ಸಂವಿಧಾನ, ಸುಪ್ರೀಂ ಆದೇಶದಂತೆ ಮೀಸಲು ಜಾರಿಗೆ ಕೇಂದ್ರ ಬದ್ಧ: ಕೇಂದ್ರ ಸಚಿವ ಭೂಪೇಂದ್ರ ಯಾದವ್

KannadaprabhaNewsNetwork |  
Published : Jun 29, 2025, 01:36 AM ISTUpdated : Jun 29, 2025, 06:01 AM IST
ಭಾರತೀಯ ವಿದ್ಯಾ ಭವನದಲ್ಲಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ, ಕರ್ನಾಟಕ ವತಿಯಿಂದ ಆಯೋಜಿಸಿದ್ದ ‘ಜಾತಿ ಗಣತಿ: ಹಿನ್ನೋಟ- ಮುನ್ನೋಟ’ ವಿಚಾರಗೋಷ್ಠಿ ಮತ್ತು ಸಂವಾದವನ್ನು ಕೇಂದ್ರ ಪರಿಸರ ವಿಜ್ಞಾನ, ಅರಣ್ಯ, ಹವಾಮಾನ ಬದಲಾವಣೆ ಖಾತೆ ಸಚಿವ ಭೂಪೇಂದ್ರ ಯಾದವ್ ಉದ್ಘಾಟಿಸಿದರು. ನಿವೃತ್ತ ನ್ಯಾಯಮೂರ್ತಿ ಭಕ್ತ ವತ್ಸಲ, ನಿವೃತ್ತ ಸರಕಾರಿ ಅಧಿಕಾರಿ ಕೆ. ಮುಕುಡಪ್ಪ ಮತ್ತಿತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ದೇಶದ ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ದೇಶದಲ್ಲಿ ಮೀಸಲಾತಿ ಅನುಷ್ಠಾನಗೊಳಿಸಲಾಗುತ್ತದೆ. ಮಹಿಳಾ ಮೀಸಲಾತಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಪರಿಸರ ವಿಜ್ಞಾನ, ಅರಣ್ಯ, ಹವಾಮಾನ ಬದಲಾವಣೆ ಖಾತೆ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.

 ಬೆಂಗಳೂರು :  ದೇಶದ ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ದೇಶದಲ್ಲಿ ಮೀಸಲಾತಿ ಅನುಷ್ಠಾನಗೊಳಿಸಲಾಗುತ್ತದೆ. ಮಹಿಳಾ ಮೀಸಲಾತಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಪರಿಸರ ವಿಜ್ಞಾನ, ಅರಣ್ಯ, ಹವಾಮಾನ ಬದಲಾವಣೆ ಖಾತೆ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.

ಶನಿವಾರ ನಗರದ ಭಾರತೀಯ ವಿದ್ಯಾ ಭವನದಲ್ಲಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ, ಕರ್ನಾಟಕ ವತಿಯಿಂದ ಆಯೋಜಿಸಿದ್ದ ‘ಜಾತಿ ಗಣತಿ: ಹಿನ್ನೋಟ- ಮುನ್ನೋಟ’ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಜಾತಿ ಗಣತಿ ಸಹಿತ ಜನಗಣತಿಯ ನಂತರ, ಸಮುದಾಯಗಳ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದೇ?, ಮಹಿಳಾ ಮೀಸಲಾತಿ ಜಾರಿಗೊಳಿಸಿದರೆ ಅದರಲ್ಲೂ ಜಾತಿವಾರು ಮೀಸಲಾತಿ ನೀಡಲಾಗುವುದೇ? ಎಂದು ಸಭಿಕರು ಕೇಳಿದ ಪ್ರಶ್ನೆಗೆ ಸಚಿವ ಭೂಪೇಂದ್ರ ಅವರು ಮೇಲಿನಂತೆ ಉತ್ತರಿಸಿದರು.

