ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ

Published : Feb 08, 2026, 06:32 AM IST
DCM DKS

ಸಾರಾಂಶ

‘5 ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ. ಬದಲಾವಣೆ ಬೇಡಿಕೆಗೆ ಹೈಕಮಾಂಡ್‌ ಸೊಪ್ಪು ಹಾಕಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ನೀಡಿದ ಹೇಳಿಕೆ ಸತತ 2ನೇ ದಿನವೂ ಬಿರುಸಿನ ಪ್ರತಿಕ್ರಿಯೆಗೆ ಕಾರಣವಾಗಿದೆ

‘5 ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ. ಬದಲಾವಣೆ ಬೇಡಿಕೆಗೆ ಹೈಕಮಾಂಡ್‌ ಸೊಪ್ಪು ಹಾಕಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ನೀಡಿದ ಹೇಳಿಕೆ ಸತತ 2ನೇ ದಿನವೂ ಬಿರುಸಿನ ಪ್ರತಿಕ್ರಿಯೆಗೆ ಕಾರಣವಾಗಿದೆ. ‘ಹೈಕಮಾಂಡ್‌ ಏನು ಹೇಳುತ್ತೋ ನೋಡಬೇಕು’ ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದರೆ, ’ಸಿಎಂ ಬದಲಾವಣೆ ಇಲ್ಲ’ ಎಂದು ಯತೀಂದ್ರ ಪುನರುಚ್ಚರಿಸಿದ್ದಾರೆ. ಕಾಂಗ್ರೆಸ್‌ನ ವಿವಿಧ ನಾಯಕರಿಂದಲೂ ಈ ಬಗ್ಗೆ ಹೇಳಿಕೆ-ಪ್ರತಿಹೇಳಿಕೆಗಳು ಬಂದಿವೆ.

ಹೈಕಮಾಂಡ್‌ ಏನು ಹೇಳುತ್ತೆ? - ಕಾದು ನೋಡ್ಬೇಕು: ಡಿಸಿಎಂ

‘ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬ ಹಂಬಲ ಜನರಿಗಿದೆ. ಶಾಸಕರಿಗೂ ಇದೆ, ಮಾಧ್ಯಮದವರಿಗೂ ಇದೆ‌. ಆದರೆ, ಪಕ್ಷದ ಹೈಕಮಾಂಡ್‌ ಏನು ಹೇಳುತ್ತದೆ ಎಂಬುದನ್ನು ನೋಡಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕರಾವಳಿಯಲ್ಲಿ ಡಿಕೆಶಿ ಸಿಎಂ ಆಗಬೇಕೆಂಬ ಕೂಗು ಹೆಚ್ಚುತ್ತಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ನಾನು ಸಿಎಂ ಆಗಬೇಕೆಂಬುದು ಈ ರಾಜ್ಯದ ಜನರ ಹಂಬಲ. ಆದರೆ, ಈ ವಿಷಯದಲ್ಲಿ ಪಕ್ಷದ ಹೈಕಮಾಂಡ್‌ ತೀರ್ಮಾನವೇ ಅಂತಿಮ’ ಎಂದರು. ಬಜೆಟ್ ಬಳಿಕ ತಾವು ಸಿಎಂ ಆಗುವ ನಿರೀಕ್ಷೆ ಇದೆಯೇ ಎಂಬ ಪ್ರಶ್ನೆಗೆ, ‘ಕಾಲವೇ ಉತ್ತರ ಕೊಡುತ್ತದೆ’ ಎಂದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಿಎಂ ಆಗಬೇಕೆಂಬ ಒತ್ತಾಯ ಕೇಳಿ ಬರುತ್ತಿರುವ ಕುರಿತು ಪ್ರತಿಕ್ರಿಯಿಸಿ, ‘ಅದರಲ್ಲಿ ತಪ್ಪೇನಿದೆ?. ಅವರವರ ಅಭಿಮಾನಿಗಳು ಆಸೆ ಪಡ್ತಾರೆ. ಅದಕ್ಕೆಲ್ಲ ಬೇಡ ಎನ್ನುವುದಕ್ಕೆ ಆಗಲ್ಲ’ ಎಂದರು.

ಸಿಎಂ ಬದಲಿಲ್ಲ: ಯತೀಂದ್ರ ಪುನರುಚ್ಚಾರ!

