ಬೆಲೆ ಏರಿಸಿ ಜನರ ಜೇಬಿಗೆ ಕೇಂದ್ರ ಕನ್ನ: ಕೈ ಟೀಕೆ

Published : Apr 02, 2026, 08:54 AM IST
Congress Leader Randeep Surjewala

ಸಾರಾಂಶ

ಎಲ್‌ಪಿಜಿ  ಬೆಲೆ ಏರಿಕೆ, ಟೋಲ್‌ ತೆರಿಗೆ, ಇಂಧನ, ವಿಮಾನ ಪ್ರಯಾಣ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮೂಲಕ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದೆಂದೂ ಕಾಣದ ರೀತಿಯಲ್ಲಿ ಇಡೀ ದೇಶದ ಜನರ ಜೇಬುಗಳ್ಳತನ ಶುರು ಮಾಡಿದೆ ಎಂದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ 

 ಬೆಂಗಳೂರು :  ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ, ಟೋಲ್‌ ತೆರಿಗೆ, ಇಂಧನ, ವಿಮಾನ ಪ್ರಯಾಣ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮೂಲಕ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದೆಂದೂ ಕಾಣದ ರೀತಿಯಲ್ಲಿ ಇಡೀ ದೇಶದ ಜನರ ಜೇಬುಗಳ್ಳತನ ಶುರು ಮಾಡಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.

ಏ.1ರಿಂದ ದೇಶಾದ್ಯಂತ ವಿವಿಧ ವಸ್ತುಗಳ ಬೆಲೆ ಏರಿಕೆ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮೂವರೂ ನಾಯಕರು, ಇದು ಜನರಿಗೆ ‘ಅಚ್ಚೇ ದಿನ್’ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರ್ಕಾರದ ‘ದುಬಾರಿ ದರ್ಬಾರ್!’. ಪ್ರಧಾನಿ ಮತ್ತು ಬಿಜೆಪಿ ನಾಯಕರು ಮತದಾರರ ಮುಂದೆ ಮತ ಯಾಚಿಸುವ ಮೊದಲು ಶ್ರೀಸಾನ್ಯರ ಬೆಲೆ ಏರಿಕೆ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ಆಗ್ರಹಿಸಿದ್ದಾರೆ.

ಏ.1ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 200 ರು. ಹೆಚ್ಚಿಸಿದ್ದು, ಪ್ರತಿ ಸಿಲಿಂಡರ್ ಬೆಲೆ 2,000 ರು. ದಾಟಿದೆ. ಕೇವಲ 45 ದಿನಗಳಲ್ಲಿ 3 ಬಾರಿ ದರ ಹೆಚ್ಚಿಸಲಾಗಿದೆ. ಮಾರ್ಚ್ ತಿಂಗಳಲ್ಲೇ ಗೃಹ ಬಳಕೆ ಸಿಲಿಂಡರ್ ಬೆಲೆಗಳು ಎರಡು ಬಾರಿ ಏರಿಕೆಯಾಗಿ, ಪ್ರತಿ ಸಿಲಿಂಡರ್‌ಗೆ 913 ರು. ತಲುಪಿದೆ. ವಾಣಿಜ್ಯ ಸಿಲಿಂಡರ್‌ ಬೆಲೆ ಹೆಚ್ಚಳ ಶೀಘ್ರ ಗೃಹಬಳಕೆಯ ಸಿಲಿಂಡರ್ ಬೆಲೆ ಮತ್ತೆ ಏಚ್ಚಿಸುವ ಮುನ್ಸೂಚನೆಯಾಗಿದೆ. ಅಲ್ಲದೆ, ಎಲ್‌ಪಿಜಿ ತೀವ್ರ ಅಭಾವದಿಂದಾಗಿ ಜನ ಪರದಾಡುತ್ತಿರುವುದು, ಕಾಳಸಂತೆಯಲ್ಲಿ ದುಪ್ಪಟ್ಟು ದರ ನೀಡಿ ಸಿಲಿಂಡರ್ ಖರೀದಿಸುವಂತಾಗಿರುದು ಮೋದಿ ಸರ್ಕಾರದ ಆಡಳಿತ ವೈಫಲ್ಯದ ಪ್ರತಿಫಲ ಎಂದಿದ್ದಾರೆ.

