ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ

Published : Feb 07, 2026, 12:23 PM IST
Siddaramaiah

ಸಾರಾಂಶ

ರಾಜ್ಯ ಸರ್ಕಾರಗಳ ಅಂಗೀಕಾರವಿಲ್ಲದೆ ಮನರೇಗಾ ರದ್ದುಪಡಿಸಿ ವಿಬಿ-ಜಿ ರಾಮ್‌ ಜಿ ಕಾಯ್ದೆ ಜಾರಿಗೊಳಿಸಿದ ಕೇಂದ್ರ ಸರ್ಕಾರದ ಕುತಂತ್ರವನ್ನು ರೈತರು ಒಕ್ಕೊರಲಿನಿಂದ ವಿರೋಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

  ಬೆಂಗಳೂರು :  ರಾಜ್ಯ ಸರ್ಕಾರಗಳ ಅಂಗೀಕಾರವಿಲ್ಲದೆ ಮನರೇಗಾ ರದ್ದುಪಡಿಸಿ ವಿಬಿ-ಜಿ ರಾಮ್‌ ಜಿ ಕಾಯ್ದೆ ಜಾರಿಗೊಳಿಸಿದ ಕೇಂದ್ರ ಸರ್ಕಾರದ ಕುತಂತ್ರವನ್ನು ರೈತರು ಒಕ್ಕೊರಲಿನಿಂದ ವಿರೋಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಶುಕ್ರವಾರ ಅರಮನೆ ಮೈದಾನದಲ್ಲಿ ಕೃಷಿ ಇಲಾಖೆ ಆಯೋಜಿಸಿರುವ ಮೂರು ದಿನಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2026 ಉತ್ಪಾದನೋತ್ತರ ಕೃಷಿ-ರೈತರ ಸಬಲೀಕರಣ ಹಾಗೂ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಈ ಹಿಂದೆ ಮನರೇಗಾ ಯೋಜನೆ ಜಾರಿಗೊಳಿಸಿತ್ತು. ಯೋಜನೆಯಡಿ ಆದಿವಾಸಿಗಳು, ಕಾರ್ಮಿಕರಿಗೆ, ಮಹಿಳೆಯರಿಗೆ ಉದ್ಯೋಗ ನೀಡಲಾಗುತ್ತಿದ್ದು, ಗ್ರಾಮ ಸಭೆಗಳಲ್ಲಿ ಕಾಮಗಾರಿ ನಿರ್ಧಾರವಾಗುತ್ತಿತ್ತು. ಆದರೆ, ಈ ಅಧಿಕಾರ ಈಗ ಕೇಂದ್ರ ಸರ್ಕಾರದ ಕೈಯಲ್ಲಿದ್ದು, ಕೇಂದ್ರದ ಸಮಿತಿ ನಿರ್ಧರಿಸಿದಂತೆ ಕಾಮಗಾರಿ, ಅನುದಾನ ನೀಡಲಾಗುತ್ತದೆ. ಮೊದಲು ಕೇಂದ್ರ ಸರ್ಕಾರವೇ ಕಾರ್ಮಿಕರ ವೇತನದ ಪೂರ್ತಿ ಹಣ ಪಾವತಿ ಮಾಡುತ್ತಿದ್ದು, ಈಗ ಕೇಂದ್ರ ಕೇವಲ ಶೇ.60ರಷ್ಟು ಅನುದಾನ ನೀಡುತ್ತಿದ್ದು, ಶೇ.40ರಷ್ಟನ್ನು ರಾಜ್ಯ ಸರ್ಕಾರ ಭರಿಸಬೇಕಿದೆ ಎಂದು ಹೇಳಿದರು.

