ಮುಖ್ಯಮಂತ್ರಿಗಳಿಂದ ಫ್ರೀಯಾಗಿ ದುಡ್ಡು ಹೊಡೆಯೋ ಕೆಲಸ ಆಗ್ತಿದೆ: ವಿಪಕ್ಷ ನಾಯಕ ಆರ್.ಅಶೋಕ್

KannadaprabhaNewsNetwork | Updated : Aug 08 2024, 04:51 AM IST

ಸಾರಾಂಶ

 ನಾನು ಕ್ಲೀನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾದಲ್ಲಿ 14ನಿವೇಶನಗಳನ್ನು ನುಂಗಿ ಕ್ಲೀನ್ ಎಂದು ಹೇಗೆ ಹೇಳಿಕೊಳ್ಳುತ್ತೀರಿ. ನೀವು ಕ್ಲೀನ್ ಎನ್ನುವುದನ್ನು ಜನರು ಹೇಳಬೇಕೇ ವಿನಃ ನೀವಲ್ಲ.

 ಮಂಡ್ಯ :  ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲ ಸೌಲಭ್ಯಗಳನ್ನೂ ಉಚಿತವಾಗಿ ಕೊಡುತ್ತಾರೆಂಬ ಕಾರಣಕ್ಕೆ ಜನ ಸಿದ್ದರಾಮಯ್ಯನವರನ್ನು ಅಧಿಕಾರಕ್ಕೆ ತಂದರು. ಆದರೆ, ಅವರು ಉಚಿತವಾಗಿ ದುಡ್ಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಅಧಿಕಾರದಲ್ಲಿರುವ ನೈತಿಕತೆಯೇ ಇಲ್ಲ. ಹಾಗಾಗಿ ಕೂಡಲೇ ರಾಜೀನಾಮೆ ನೀಡುವಂತೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನಾನು ಕ್ಲೀನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾದಲ್ಲಿ 14 ನಿವೇಶನಗಳನ್ನು ನುಂಗಿ ಕ್ಲೀನ್ ಎಂದು ಹೇಗೆ ಹೇಳಿಕೊಳ್ಳುತ್ತೀರಿ. ನೀವು ಕ್ಲೀನ್ ಎನ್ನುವುದನ್ನು ಜನರು ಹೇಳಬೇಕೇ ವಿನಃ ನೀವಲ್ಲ ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ದಲಿತರಿಗೆ ನ್ಯಾಯವಾಗಿ ಸೇರಬೇಕಾದ ಜಮೀನನ್ನು ಸಿಎಂ ಕುಟುಂಬ ಅಕ್ರಮವಾಗಿ ಪರಭಾರೆ ಮಾಡಿಕೊಂಡಿದೆ. ನಿಂಗ ಎಂಬುವರು 1936 ರಲ್ಲಿ 1 ರು. ನೀಡಿ 3.16 ಎಕರೆ ಜಮೀನನ್ನು ಹರಾಜಿನಲ್ಲಿ ಪಡೆದುಕೊಂಡಿದ್ದರು. ಇವರಿಗೆ ಮಲ್ಲಯ್ಯ, ಮೈಲಾರಯ್ಯ ಹಾಗೂ ದೇವರಾಜು ಎಂಬ ಮೂವರು ಮಕ್ಕಳಿದ್ದರು. 28 ವರ್ಷಗಳ ಹಿಂದೆ ನಿಂಗ ಮೃತಪಟ್ಟಿದ್ದಾರೆ. ಜೊತೆಗೆ ಅವರ ಪತ್ನಿ ನಿಂಗಮ್ಮ ಸಹ 1990ರಲ್ಲಿ ನಿಧನರಾಗಿದ್ದಾರೆ. ಈ ಕುಟುಂಬದಲ್ಲಿ ಸಧ್ಯ 27 ಜನರಿದ್ದಾರೆ. 1968 ರಲ್ಲಿ ಸದರಿ ಜಮೀನನ್ನು ಮೈಲಾರಯ್ಯನಿಗೆ ವರ್ಗಾಹಿಸಲಾಗಿದೆ ಎಂದರು.