‘ಪಕ್ಷದ ಹೈಕಮಾಂಡ್‌ ನಾಯಕರು ಬಂದು ರಾಜ್ಯದಲ್ಲಿ ಸಿಎಂ ಬದಲಾಗ್ತಾರೆ ಎಂದು ಯಾರಿಗೂ ಹೇಳಿಲ್ಲ. ಹೀಗಾಗಿ, ಸಿಎಂ ಬದಲಾಗ್ತಾರೆ ಎಂಬುದಕ್ಕೆ ಏನೂ ಕಾರಣ ಇಲ್ಲ. ಸಿದ್ದರಾಮಯ್ಯನವರು 5 ವರ್ಷ ಅವಧಿ ಪೂರೈಸಲ್ಲ ಎಂದು ಹೇಳಲು ಯಾವುದೇ ಕಾರಣಗಳು ಕಾಣಿಸುತ್ತಿಲ್ಲ. ಹೀಗಾಗಿ, ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ’ ಎಂದು ವಿಧಾನ ಪರಿಷತ್‌ ಸದಸ್ಯ, ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

ಬೀದರ್‌ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘5 ವರ್ಷವೂ ಸಿದ್ದರಾಮಯ್ಯನವರೇ ಸಿಎಂ ಆಗಿರ್ತಾರೆ’ ಎಂದು ಮೈಸೂರಿನಲ್ಲಿ ಶುಕ್ರವಾರ ತಾವು ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡ ಯತೀಂದ್ರ, ‘ಒಂದು ವೇಳೆ, ಪಕ್ಷದ ಹೈಕಮಾಂಡ್‌ ನವರು ಡಿ.ಕೆ.ಶಿವಕುಮಾರ ಅವರು ಸಿಎಂ ಆಗಬೇಕು ಎಂದು ಹೇಳಿದರೆ ಅವರೇ ಸಿಎಂ ಆಗ್ತಾರೆ. ಆದರೆ, ಹೈಕಮಾಂಡ್‌ ಸದ್ಯಕ್ಕೆ ಅಂತಹ ಯಾವುದೇ ಸೂಚನೆ ನೀಡಿಲ್ಲ. ಸಿಎಂ ಬದಲಾಗ್ತಾರೆ ಎಂದು ಯಾರಿಗೂ ಹೇಳಿಲ್ಲ. ಹೀಗಾಗಿ, ಸಿದ್ದರಾಮಯ್ಯನವರೇ 5 ವರ್ಷ ಪೂರ್ಣಾವಧಿ ಪೂರೈಸುತ್ತಾರೆ ಎಂದಿದ್ದೇನೆ’ ಎಂದರು.

ಎಲ್ಲಾ ಪಕ್ಷದಲ್ಲಿಯೂ ಸಿಎಂ ಆಗಬೇಕೆಂಬ ಕನಸು ಹೊತ್ತವರು ಇದ್ದಾರೆ. ಅದೇ ರೀತಿ ನಮ್ಮ ಪಕ್ಷದಲ್ಲಿಯೂ ಇದ್ದಾರೆ. ಸಿಎಂ ಸ್ಥಾನಕ್ಕೆ ಅರ್ಹರೂ ಅನೇಕರಿದ್ದಾರೆ. ಆದರೆ, ಹೈಕಮಾಂಡ್‌ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೆ ಎಂದರು. ‘ಅಷ್ಟಕ್ಕೂ ನಾನೇನು ಸ್ಫೋಟಕ ಹೇಳಿಕೆ ನೀಡಿಲ್ಲ. ಮೊದಲಿನಿಂದ ಏನು ಹೇಳುತ್ತ ಬಂದಿದ್ದೇನೋ ಅದನ್ನೇ ಈಗಲೂ ಹೇಳುತ್ತಿದ್ದೇನೆ’ ಎಂದರು.

ದಿಲ್ಲಿ ನಾಯಕರೇ ಹೈಕಮಾಂಡ್‌: ಡಿಕೆಶಿಗೆ ಯತೀಂದ್ರ ಟಾಂಗ್‌

‘ನಮಗೆ ಈಗ ಯತೀಂದ್ರ ಅವರೇ ಹೈಕಮಾಂಡ್‌’ ಎಂಬ ಡಿಕೆಶಿ ವ್ಯಂಗ್ಯದ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನಾನೊಬ್ಬ ಪಕ್ಷದ ಕಾರ್ಯಕರ್ತ. ನಮಗೆಲ್ಲರಿಗೂ ದೆಹಲಿಯ ಉನ್ನತ ನಾಯಕರೇ ಹೈಕಮಾಂಡ್‌. ಹೈಕಮಾಂಡ್‌ ನಮಗೆಲ್ಲರಿಗೂ ಸುಪ್ರೀಂ. ಹೈಕಮಾಂಡ್‌ ನವರು ಏನು ಹೇಳ್ತಾರೋ ಅದಕ್ಕೆ ನಾವೆಲ್ಲ ಬದ್ಧರಾಗಿರಬೇಕು. ಹೈಕಮಾಂಡ್‌ ನಿರ್ಧಾರಕ್ಕೆ ಸಿದ್ದರಾಮಯ್ಯನವರೂ ಬದ್ಧರಾಗಿರಬೇಕು. ಡಿ.ಕೆ.ಶಿವಕುಮಾರ ಅವರೂ ಬದ್ಧರಾಗಿರಬೇಕು. ನಾನೂ ಬದ್ಧನಾಗಿರಬೇಕು’ ಎಂದು ತಿರುಗೇಟು ನೀಡಿದರು.

