ಸೋನಿಯಾಗೆ ಅವಳಿವಳೆನ್ನುವ ಧೈರ್ಯ ಇದೆಯಾ ಸಿಎಂ: ಜೋಶಿ

Published : Dec 08, 2025, 12:14 PM IST
Pralhad Joshi

ಸಾರಾಂಶ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮಹಿಳೆಯರ ಬಗ್ಗೆ ಗೌರವವೇ ಇಲ್ಲ. ಯಾವಾಗಲೂ ‘ಅವಳಿವಳುʼ ಎಂದೇ ಸಂಬೋಧಿಸುತ್ತಾರೆ. ಇದು ಮಹಿಳಾ ಸಮುದಾಯಕ್ಕೆ ಮಾಡುತ್ತಿರುವ ಅವಮಾನ. ಸೋನಿಯಾ ಗಾಂಧಿ, ಪ್ರಿಯಾಂಕಾರನ್ನು ‘ಅವಳಿವಳು’ ಎನ್ನುವ ಧೈರ್ಯ ತೋರಿಸುತ್ತಾರಾʼ ಎಂದು   ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.

 ನವದೆಹಲಿ :  ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮಹಿಳೆಯರ ಬಗ್ಗೆ ಗೌರವವೇ ಇಲ್ಲ. ಯಾವಾಗಲೂ ‘ಅವಳಿವಳುʼ ಎಂದೇ ಸಂಬೋಧಿಸುತ್ತಾರೆ. ಇದು ಮಹಿಳಾ ಸಮುದಾಯಕ್ಕೆ ಮಾಡುತ್ತಿರುವ ಅವಮಾನ. ಸೋನಿಯಾ ಗಾಂಧಿ, ಪ್ರಿಯಾಂಕಾರನ್ನು ‘ಅವಳಿವಳು’ ಎನ್ನುವ ಧೈರ್ಯ ತೋರಿಸುತ್ತಾರಾʼ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಏಕವಚನದಲ್ಲಿ ಕರೆದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಜೋಶಿ, ‘ಸಿಎಂ ಅವರ ಈ ‘ಅವಳಿವಳುʼ ಭಾಷೆ ಮಹಿಳಾ ಸಮುದಾಯಕ್ಕೆ ತೋರುವ ಅಗೌರವದ ಪರಮಾವಧಿ. ಕರ್ನಾಟಕದಿಂದಲೇ ಆಯ್ಕೆಯಾದ ಸಂಸದೆ, ಕೇಂದ್ರ ಹಣಕಾಸು ಸಚಿವೆ ಬಗ್ಗೆ ಸಿಎಂ ಹೀಗೆ ಏಕವಚನದಲ್ಲಿ ಮಾತನಾಡಿರುವುದು ಅವರ ಹುದ್ದೆಗೆ ಯೋಗ್ಯ ತರುವಂಥದ್ದಲ್ಲ. ಸಿದ್ದರಾಮಯ್ಯ ಅವರಿಂದ ಪ್ರತಿ ಬಾರಿಯೂ ಇಂಥ ಅವಮಾನಕರ ಹೇಳಿಕೆ ಮರುಕಳಿಸುತ್ತಲೇ ಇದೆ ಎಂದು ವಾಗ್ದಾಳಿ ನಡೆಸಿದರು.

ಸೋನಿಯಾ, ಪ್ರಿಯಾಂಕಾಗೂ ಹೇಗೆ ಹೇಳುವರೇ?:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪಿತಸ್ಥ ಸ್ಥಾನದಲ್ಲಿ ನಿಂತಾಗಲೆಲ್ಲಾ ನನ್ನದು ‘ಅಪ್ಪಟ ಗ್ರಾಮೀಣ ಭಾಷೆʼ ಎಂಬ ಸಮಜಾಯಿಷಿ ನೀಡುತ್ತಾರೆ. ಹಾಗಾದರೆ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಅವರನ್ನೂ ಹೀಗೆ ಏಕವಚನದಲ್ಲೇ ಕರೆಯುವ ಧೈರ್ಯ ತೋರುತ್ತಾರೆಯೇ?’ ಎಂದು ಪ್ರಶ್ನಿಸಿದ್ದಾರೆ. ಸ್ತ್ರೀಯರನ್ನು ಗೌರವದಿಂದ ಕಾಣುವ ಕರುನಾಡಿನಲ್ಲಿ ಹೀಗೆ ಅವಮಾನಕರ ರೀತಿಯಲ್ಲಿ ನೋಡುವುದು ನಿಜಕ್ಕೂ ಅವರ ಕೀಳು ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ರಾಜ್ಯದ ಸ್ವಾಭಿಮಾನಿ ಮಹಿಳೆಯರು ಯಾವತ್ತೂ ಇದನ್ನು ಕ್ಷಮಿಸುವುದಿಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಸಿಎಂಗೆ ಚಾಟಿ ಬೀಸಿದ್ದಾರೆ.

ರಾಷ್ಟ್ರಪತಿ ಬಗ್ಗೆಯೂ ಇದೇ ಧಾಟಿ ತೋರಿದ್ರು:

‘ಸಿಎಂ ಕನಿಷ್ಠ ತಮ್ಮ ಸ್ಥಾನದ ಅರಿವಿಲ್ಲದೆ ಗೌರವ, ಸೌಜನ್ಯ ಮರೆತು ಮಾತನಾಡಿದ್ದಾರೆ. ಈ ಹಿಂದೆ ರಾಷ್ಟ್ರಪತಿಗಳ ಬಗ್ಗೆಯೂ ಇದೇ ಧಾಟಿ ತೋರಿದ್ದರು. ಪ್ರಮುಖರ ಬಗ್ಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡುವ ಸಿಎಂ ವಾಕ್ಚಾಳಿ ನಿಜಕ್ಕೂ ಅತ್ಯಂತ ಖಂಡನೀಯ.

ಕಾಂಗ್ರೆಸ್ ಪಕ್ಷದ ಅಧಿ ನಾಯಕಿ ಸಿಎಂಗೆ ಸ್ವಲ್ಪ ತಿಳಿವಳಿಕೆ ಹೇಳುವ ಅವಶ್ಯಕತೆಯಿದೆ ಎಂದು ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬೆಳಗಾವಿ ಅಧಿವೇಶನಕ್ಕೆ ಪೊಲೀಸರ ಸರ್ಪಗಾವಲು
ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!