ಏ.2ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಪ್ರವಾಸ - ಏ. 3ರಂದು ರಾಹುಲ್‌ ಗಾಂಧಿ ಭೇಟಿ

Published : Mar 29, 2025, 11:19 AM IST
Karnataka Chief Minister Siddaramaiah (File Photo/ANI)

ಸಾರಾಂಶ

 ಸಿದ್ದರಾಮಯ್ಯ ಅವರು  ಏ.2ರಂದು ಮೂರು ದಿನಗಳ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ವರಿಷ್ಠ ರಾಹುಲ್‌ ಗಾಂಧಿ ಸೇರಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಹನಿಟ್ರ್ಯಾಪ್‌ ಪ್ರಕರಣವೂ ಸೇರಿ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಯಲ್ಲಿರುವ ಹಲವು ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದಾರೆ

 ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಯ ನಂತರ ಏ.2ರಂದು ಮೂರು ದಿನಗಳ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ವರಿಷ್ಠ ರಾಹುಲ್‌ ಗಾಂಧಿ ಸೇರಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಹನಿಟ್ರ್ಯಾಪ್‌ ಪ್ರಕರಣವೂ ಸೇರಿ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಯಲ್ಲಿರುವ ಹಲವು ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಅವರು ದೆಹಲಿ ಭೇಟಿಯ ಮೊದಲ ದಿನ ಕರ್ನಾಟಕ ಭವನದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಏ.3ರಂದು ಬೆಳಗ್ಗೆ 10.30 ಗಂಟೆಗೆ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ರಾಜ್ಯ ಕಾಂಗ್ರೆಸ್‌ನಲ್ಲಿ ವಿಪ್ಲವ ಸೃಷ್ಟಿಸಿರುವ ಹನಿಟ್ರ್ಯಾಪ್‌ ಪ್ರಕರಣದ ಬಗ್ಗೆ ಇಬ್ಬರೂ ಮುಖಂಡರ ಮಧ್ಯೆ ಚರ್ಚೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ವಿಚಾರದ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸದೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ ರಾಜಣ್ಣ ಅವರ ಧೋರಣೆ ಬಗ್ಗೆಯೂ ಹೈಕಮಾಂಡ್‌ ಆಕ್ಷೇಪವೆತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅವರಿಂದ ಹೈಕಮಾಂಡ್‌ ವಿವರಣೆ ಪಡೆಯುವ ಸಾಧ್ಯತೆಯಿದೆ.

ಅಲ್ಲದೆ, ಈ ಪ್ರಕರಣದ ಬಗೆಗಿನ ತನಿಖೆ ಹಾಗೂ ರಾಜ್ಯ ರಾಜಕಾರಣದ ಮೇಲೆ ಅದು ಬೀರುವ ಪ್ರಭಾವದ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಇದಾದ ನಂತರ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಆ ಬಳಿಕ ಏ.4 ರಂದು ಮುಖ್ಯಮಂತ್ರಿ ರಾಜ್ಯಕ್ಕೆ ಹಿಂತಿರುಗುವರು.

ಎಂಎಲ್ಸಿ ಸ್ಥಾನ ಬಗ್ಗೆಯೂ ಚರ್ಚೆ:

ಇನ್ನು ಖಾಲಿ ಆಗಿರುವ ನಾಲ್ಕು ವಿಧಾನಪರಿಷತ್‌ ಸದಸ್ಯ ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಆರಂಭದ ಬಗ್ಗೆಯೂ ವರಿಷ್ಠರೊಂದಿಗೆ ಸಿದ್ದರಾಮಯ್ಯ ಮಾತುಕತೆ ನಡೆಸಲಿದ್ದಾರೆ.

ಈಗಾಗಲೇ ಯು.ಬಿ.ವೆಂಕಟೇಶ್‌, ಪ್ರಕಾಶ್‌ ರಾಥೋಡ್‌, ಸಿ.ಪಿ.ಯೋಗೇಶ್ವರ್‌, ತಿಪ್ಪೇಸ್ವಾಮಿ ಅವರಿಂದ ನಾಲ್ಕು ಪರಿಷತ್‌ ಸದಸ್ಯ ಸ್ಥಾನಗಳು ತೆರವಾಗಿವೆ. ವಿವಿಧ ಕ್ಷೇತ್ರಗಳಿಂದ ಅರ್ಹರನ್ನು ಈ ಸ್ಥಾನಗಳಿಗೆ ನಾಮನಿರ್ದೇಶನ ಮಾಡಬೇಕಿದೆ. ಆದರೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಹೀಗಾಗಿ ಈ ಬಾರಿ ಪ್ರಾಥಮಿಕ ಚರ್ಚೆ ಮಾತ್ರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಮೇ ಬಳಿಕವಷ್ಟೇ ಸಂಪಟ ಪುನರ್‌ರಚನೆ?

ಸಚಿವ ಸಂಪುಟದಿಂದ ಕೆಲ ಸಚಿವರನ್ನು ಕೈಬಿಟ್ಟು ಹೊಸಬರನ್ನು ತೆಗೆದುಕೊಳ್ಳುವ ಬಗ್ಗೆಯೂ ಚರ್ಚೆಯಿದೆ. ಆದರೆ ಸರ್ಕಾರ ಎರಡು ವರ್ಷ ಪೂರೈಸಿದ ಬಳಿಕ ಅಂದರೆ ಮೇ ತಿಂಗಳ ಬಳಿಕ ಸಂಪುಟ ಪುನರ್‌ರಚನೆ ಆಗುವ ಸಾಧ್ಯತೆಯಿದೆ. ಹೀಗಾಗಿ ಏ.7 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಎಐಸಿಸಿ ಅಧಿವೇಶನ ಬಳಿಕ ಈ ಬಗ್ಗೆ ಚರ್ಚೆ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