ದೇವನೂರು 3ನೇ ಹಂತದ ಬಡಾವಣೆ ಮಾಡುವ ಉದ್ದೇಶಕ್ಕಾಗಿ 1998ರಲ್ಲಿ ಜಮೀನು ಸೇರಿ 464 ಎಕರೆ ಜಮೀನನ್ನು ಮುಡಾ ಭೂಸ್ವಾಧೀನಪಡಿಸಿಕೊಂಡಿದೆ. ಈ ಜಮೀನಿಗೆ 3,24700 ರು. ಹಣವನ್ನು ಪರಿಹಾರವಾಗಿ ಪಾವತಿ ಮಾಡಿದೆ. 1996 ರಲ್ಲಿ ಭೂಸ್ವಾಧೀನದಿಂದ ಕೈಬಿಡುವಂತೆ ನಾನೇ ಮಾಲೀಕ ಎಂದೇಳಿಕೊಂಡ ದೇವರಾಜ ಸರ್ಕಾರಕ್ಕೆ ಸುಳ್ಳ್ಳು ಮಾಹಿತಿಯ ಅರ್ಜಿ ಸಲ್ಲಿಸಿದ್ದಾನೆ. ಆದರೆ ಜಮೀನು ಮೈಲಾರಯ್ಯನ ಹೆಸರಿನಲ್ಲಿ ನೋಂದಣಿಯಾಗಿತ್ತು. ಅದನ್ನು ದೇವರಾಜ ಭೂಸ್ವಾಧೀನದಿಂದ ಕೈಬಿಡುವಂತೆ ಹೇಗೆ ಅರ್ಜಿ ಸಲ್ಲಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ದೇವರಾಜ ನೀಡಿದ ಅರ್ಜಿ ಮೇರೆಗೆ ಸರ್ಕಾರ1999ರಲ್ಲಿ ಸ.ನಂ.464ರ 3.16  ಎಕರೆ ಜಮೀಈನನ್ನು ಭೂಸ್ವಾಧೀನದಿಂದ ರದ್ದುಪಡಿಸಲಾಗಿದೆ ಎಂದು ಗೆಜೆಟ್ ಪ್ರಕಟಣೆ ಹೊರಡಿಸಿದೆ. ಈ ಸಮಯದಲ್ಲಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿಯಾಗಿದ್ದರು. ಡಿ-ನೋಟಿಫಿಕೇಷನ್‌ಗೆ ಅವರೇ ಕಾರಣರಾಗಿದ್ದಾರೆ ಎಂದು ಯಾರು ಬೇಕಾದರೂ ಹೇಳಬಹುದು ಎಂದು ವಿವರಿಸಿದರು.

ದೇವನೂರು 3ನೇ ಹಂತದ ಬಡಾವಣೆ ಅಭಿವೃದ್ಧಿಗಾಗಿ 2001 ರಲ್ಲಿ ಎಲ್‌ಅಂಡ್ ಟಿಗೆ 11.68 ಕೋಟಿ ರು.ಗೆ ಗುತ್ತಿಗೆ ನೀಡಲಾಗಿದ್ದು, ಈ ಮಧ್ಯೆ ಜಮೀನನ್ನು ದೇವರಾಜನ ಹೆಸರಿಗೆ ಕಾನೂನು ಬಾಹೀರವಾಗಿ ಖಾತೆ ಮಾಡಿಕೊಡಲಾಗಿದೆ. 2004 ರಲ್ಲಿ ಸಿಎಂ ಸಿದ್ದರಾಮಯ್ಯನವರ ಬಾಮೈದುನ ಮಲ್ಲಿಕಾರ್ಜುನಸ್ವಾಮಿ ಅವರು 5.95 ಲಕ್ಷ ರು.ಗೆ ಅಕ್ರಮವಾಗಿ ಖರೀದಿ ಮಾಡಿದ್ದಾರೆ. ಬಳಿಕ2005 ರಲ್ಲಿ ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದಾರೆ. ಭೂಸ್ವಾಧೀನವಾಗಿ ಪರಿಹಾರ ಪಡೆದ ನಂತರವೂ ಈ ಜಮೀನನ್ನು ಖರೀದಿ ಮಾಡಲು ಹೇಗೆ ಸಾಧ್ಯ, ಬಡಾವಣೆ ನಿರ್ಮಾಣಕ್ಕೆ ಗುತ್ತಿಗೆ ನೀಡುವ ಮುನ್ನ ಅನ್ಯಕ್ರಾಂತ ಆಗಬೇಕಿತ್ತು. ಆದರೆ ನಂತರ ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದಾದರೂ ಹೇಗೆ ಎಂದು ಪ್ರಶ್ನಿಸಿದರು.

