ತೀವ್ರ ಕುತೂಹಲ ಮೂಡಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯ ಪ್ರಬಲ ಆಕಾಂಕ್ಷಿ ಸಿ.ಪಿ.ಯೋಗೇಶ್ವರ್ ಅವರನು ಮನವೊಲಿಸುವ ಪ್ರಯತ್ನವನ್ನು ಜೆಡಿಎಸ್ ನಾಯಕರು ನಡೆಸಿದರೂ ಫಲ ನೀಡಿದಂತಿಲ್ಲ.
ಬೆಂಗಳೂರು : ತೀವ್ರ ಕುತೂಹಲ ಮೂಡಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯ ಪ್ರಬಲ ಆಕಾಂಕ್ಷಿ ಸಿ.ಪಿ.ಯೋಗೇಶ್ವರ್ ಅವರನು ಮನವೊಲಿಸುವ ಪ್ರಯತ್ನವನ್ನು ಜೆಡಿಎಸ್ ನಾಯಕರು ನಡೆಸಿದರೂ ಫಲ ನೀಡಿದಂತಿಲ್ಲ. ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಯೋಗೇಶ್ವರ್, 'ನಾನು ಸ್ಪರ್ಧಿಸುವೆ. ನನಗೇ ನೀವು ಬೆಂಬಲ ನೀಡಿ' ಎಂದು ತಮ್ಮನ್ನು ಮನವೊಲಿಸಲು ಯತ್ನಿಸಿದ ಜೆಡಿಎಸ್ ನಾಯಕರ ಬಳಿ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಯೋಗೇಶ್ವರ್ ಜತೆ ಸಭೆ ನಡೆಯಿತು.
ಜೆಡಿಎಸ್‌ನ ಮುಖಂಡರಾದ ಸಿ.ಎಸ್.ಪುಟ್ಟರಾಜು, ಕೆ.ಅನ್ನದಾನಿ, ಎ. ಮಂಜು, ಮಾಗಡಿ ಮಂಜು, ಸುರೇಶ್ ಗೌಡ ಸಭೆ ನಡೆಸಿದರು. ಸಭೆಯಲ್ಲಿ ಜೆಡಿಎಸ್‌ಗೆ ಕ್ಷೇತ್ರವನ್ನು ಬಿಟ್ಟುಕೊಡುವ ಮನವೊಲಿಕೆ ಮಾಡಲಾಯಿತು. ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಲಾಯಿತು. ಆದರೆ, ಜೆಡಿಎಸ್ ಮುಖಂಡರಮನವೊಲಿಕೆಗೆ ಯೋಗೇಶ್ವರ್ ಮಣಿಯದೇ ತಮ್ಮ ಸ್ಪರ್ಧೆ ಬಗ್ಗೆ ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಅಭ್ಯರ್ಥಿಯನ್ನು ಚನ್ನಪಟ್ಟಣದಲ್ಲಿ ಕಣಕ್ಕಿಳಿಸಿದರೆ ಆಗುವ ನಷ್ಟದ ಬಗ್ಗೆ ಜೆಡಿಎಸ್ ಮುಖಂಡರಿಗೆ ಯೋಗೇಶ್ವ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.
ಆಡಳಿತರೂಢ ಕಾಂಗ್ರೆಸ್‌ಗೆ ಲಾಭ ಮಾಡಿಕೊಡಬಾರದು ಎಂದಾದರೆ ತಾವು ಸ್ಪರ್ಧಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ. ಅಲ್ಲದೇ, ಚುನಾವಣಾ ಫಲಿತಾಂಶದಲ್ಲಿ ಹೆಚ್ಚು-ಕಡಿಮೆಯಾದರೆ ಕೇಂದ್ರ ಸಚಿವರಾಗಿರುವಎಚ್.ಡಿ.ಕುಮಾರಸ್ವಾಮಿ ಅವರಿಗೇ ಮುಜುಗರವಾಗಲಿದೆ. ಅದಕ್ಕೆ ಯಾಕೆ ಆಸ್ಪದ ಮಾಡಿಕೊಡಬೇಕು? ಎನ್‌ಡಿಎ ಅಭ್ಯರ್ಥಿಯಾಗಲು ಸಹಕಾರ ಮಾಡಿ ಎಂಬುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯ ಬಳಿಕ ಜೆಡಿಎಸ್ ನಾಯಕರು ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ತೆರಳಿ ವಿವರ ನೀಡಿದರು. ಸಭೆಯಲ್ಲಿ ನಡೆದಿರುವ ವಿಚಾರಗಳು ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆಯೂ ಶನಿವಾರ ನಡೆಯುವ ಸಭೆಯಲ್ಲಿ ಪ್ರಸ್ತಾಪವಾಗಲಿದೆ ಎನ್ನಲಾಗಿದೆ.