ಇನ್ನು, ರೈಲ್ವೆ ಟಿಕೆಟ್ ರದ್ದತಿ ದರದ ಮೂಕವೂ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ರೈಲು ಹೊರಡುವ 8 ಗಂಟೆಗಳ ಒಳಗೆ ಟಿಕೆಟ್ ರದ್ದುಗೊಳಿಸಿದರೆ ಯಾವುದೇ ಹಣ ಮರುಪಾವತಿಯಾಗುವುದಿಲ್ಲ. ಅದರ ಮುಂಚಿತವಾಗಿ ರದ್ದುಗೊಳಿಸಿದರೆ ಶೇ.50 ರಷ್ಟು ಹಣ ಕಡಿತವಾಗುತ್ತದೆ. ಅದೇ ರೀತಿ, ಎಸಿ, ಫ್ರಿಡ್ಜ್ ಮತ್ತು ವಾಟರ್ ಕೂಲರ್ ದರಗಳಲ್ಲಿ ಈಗಾಗಲೇ ಶೇ.5 ರಿಂದ ಶೇ.15 ರಷ್ಟು ಏರಿಕೆಯಾಗಿದೆ. ತಜ್ಞರ ಪ್ರಕಾರ ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಜನರ ಹೂಡಿಕೆಗಳಿಗೂ ಕುತ್ತು

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮಧ್ಯಮ ವರ್ಗದವರ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ. ಫ್ಯೂಚರ್ಸ್ ಮೇಲಿನ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್‌ಟಿಟಿ) ಶೇ. 0.02 ರಿಂದ ಶೇ. 0.05 ಕ್ಕೆ ಏರಿಸಲಾಗಿದೆ. ಹಾಗೆಯೇ ಆಪ್ಷನ್ಸ್ ಮೇಲಿನ ತೆರಿಗೆಯನ್ನು ಶೇ. 0.1 ರಿಂದ ಶೇ. 0.15 ಕ್ಕೆ ಹೆಚ್ಚಿಸಲಾಗಿದೆ, ಇದು ಹೂಡಿಕೆ ವೆಚ್ಚವನ್ನು ಗಣನೀಯವಾಗಿ ಏರಿಸುತ್ತದೆ.

ಕಾರು ಖರೀದಿಯ ಕನಸು ಭಗ್ನ

ಭಾರತದಲ್ಲಿ ಕಾರು ಖರೀದಿ ಈಗ ಮತ್ತಷ್ಟು ದುಬಾರಿಯಾಗಿದೆ. ಜೆಎಸ್‌ಡಬ್ಲ್ಯೂಎಂಜಿ ಮೋಟಾರ್ ಇಂಡಿಯಾ ಇಂದಿನಿಂದ ಕಾರುಗಳ ಬೆಲೆಯನ್ನು ಶೇ.2 ರಷ್ಟು ಹೆಚ್ಚಿಸಿದೆ. ಉಳಿದ ಕಂಪನಿಗಳು ಇದೇ ಹಾದಿ ಹಿಡಿಯಲಿವೆ. ಜೊತೆಗೆ 5 ಲಕ್ಷ ರು.ಗಿಂತ ಹೆಚ್ಚಿನ ವಾಹನಗಳ ಖರೀದಿಗೆ ಪ್ಯಾನ್ (ಪ್ಯಾನ್‌) ಕಾರ್ಡ್ ಕಡ್ಡಾಯಗೊಳಿಸಿ ನಿಯಮಗಳನ್ನು ಕಠಿಣಗೊಳಿಸಲಾಗಿದೆ.

ಇವೆಲ್ಲವುಗಳ ಜೊತೆಗೆ ಬೇಳೆಕಾಳುಗಳು, ಖಾದ್ಯ ತೈಲ, ಬೆಣ್ಣೆ, ಕಬ್ಬಿಣ, ಸಿಮೆಂಟ್ ಬೆಲೆಗಳು ಈಗಾಗಲೇ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿವೆ. ಮಾರ್ಚ್ ತಿಂಗಳಲ್ಲೇ ಬ್ರೆಡ್, ಬಿಸ್ಕತ್ತು ಮತ್ತು ಸೋಪಿನಂತಹ ನಿತ್ಯಬಳಕೆಯ ವಸ್ತುಗಳ ಬೆಲೆ ಶೇ. 5 ರಷ್ಟು ಏರಿಕೆಯಾಗಿದೆ ಅಥವಾ ಅವುಗಳ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಇದೆಲ್ಲವನ್ನೂ ಜನ ಗಮನಿಸಬೇಕು. ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಸಿಎಂ, ಡಿಸಿಎಂ ಮತ್ತು ಸುರ್ಜೇವಾಲ ತಿಳಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಾನು ಸಾಲರಾಮಯ್ಯ ಅಲ್ಲ : ಸಿದ್ದರಾಮಯ್ಯ ತಿರುಗೇಟು
ಸಾಲ ಕೂಪಕ್ಕೆ ತಳ್ಳಿದ್ದೇ ಸಿಎಂ ಸಾಧನೆ : ಬಿವೈವಿ