ಬೆಂಗಳೂರು : ಬಿಪಿಎಲ್ ಕಾರ್ಡು ಪಡೆಯಲು ವಾರ್ಷಿಕ ಆದಾಯ ಮಿತಿ 1.20 ಲಕ್ಷ ರು.ಗಿಂತ ಕಡಿಮೆ ಇರಬೇಕೆಂಬ ಮಾನದಂಡ ನಿಗದಿಮಾಡಿರುವುದು ಕೇಂದ್ರ ಸರ್ಕಾರ, ನಾವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗೃಹ ಕಚೇರಿ ಕೃಷ್ಣದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿ ವೇಳೆ, 4 ಲಕ್ಷ ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅರ್ಹರಲ್ಲದವರು ಬಿಪಿಎಲ್ ಕಾರ್ಡು ಪಡೆದಿದ್ದರೆ ಅದನ್ನು ರದ್ದುಪಡಿಸಲು ಇತ್ತೀಚೆಗೆ ನಡೆದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ಅರ್ಹರ ಬಿಪಿಎಲ್ ಕಾರ್ಡುಗಳು ರದ್ದಾಗದಂತೆ ಎಚ್ಚರ ವಹಿಸಬೇಕು, ಒಂದು ವೇಳೆ ರದ್ದಾಗಿದ್ದರೆ ಅವರು ಮತ್ತೆ ಅರ್ಜಿ ಸಲ್ಲಿಸಿದಾಗ ಪರಿಶೀಲಿಸಿ ಹೊಸದಾಗಿ ನೀಡಬೇಕು ಎಂದು ಕೂಡ ಸೂಚಿಸಲಾಗಿದೆ ಎಂದರು.
ಬಿಪಿಎಲ್ ಕಾರ್ಡು ಪಡೆಯಲು ವಾರ್ಷಿಕ ಆದಾಯ 1.20 ಲಕ್ಷ ರು. ನಿಗದಿಪಡಿಸಿರುವುದು ಈಗಿನ ಕಾಲಕ್ಕೆ ವೈಜ್ಞಾನಿಕವಲ್ಲ ಎಂಬ ಅಭಿಪ್ರಾಯಗಳು ಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ, ಆದಾಯ ಮಿತಿ ಮಾನದಂಡವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿರುವುದು, ನಾವಲ್ಲ. ಹಾಗಾಗಿ ಕೇಂದ್ರ ಸರ್ಕಾರಕ್ಕೆ ಈ ಪ್ರಶ್ನೆ ಕೇಳಿ ಎಂದರು.