ಯೋಜನೆಯನ್ನು ರಾಜ್ಯ ಸರ್ಕಾರಗಳ ಅಂಗೀಕಾರವಿಲ್ಲದೆ ರದ್ದುಪಡಿಸಿ ವಿಬಿ-ಜಿ ರಾಮ್‌ ಜಿ ಯೋಜನೆ ಜಾರಿಗೊಳಿಸಲಾಗಿದೆ. ಇದರಲ್ಲಿ ಮಹಾತ್ಮಾಗಾಂಧಿ ಅವರ ಹೆಸರು ತೆಗೆಯಲಾಗಿದೆ. ಕಾರ್ಮಿಕರು ಸ್ವಾವಲಂಬಿ, ಆತ್ಮಗೌರವದ ಜೀವನ ನಡೆಸಲು ಈ ಕಾಯ್ದೆ ಅಡ್ಡಿಯಾಗಲಿದ್ದು, ರಾಜ್ಯದ ರೈತರೆಲ್ಲರೂ ಮನರೇಗಾ ಯೋಜನೆ ಮರು ಸ್ಥಾಪಿಸಿ, ವಿಬಿ ಜಿ ರಾಮ್ ಜಿ ಯೋಜನೆ ತಿರಸ್ಕರಿಸಬೇಕು ಎಂಬು ಮನವಿ ಮಾಡಿದರು.

ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳಬೇಕು

ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳಬೇಕು. ಸ್ವಾತಂತ್ರ್ಯಪೂರ್ವದಲ್ಲಿ ಶೇ.80 ರಷ್ಟು ಜನ ಕೃಷಿಯನ್ನು ಅವಲಂಬಿಸಿದ್ದರು. ಈಗ ಈ ಪ್ರತಿಶತ ಶೇ.62ಕ್ಕೆ ಇಳಿದಿದೆ. ಕೃಷಿಯಲ್ಲಿ ಉತ್ಪಾದನೋತ್ತರ ಕಾರ್ಯಗಳನ್ನು ಕೈಗೊಂಡಾಗ ಮಾತ್ರ ಕೃಷಿ ಲಾಭದಾಯಕವಾಗುತ್ತದೆ. ರೈತರು ಉದ್ಯಮಿಗಳಾಗಬೇಕು. ಉತ್ಪನ್ನಗಳನ್ನು ಬೆಳೆಯುವ ಜೊತೆ, ಸಂಗ್ರಹಣೆ, ಸಂಸ್ಕರಣೆ, ಪ್ಯಾಕೇಜಿಂಗ್, ಮಾರುಕಟ್ಟೆ, ಉಪ ಉತ್ಪನ್ನಗಳ ಅಭಿವೃದ್ಧಿಯಲ್ಲಿ ರೈತರು ನಿರತರಾಗಬೇಕಿದೆ. ಕೃಷಿಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಕೊಳ್ಳುವುದು ಅಗತ್ಯ ಎಂದರು.

ಬೆಳೆವಿಮೆ ಯೋಜನೆ ಜಾರಿಯಲ್ಲಿ ಕರ್ನಾಟಕ, ದೇಶದಲ್ಲಿ ನಂ.1 ರಾಜ್ಯವಾಗಿದ್ದು, ಈವರೆಗೆ 6000 ಕೋಟಿ ರು. ವಿಮೆಪರಿಹಾರವನ್ನು ರೈತರಿಗೆ ವಿತರಿಸಲಾಗಿದೆ. ಕಬ್ಬು ಬೆಳೆ ರೈತರೊಂದಿಗೆ ಚರ್ಚಿಸಿ ಸಂಧಾನ ನಡೆಸಿ ಕಬ್ಬು ಬೆಳೆಗೆ ಬೆಲೆ ನಿಗದಿಪಡಿಸಲಾಯಿತು. ಅಂತೆಯೇ ತೊಗರಿ ಬೆಳೆಗೆ ಖರೀದಿ ಕೇಂದ್ರವನ್ನು ಒಂದು ತಿಂಗಳ ಮುಂಚೆಯೇ ತೆರೆದು ಅನುಕೂಲ ಕಲ್ಪಿಸಲಾಯಿತು. ಮೆಕ್ಕೆಜೋಳ ಹೆಚ್ಚುವರಿ ಇಳುವರಿ ಬಂದು 54 ಲಕ್ಷ ಮೆಟ್ರಿಕ್‌ ಟನ್ ಉತ್ಪಾದನೆಯಾಗಬಹುದಾಗಿದೆ. ಆದ್ದರಿಂದ ಕೇಂದ್ರ ಕ್ವಿಂಟಲ್ ವೊಂದಕ್ಕೆ 2400 ರು. ನಿಗದಿ ಪಡಿಸಿದ್ದು, ಮೆಕ್ಕೆಜೋಳ ಬಳಸುವ ಕಾರ್ಖಾನೆಗಳು, ಎಥೆನಾಲ್ ತಯಾರಕರೊಂದಿಗೆ ಚರ್ಚೆ ನಡೆಸಿ, 40 ಲಕ್ಷ ಮೆ.ಟನ್ ಮೆಕ್ಕೆಜೋಳ ಖರೀದಿಗೆ ಅನುವು ಮಾಡಿಕೊಡಲಾಯಿತು ಎಂದರು.--