ನಾನು ಸ್ಪರ್ಧಿಸುವೆ- ಯೋಗೇಶ್ವರ್: ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಯೋಗೇಶ್ವರ್, ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ಅಲ್ಲಿ ಬೇರೆ ಯಾರೇ ಕಣಕ್ಕಿಳಿದರೂ ಎನ್‌ಡಿಎಗೆ ಕಷ್ಟವಾಗಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಎಲ್ಲರಿಗೂ ಜವಾಬ್ದಾರಿ ಇದೆ. ಅವಕಾಶ ಮಾಡಿಕೊಡಿ ಎಂದು ಕೇಳಿದ್ದು, ಶನಿವಾರ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದರು. ಚುನಾವಣೆಗೆ ಟಿಕೆಟ್ ಕೇಳುತ್ತಿದ್ದು, ಕೇಳುತ್ತಲೇ ಇರುತ್ತೇನೆ. ಪಕ್ಷದ ಕಾರ್ಯಕರ್ತರ ಭಾವನೆಗೆ ತಕ್ಕಂತೆ ಮಾತನಾಡುತ್ತಿದ್ದು, ಅದಕ್ಕೆ ನಾನು ಬದ್ಧವಾಗಿದ್ದೇನೆ.
ಸಭೆಯಲ್ಲಿ ಬೇರೆ ವಿಚಾರ ಚರ್ಚೆ ಮಾಡಿಲ್ಲ. ಚನ್ನಪಟ್ಟಣ ಅಭ್ಯರ್ಥಿ 2-3 ದಿನದಲ್ಲಿ ಅಂತಿಮವಾಗಲಿದೆ. ಮೈತ್ರಿಕೂಟದಲ್ಲಿ ಅವಿಶ್ವಾಸ, ಅಪನಂಬಿಕೆಗೆ ಅವಕಾಶ ಇಲ್ಲ ಎಂದರು. ಶಾಸಕ ಎ.ಮಂಜು ಮಾತನಾಡಿ, ಸಭೆಯಲ್ಲಿ ಟಿಕೆಟ್ ಬಗ್ಗೆ ಚರ್ಚೆ ಮಾಡಿಲ್ಲ. ಯಾರಿಗೆ ಟಿಕೆಟ್ ಆದರೂ ಚುನಾವಣೆ ನಡೆಸುವುದು ಹೇಗೆ ಎಂಬುದರ ಬಗ್ಗೆ ಚರ್ಚೆ ಮಾಡಲಾಗಿದೆ. ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದರು. ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಭೆಯಲ್ಲಿ ಚರ್ಚಿಸಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಎನ್‌ಡಿಎ ಅಭ್ಯರ್ಥಿಯನ್ನ ಗೆಲ್ಲಿಸುವ ಕುರಿತು ಚರ್ಚೆ ನಡೆಸಲಾಗಿದೆ. ಯಾರೇ ಅಭ್ಯರ್ಥಿಯಾದರೂ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಲು ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ಅಲ್ಲಿ ಬೇರೆ ಯಾರೇ ಕಣಕ್ಕಿಳಿದರೂ ಎನ್‌ಡಿಎಗೆ ಕಷ್ಟವಾಗಲಿದೆ. ಜೆಡಿಎಸ್ ನಾಯಕರು ನನಗೆ ಅವಕಾಶ ಮಾಡಿಕೊಟ್ಟು ಬೆಂಬಲಿಸಬೇಕು.
-ಸಿ.ಪಿ.ಯೋಗೇಶ್ವರ್ ಬಿಜೆಪಿ ನಾಯಕ