ಸಿಎಂ ಅಧಿಕಾರ ಹಂಚಿಕೆ ಪ್ರಸ್ತಾಪ ಆಗೇ ಇಲ್ಲ: ಪರಂ

‘ರಾಜ್ಯದಲ್ಲಿ ಸಿಎಂ ಅಧಿಕಾರ ಹಂಚಿಕೆಯ ಪ್ರಸ್ತಾಪವೇ ನಡೆದಿಲ್ಲ ಎಂದ ಮೇಲೆ ಅದರ ಜಾರಿಯ ಬಗ್ಗೆ ಪ್ರಶ್ನೆಗಳೇ ಇಲ್ಲ’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ‘5 ವರ್ಷವೂ ನನ್ನ ತಂದೆಯವರೇ ಸಿಎಂ’ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ಪರಮೇಶ್ವರ ಅವರ ಹೇಳಿಕೆ ಬಂದಿದ್ದು, ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಯತೀಂದ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯನವರು ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿದೆ. ಹೈಕಮಾಂಡ್ ಎಲ್ಲಾದರೂ ಸಿದ್ದರಾಮಯ್ಯ ಬೇಡ ಎಂದು ಹೇಳಿದೆಯಾ? ಇಲ್ಲ ತಾನೇ? ಸಿದ್ದರಾಮಯ್ಯನವರ ಬದಲಾವಣೆ ಬಗ್ಗೆ ಹೈಕಮಾಂಡ್ ಎಲ್ಲೂ ಮಾತನಾಡಿಲ್ಲ. ಹೈಕಮಾಂಡ್‌ ಮಾತನಾಡಿಲ್ಲ ಎಂದಾದರೆ, ಅಧಿಕಾರ ಹಂಚಿಕೆಯ ಪ್ರಸ್ತಾಪವೇ ನಡೆದಿಲ್ಲ ಎಂದರ್ಥ. ಹೈಕಮಾಂಡ್ ಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಗೊಂದಲ ಎಂದು ಅನ್ನಿಸಿಲ್ಲ. ಹೈಕಮಾಂಡ್ ತನ್ನ ಅಗತ್ಯ ಇದ್ದಾಗ ಮಾತನಾಡುತ್ತದೆ ಎಂದರು.

‘ಪಕ್ಷದಲ್ಲಿ ಕೆಲವರು ತಮ್ಮ, ತಮ್ಮ ಅಭಿಪ್ರಾಯ ಹೇಳಬಹುದು. ಅದು ತಪ್ಪು ಎನ್ನಲಾಗದು. ಸಿಎಂ ಕುರ್ಚಿಯ ಬಗ್ಗೆ ಗೊಂದಲ ಇದ್ದಿದ್ದರೆ ಸಿಎಲ್ಪಿ ಸಭೆಯಲ್ಲಿ ಶಾಸಕರು ಕೇಳುತ್ತಿದ್ದರು. ಸಿಎಲ್ಪಿ ಸಭೆಯಲ್ಲಿ ಯಾರು ಕೂಡ ಆ ಬಗ್ಗೆ ಮಾತನಾಡಿಲ್ಲ. ಅಲ್ಲಿಗೆ ಯಾವ ಗೊಂದಲ ಇಲ್ಲ ಎಂದರ್ಥ. ಯತೀಂದ್ರ ಅವರಿಗೆ ಅವರದೇ ಆದಂತಹ ಮಾಹಿತಿ ಇರಬಹುದು. ಅದನ್ನೇ ಆಧರಿಸಿ ಅವರು ಹೇಳಿರುತ್ತಾರೆ’ ಎಂದು ಹೇಳಿದರು.

ಘೋಷಣೆಗಳಿಗೆ ಮಹತ್ವ ಕೊಡಬೇಡಿ:

‘ಮುಂದಿನ ಸಿಎಂ’ ಎಂದು ಕಾರ್ಯಕರ್ತರು ಜೈ-ಜೈ ಅಂದ ಕೂಡಲೇ ಸಿಎಂ ಆಗಲು ಆಗುತ್ತಾ? ನನಗೂ ಬಹಳಷ್ಟು ಜನ ಮುಂದಿನ ಸಿಎಂ ಎಂದು ಕೂಗುತ್ತಾರೆ. ನಾನು ಹೋದ ಮೇಲೆ ಇನ್ನೊಬ್ಬರನ್ನು ಕೂಗುತ್ತಾರೆ. ಹೀಗಾಗಿ, ಘೋಷಣೆಗಳಿಗೆ ಹೆಚ್ಚಿನ ಮಹತ್ವ ಕೊಡಬೇಡಿ. ನಾನು ಹೋದ ಕಡೆಯಲೆಲ್ಲಾ ‘ಮುಂದಿನ ಸಿಎಂ ಪರಮೇಶ್ವರ’ ಎಂದು ಕೂಗುತ್ತಾರೆ. ಅದಕ್ಕೆ ಏನು ಮಾಡಲು ಸಾಧ್ಯ?’ ಎಂದು ಅವರು ಪ್ರಶ್ನಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮುಸ್ಲಿಮರ ಸಂಖ್ಯೆ ಎಂದಿಗೂ ಹಿಂದುಗಿಂತ ಹೆಚ್ಚಲ್ಲ : ಒವೈಸಿ
ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