ರೈತರು ಬ್ರ್ಯಾಂಡಿಂಗ್‌ ಮಾಡಿ: ಚಲುವ

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿ, ರೈತರು ಸ್ಥಿರವಾದ ಕೃಷಿ, ಬ್ರ್ಯಾಂಡಿಂಗ್, ಮಾರುಕಟ್ಟೆ ಮತ್ತು ಸಾಲ ಸೌಲಭ್ಯಗಳನ್ನು ಪಡೆದರೆ ಕೃಷಿಯಲ್ಲಿ ಲಾಭದಾಯಕ ಆದಾಯ ಗಳಿಸಲು ಸಾಧ್ಯ. ರಾಜ್ಯಾದ್ಯಂತ 450ಕ್ಕೂ ಹೆಚ್ಚು ಹೈಟೆಕ್ ಹಾರ್ವೆಸ್ಟ್ ಹಬ್‌ಗಳನ್ನು ಸ್ಥಾಪಿಸಲಾಗಿದ್ದು, ಸುಮಾರು 40 ಲಕ್ಷ ಜನರಿಗೆ ಪ್ರಯೋಜನವಾಗಿದೆ, ಎಸ್‌ಸಿ-ಎಸ್‌ಟಿ ರೈತರು 50 ಲಕ್ಷ ರು. ಸಬ್ಸಿಡಿ ಪಡೆಯುತ್ತಿದ್ದಾರೆ. ರಾಜ್ಯವು ರೈತರಿಗೆ 6 ಸಾವಿರ ಕೋಟಿ ರು.ಗಳಿಗೂ ಹೆಚ್ಚಿನ ವಿಮಾ ಹಕ್ಕುಗಳನ್ನು ಇತ್ಯರ್ಥಪಡಿಸಿದೆ ಮತ್ತು 1,500 ಕೋಟಿ ರು.ಗಿಂತ ಹೆಚ್ಚಿನ ಕೃಷಿ ಯಂತ್ರೋಪಕರಣಗಳನ್ನು ಒದಗಿಸಿದೆ ಎಂದು ಹೇಳಿದರು.

ಇದೇ ವೇಳೆ ರೈತ ಸಾಧಕರಿಗೆ ಕೃಷಿ ಪಂಡಿತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಪ್ರಧಾನ ಕಾರ್ಯದರ್ಶಿ ಡಾ.ಎಸ್‌.ಸೆಲ್ವಕುಮಾರ್‌ ಇದ್ದರು. 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ
ಕಾಂಗ್ರೆಸ್ಸಲ್ಲಿ ಯತೀಂದ್ರ ಕಿಚ್ಚು : '5 ವರ್ಷವೂ ನಮ್ಮ ತಂದೆ ಸಿಎಂ, ಇದು ಈಗ ಸೆಟಲ್ಡ್‌ ವಿಚಾರ'