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ವಿಳಂಬ ಮಾಡಿದ ನಂತರ ರಾಜ್ಯ ಸರ್ಕಾರದಿಂದಲೇ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತಿದೆ. ಈ ಹಳ್ಳದ ಪ್ರವಾಹದಿಂದ ಸುಮಾರು 37 ಹಳ್ಳಿಗಳು ಹಾಗೂ 20 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ತೊಂದರೆ ಉಂಟಾಗುತ್ತಿತ್ತು. ಅದನ್ನು ತಪ್ಪಿಸುತ್ತಿದ್ದೇವೆ ಎಂದರು.

ಅನುದಾನ ವಂಚನೆ:

ಇದೆ ವೇಳೆ ಕೇಂದ್ರಕ್ಕೆ ನಾವು 4.5 ಲಕ್ಷ ಕೋಟಿ ತೆರಿಗೆ ಕೊಟ್ಟರೆ, ಕರ್ನಾಟಕಕ್ಕೆ ವಾಪಸ್ ಬರುವುದು ಕೇವಲ 60 ಸಾವಿರ ಕೋಟಿ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮನರೇಗಾ ಮರು ಜಾರಿಗೆ ಹೋರಾಟ:

ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಮನರೇಗಾ ಯೋಜನೆ ಜಾರಿಗೆ ತಂದಿದ್ದರು. ಈಗ ಈ ಯೋಜನೆಯನ್ನು ರದ್ದು ಮಾಡಿ ವಿಬಿ-ಜಿ ರಾಮ್‌ ಜಿ ಕಾಯ್ದೆ ಮಾಡಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರು ನಿರುದ್ಯೋಗಿಗಳಾಗಲಿದ್ದಾರೆ. ಅಲ್ಲದೇ, ಈ ಯೋಜನೆಗೆ ಮೊದಲು ಕೇಂದ್ರದಿಂದ ಶೇ. 90ರಷ್ಟು ಪಾವತಿಯಾಗುತ್ತಿತ್ತು. ಆದರೀಗ ಅದನ್ನು ಶೇ.60ಕ್ಕೆ ಇಳಿಸಿ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹಾಕುತ್ತಿದ್ದಾರೆ. ಬಿಜೆಪಿಯವರು ಈ ಯೋಜನೆಗೆ ಧರ್ಮದ ಅರ್ಥ ಕಲ್ಪಿಸುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ನಾವು ಮನುಷ್ಯ ಧರ್ಮ ನಂಬಿದವರು. ಹೀಗಾಗಿ, ವಿಬಿ-ಜಿ ರಾಮ್‌ ಜಿ ವಿರುದ್ಧ ಹೋರಾಟ ಗಟ್ಟಿಗೊಳಿಸಿ ಮನರೇಗಾ ಮರುಸ್ಥಾಪನೆಗೆ ಒತ್ತಾಯಿಸಲಾಗುವುದು ಎಂದರು.

ಹುಬ್ಬಳ್ಳಿಯ ಶಿರಗುಪ್ಪ ಗ್ರಾಮದಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಗೆ ಸಿಎಂ ಚಾಲನೆ

ಈ ವೇಳೆ ನೀರಾವರಿ ಯೋಜನೆಗೆ ಅನುಮೋದನೆ, ಅನುದಾನ ಹಂಚಿಕೆ ಬಗ್ಗೆ ಸಿಎಂ ಸಿದ್ದು ಆಕ್ರೋಶ

ಮಹದಾಯಿಗೆ 2018ರಲ್ಲೇ ಸುಪ್ರೀಂ ಅನುಮತಿಸಿದರೂ ಕೇಂದ್ರದ ಅನುಮತಿದ ಕಾರಣ ಕೆಲಸ ವಿಳಂಬ

ಕೃಷ್ಣಾ ಮೇಲ್ದಂಡೆ 3ನೇ ಹಂತಕ್ಕೆ ಕೇಂದ್ರ ಅಧಿಸೂಚನೆ ಪ್ರಕಟಿಸದ ಕಾರಣ ಈವರೆಗೂ ಕಾಮಗಾರಿ ಇಲ್ಲ

ಮೇಕೆದಾಟು ಕೇಸಲ್ಲಿ ತಮಿಳ್ನಾಡಿನ ಅರ್ಜಿ ವಜಾ ಆದರೂ ಯೋಜನೆಗೆ ಕೇಂದ್ರ ಅನುಮತಿ ನೀಡುತ್ತಿಲ್ಲ

ಗ್ಯಾರಂಟಿಗಳ ಜಾರಿಯಿಂದಾಗಿ ಯೋಜನೆ ಜಾರಿಗೆ ರಾಜ್ಯದ ಬಳಿ ಇಲ್ಲ ಎಂಬುದೆಲ್ಲಾ ಸುಳ್ಳು ಪ್ರಚಾರ

ವ್ಯಾಪಾರ ಒಪ್ಪಂದದಲ್ಲಿ ಅಮೆರಿಕಕ್ಕೆ ಮೋದಿ ಶರಣು 

ಬೆಂಗಳೂರು: ‘ಭಾರತ ಹಾಗೂ ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವು ಪ್ರಧಾನಿ ಮೋದಿ ಅವರ ಶರಣಾಗತಿಯಾಗಿದೆ. ಈ ಒಪ್ಪಂದ ದೇಶದ 72 ಕೋಟಿ ರೈತರ ಪಾಲಿಗೆ ಮರಣಶಾಸನ ಆಗಲಿದೆ. ದೇಶದ ಸ್ವಾಭಿಮಾನ ಸಾರ್ವಭೌಮತ್ವಕ್ಕೆ ಧಕ್ಕೆ ತಂದ ಪ್ರಧಾನಿ ಮೋದಿ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

 ‘ಇದು ಮುಕ್ತ ವ್ಯಾಪಾರವಲ್ಲ ಆರ್ಥಿಕ ಬಲವಂತ. ಎರಡು ದೇಶಗಳ ನಡುವಿನ ಸಂಬಂಧಗಳು ಸಮಾನತೆ, ಪರಸ್ಪರ ಗೌರವದ ಬುನಾದಿ ಮೇಲೆ ಸ್ಥಾಪನೆಯಾಗಬೇಕು. ಒತ್ತಡ, ಬೆದರಿಕೆ, ಹೇರಿಕೆಗಳಿಂದ ಅಲ್ಲ. ಆದರೆ ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ಗಮನಿಸಿದರೆ ಇದು ಒಡೆಯನ ಆಜ್ಞೆಗೆ ಸೇವಕ ತಲೆಯಾಡಿಸಿದಂತಿದೆ’ ಎಂದೂ ಅವರು ಕಿಡಿಕಾರಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’
ಯುವಕರಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸಲು ಆರ್‌ಎಸ್ಎಸ್‌ ಶ್ರಮಿಸುತ್ತದೆ : ಬಿ.ಎಲ್. ಸಂತೋಷ್