ನಂತರ 2010 ರಲ್ಲಿ ಮಲ್ಲಿಕಾರ್ಜುನಸ್ವಾಮಿ ಅವರು ಸಿಎಂ ಪತ್ನಿ ಪಾರ್ವತಿ ಅವರಿಗೆ ದಾನವಾಗಿ ಜಮೀನನ್ನು ನೀಡಿದ್ದಾರೆ. ಈ ವೇಳೆಗೆ ಸದರಿ ಜಮೀನು ಬಡಾವಣೆಯಾಗಿ ಮಾರ್ಪಡಿಸಿದ್ದು, ಮುಡಾಗೆ ಪಾರ್ವತಿ ಅವರು ನನಗೆ ಸೇರಿದ ಜಮೀನನ್ನು ಬಡಾವಣೆಯಾಗಿ ಮಾಡಿದ್ದೀರಿ. ಪರಿಹಾರ ಅಥವಾ ಸಮನಾಂತರ ನಿವೇಶನ ನೀಡಂತೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರ 2017 ರಲ್ಲಿ ಮುಡಾದಲ್ಲಿ ಚರ್ಚೆಗೆ ಬಂದು ಬದಲಿ ನಿವೇಶನ ನೀಡಲಾಗದು ಎಂದು ಮುಡಾ ಆಯುಕ್ತರು ನಿರಾಕರಿಸಿದ್ದಾರೆ. ನಂತರ ನಡೆದ ಮುಡಾ ಸಭೆಯಲ್ಲಿ ೫೦:೫೦ರ ಅನುಪಾತದಲ್ಲಿ ನಿವೇಶನ ನೀಡಲು ನಿರ್ಣಯ ಕೈಗೊಳ್ಳಲಾಯಿತು. ಆದರೆ ಮುಡಾ ಕೈಗೊಂಡ ನಿರ್ಣಯವನ್ನು2020 ರಲ್ಲಿ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ‌್ಯದರ್ಶಿಗಳು ರದ್ದುಪಡಿಸಿ, ತನಿಖೆಗೆ ಆದೇಶಿಸಿದ್ದರು ಎಂದು ವಿವರಿಸಿದರು.

ದೇವನೂರು ಬಡಾವಣೆಯಲ್ಲಿ ನಿವೇಶನಗಳಿಲ್ಲ ಎಂದು ವಿಜಯನಗರ ಬಡಾವಣೆಯಲ್ಲಿ ನಿವೇಶನ ಪಡೆಯಲಾಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಿರುವುದು ಸುಳ್ಳು ಎಂದ ಅವರು, ಆ ಬಡಾವಣೆಯಲ್ಲಿ ಇಂದಿಗೂ ೫೦೦ಕ್ಕೂ ಹೆಚ್ಚು ಖಾಲಿ ನಿವೇಶನಗಳಿವೆ. ಅಲ್ಲೇ ಪಡೆಯಬಹುದಾಗಿದ್ದರೂ ಅವರು ಸ್ವಜನಪಕ್ಷಪಾತ, ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರವೇ ನೇಮಕ ಮಾಡಿರುವ ಮುಡಾ ಅಧ್ಯಕ್ಷ ಮರೀಗೌಡರೇ ಮುಡಾದಲ್ಲಿ 3 ರಿಂದ4  ಸಾವಿರ ಕೋಟಿ ಅಕ್ರಮ ನಡೆದಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಗ್ರವಾಗಿ ಸಿಬಿಐ ತನಿಖೆ ನಡೆಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ವಿಪಕ್ಷ ಉಪ ನಾಯಕ ಅರವಿಂದ್ ಬೆಲ್ಲದ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಡಾ. ಅಶ್ವತ್ಥನಾರಾಯಣ, ಗೋಪಾಲಯ್ಯ, ಜೆಡಿಎಸ್ ನಾಯಕ ರಮೇಶ್‌ಗೌಡ, ವಕ್ತಾರ ಸಿ.ಟಿ.ಮಂಜುನಾಥ್, ನಾಗಾನಂದ್ ಗೋಷ್ಠಿಯಲ್ಲಿದ್ದರು.

Share this article