;Resize=(412,232))
ಸ್ಟಾಕ್‌ಹೋಂ: ಜೀವಕೋಶಗಳ ನಿರ್ಮಾಣಕ್ಕೆ ಕಾರಣವಾಗುವ ‘ಹೋಮೊಚಿರಲಿಟಿ’ ಎಂಬ ಶತಮಾನದಷ್ಟು ಹಳೆಯ ರಸಾಯನಶಾಸ್ತ್ರದ ನಿಗೂಢ ರಹಸ್ಯವನ್ನು ಭೇದಿಸಿದ್ದಕ್ಕಾಗಿ ಫ್ರಾನ್ಸ್‌ನ ಹಿರಿಯ ವಿಜ್ಞಾನಿ ಹೆನ್ರಿ ಬಿ. ಕಗನ್ ಮತ್ತು ಜಪಾನ್‌ನ ಕೆನ್ಸೊ ಸೊಯಾಯಿ ಅವರಿಗೆ 2026ನೇ ಸಾಲಿನ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.
‘ಅಸಮಪಾರ್ಶ್ವದ ಜೈವಿಕ ಸಂಶ್ಲೇಷಣೆಯಲ್ಲಿ ರೇಖೀಯವಲ್ಲದ ಪರಿಣಾಮಗಳು ಮತ್ತು ಸ್ವಯಂಚಾಲಿತ ಪ್ರೇರಣೆ’ ಕುರಿತ ಸಂಶೋಧನೆಗಾಗಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಇಬ್ಬರೂ ವಿಜ್ಞಾನಿಗಳಿಗೆ ಜಂಟಿಯಾಗಿ ಈ ಗೌರವವನ್ನು ಪ್ರಕಟಿಸಿದೆ.
ಜೀವಕೋಟಿಯ ರಸಾಯನಶಾಸ್ತ್ರವನ್ನು ವಿಜ್ಞಾನಿಗಳು ‘ಹೋಮೋಚಿರಲ್’ ಎಂದು ಕರೆಯುತ್ತಾರೆ. ನಮ್ಮ ಎರಡೂ ಕೈಗಳು ಒಂದಕ್ಕೊಂದು ಪ್ರತಿಬಿಂಬದಂತೆ ಕಾಣುವಂತೆಯೇ, ಜೀವಕೋಶಗಳಲ್ಲಿರುವ ಅಮೈನೋ ಆಮ್ಲಗಳು ಸಹ ಪರಸ್ಪರ ಪ್ರತಿಬಿಂಬದ ರೂಪಗಳಲ್ಲಿರುತ್ತವೆ. ಆದರೆ, ಮಾನವ ದೇಹದ ಪ್ರೋಟೀನ್‌ಗಳಲ್ಲಿ ಇವುಗಳಲ್ಲಿ ಕೇವಲ ಒಂದು ರೂಪ ಮಾತ್ರ ಕಂಡುಬರುತ್ತದೆ. ನೈಸರ್ಗಿಕವಾಗಿ ಈ ‘ಹೋಮೋಚಿರಲಿಟಿ’ ಸ್ವಯಂಪ್ರೇರಿತವಾಗಿ ಹೇಗೆ ಉಂಟಾಗುತ್ತದೆ ಎಂಬುದು ವಿಜ್ಞಾನಿಗಳಿಗೆ ಕೌತುಕದ ವಿಷಯವಾಗಿತ್ತು. ಈ ರಹಸ್ಯವನ್ನು ಭೇದಿಸುವಲ್ಲಿ ಹೆನ್ರಿ ಕಗನ್ ಮತ್ತು ಕೆನ್ಸೊ ಸೊಯಾಯಿ ಅವರ ಸಂಶೋಧನೆಗಳು ಪ್ರಮುಖ ಮೈಲುಗಲ್ಲಾಗಿವೆ.
1986ರಲ್ಲಿ ಕಗನ್ ಅವರು ರಾಸಾಯನಿಕ ಕ್ರಿಯೆಗಳನ್ನು ನಿಯಂತ್ರಿಸುವ ಹೊಸ ವಿಧಾನವನ್ನು ಕಂಡುಕೊಂಡರು. ತದನಂತರ 1995ರಲ್ಲಿ ಸೊಯಾಯಿ ಅವರು ಮೊದಲ ಬಾರಿಗೆ ಹೋಮೋಚಿರಲ್ ಸಾಧಿಸುವ ರಾಸಾಯನಿಕ ಕ್ರಿಯೆಯನ್ನು ವಿನ್ಯಾಸಗೊಳಿಸಿ, 2003ರಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿದರು. ಔಷಧೀಯ ರಂಗದಲ್ಲಿ ಅತ್ಯಂತ ಸೂಕ್ತ ಹಾಗೂ ಪರಿಣಾಮಕಾರಿ ಔಷಧಿಗಳನ್ನು ತಯಾರಿಸಲು ಇವರ ಆವಿಷ್ಕಾರಗಳು ದಾರಿಮಾಡಿಕೊಟ್ಟಿವೆ.