ಬುಡಕಟ್ಟು ಸಮುದಾಯಗಳು, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಸೇರಿದಂತೆ ಎಲ್ಲಾ ಜಾತಿ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿ-ಗತಿಯನ್ನು ಅರಿತು ನ್ಯಾಯ ಕೊಡಿಸಲು, ಪರಿವರ್ತನೆ ತರಲು ಜಾತಿಗಣತಿ ಒಳಗೊಂಡ ಜನಗಣತಿ ನಡೆಸಲಾಗುತ್ತಿದೆ. ಮತ್ತೊಂದೆಡೆ ಕರ್ನಾಟಕ ಸರ್ಕಾರ 10 ವರ್ಷಗಳ ಹಿಂದೆಯೇ ಜಾತಿ ಗಣತಿ ನಡೆಸಿದ್ದರೂ ಈಗ ಅದನ್ನು ಕಸದ ಬುಟ್ಟಿಗೆ ಎಸೆದು ಹೊಸ ಗಣತಿ ಮಾಡುವುದಾಗಿ ಘೋಷಿಸಿದೆ. ಏಕೆಂದರೆ, ರಾಜ್ಯ ಸರ್ಕಾರಕ್ಕೆ ಬದ್ಧತೆ ಇಲ್ಲ ಎಂದು ಭೂಪೇಂದ್ರ ಯಾದವ್ ಹೇಳಿದರು.

ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಮಾತನಾಡಿ, ಜಾತಿ ಗಣತಿ ಸುಲಭದ ಕೆಲಸವಲ್ಲ. ಗಣತಿದಾರರಿಗೆ ಬಂದಾಗ ಜನರು ಸಹಕಾರ ನೀಡುವುದಿಲ್ಲ. ಬಾಗಿಲು ತೆಗೆದು ಮಾತನಾಡಿದರೂ ಸರಿಯಾದ ಮಾಹಿತಿ ನೀಡುವುದಿಲ್ಲ. ಹೀಗಾಗಿ, ಜಾತಿ ಗಣತಿ ನೈಜತೆ ತಿಳಿಯಲು ಗಣತಿ ಪೂರ್ಣಗೊಂಡ ಬಳಿಕ ಯಾದೃಚ್ಛಿಕವಾಗಿ ಪರಿಶೀಲನೆ ನಡೆಸಬೇಕು. ಆಧಾರ್ ಸಂಖ್ಯೆ, ಮೊಬೈಲ್ ಫೋನ್ ಸಂಖ್ಯೆ ಆಧಾರದ ಮೇಲೆ ಗಣತಿ ಮಾಡಿಸಬೇಕು ಎಂದು ಅಭಿಪ್ರಾಯಪಟ್ಟರು.

ಕೆಪಿಎಸ್‌ಸಿ ಮಾಜಿ ಸದಸ್ಯ ಕೆ. ಮುಕುಡಪ್ಪ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರಘು ಕೌಟಿಲ್ಯ ಮಾತನಾಡಿದರು.ವಿವಿಧ ಜಾತಿ ಸಮುದಾಯಗಳ ಮುಖಂಡರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದರು, ಶಾಸಕರು, ವಿಧಾನ ಪರಿಷತ್ ಹಾಲಿ ಮತ್ತು ಮಾಜಿ ಸದಸ್ಯರು ಮತ್ತಿತರರು ವಿಚಾರಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

PREV
Read more Articles on

Recommended Stories

ನನ್ನ ವಿರುದ್ಧ ಮೂವರ ಪಿತೂರಿ - ಬಿಜೆಪಿ ಸೇರೋ ಬಗ್ಗೆ ಏನಂದ್ರು ರಾಜಣ್ಣ
ಆ.17ರಿಂದ ಕಾಂಗ್ರೆಸ್‌ ‘ಮತದಾರ ಅಧಿಕಾರ ಯಾತ್ರೆ’