ಪೆನ್‌ಡ್ರೈವ್‌ ಸಮೇತ ರಾಜಣ್ಣ ಪುತ್ರ ಪೊಲೀಸರಿಗೆ ದೂರು - ನನ್ನ ಹತ್ಯೆಗೆ ₹70 ಲಕ್ಷಕ್ಕೆ ಸುಪಾರಿ: ರಾಜೇಂದ್ರ

ಸಾರಾಂಶ

ಸುಪಾರಿ ಹಂತಕರಿಂದ ತಮ್ಮ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಆರೋಪಿಸಿ ಡಿಜಿಗೆ ಗುರುವಾರ ದೂರು ನೀಡಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಪುತ್ರ ಹಾಗೂ ಶಾಸಕ ರಾಜೇಂದ್ರ, ಡಿಜಿ ಸೂಚನೆಯಂತೆ ಶುಕ್ರವಾರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪೆನ್‌ಡ್ರೈವ್‌ ಸಮೇತ ದೂರು ನೀಡಿದ್ದಾರೆ.

ತುಮಕೂರು : ಸುಪಾರಿ ಹಂತಕರಿಂದ ತಮ್ಮ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಆರೋಪಿಸಿ ಡಿಜಿಗೆ ಗುರುವಾರ ದೂರು ನೀಡಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಪುತ್ರ ಹಾಗೂ ಶಾಸಕ ರಾಜೇಂದ್ರ, ಡಿಜಿ ಸೂಚನೆಯಂತೆ ಶುಕ್ರವಾರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪೆನ್‌ಡ್ರೈವ್‌ ಸಮೇತ ದೂರು ನೀಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮಗಳ ಹುಟ್ಟಿದ ಹಬ್ಬದ ದಿನ ಕೊಲೆಗೆ ಯತ್ನ ನಡೆದಿತ್ತು. 

70 ಲಕ್ಷ ರು.ಗೆ ಸುಪಾರಿ ನೀಡಲಾಗಿದ್ದು, ₹5 ಲಕ್ಷವನ್ನು ಪಾವತಿಸಲಾಗಿದೆ. ಇದಕ್ಕೆ ಸಂಬಂಧಿಸಿ ಒಂದು ಹುಡುಗಿಯು ಹುಡುಗನ ಜೊತೆ ಮಾತನಾಡುವ 18 ನಿಮಿಷದ ಆಡಿಯೋ ಇದೆ. ಸೋಮ ಮತ್ತು ಭರತ್ ಎನ್ನುವ ಹೆಸರು ಆಡಿಯೋದಲ್ಲಿ ಕೇಳಿ ಬಂದಿದೆ. ಅವರಿಬ್ಬರು ಯಾರಂತ ನನಗೆ ಗೊತ್ತಿಲ್ಲ. ದೂರಿನೊಂದಿಗೆ ಆಡಿಯೋ ಇರುವ ಪೆನ್‌ಡ್ರೈವ್‌ ಕೊಟ್ಟು ಭದ್ರತೆ ನೀಡುವಂತೆ ಕೇಳಿದ್ದೇನೆ ಎಂದು ತಿಳಿಸಿದರು.

ಜಿಪಿಎಸ್ ಚಿಪ್ ಅನ್ನು ಕಾರಿಗೆ ಅಳವಡಿಸಬೇಕೆಂದು ಸ್ಕೆಚ್ ಹಾಕಲಾಗಿತ್ತಂತೆ. ಜನವರಿಯಲ್ಲಿ ನನ್ನ ಸರ್ಕಲ್‌ನಲ್ಲಿ ಆಡಿಯೋ ಸಿಕ್ಕಿತು. ತಮಾಷೆ ಅಂತಾ‌ ಸುಮ್ಮನಾಗಿದ್ದೆ. ಅದರೆ ಅದು ಗಂಭೀರ ವಿಷಯ ಎಂದು ಗೊತ್ತಾಗಿ ದೂರು ನೀಡಿದ್ದೇನೆ‌ ಎಂದರು. ಹನಿಟ್ಯಾಪ್‌ ವಿಚಾರವಾಗಿ ಸಿಐಡಿ ಅವರು ತನಿಖೆ ನಡೆಸುತ್ತಿದ್ದಾರೆ ಎಂದು ರಾಜೇಂದ್ರ ಪ್ರತಿಕ್ರಿಯಿಸಿದರು. ದೂರು ಸ್ವೀಕರಿಸಿದ್ದೇವೆ- ಎಸ್ಪಿ: ತುಮಕೂರು ಎಸ್ಪಿ ಅಶೋಕ್ ಕೆ.ವಿ. ಅವರು ಮಾಧ್ಯಮದವರ ಜೊತೆ ಮಾತನಾಡಿ, ರಾಜೇಂದ್ರ ದೂರನ್ನು ವಿಚಾರಣೆಗೆ ತೆಗೆದುಕೊಂಡಿದ್ದೇವೆ. ಕ್ಯಾತಸಂದ್ರ ಠಾಣೆಗೆ ದೂರು ಕೊಡಲಾಗಿದೆ. ಜೊತೆಗೆ ಒಂದು ಪೆನ್ ಡ್ರೈವ್ ಕೊಟ್ಟಿದ್ದಾರೆ. ಅದರಲ್ಲಿ ಏನು ಇದೆ ಎಂದು ಗೊತ್ತಿಲ್ಲ. ಚೆಕ್ ಮಾಡಿ ಹೇಳುತ್ತೇನೆ. ತಡವಾಗಿ ದೂರು ನೀಡಿದ್ದಕ್ಕೆ ಕಾರಣ ಕೊಟ್ಟಿಲ್ಲ ಎಂದು ತಿಳಿಸಿದರು.

ಆಡಿಯೋದಲ್ಲಿ ಭರತ್ ಮತ್ತು ಸೋಮ ಎನ್ನುವವರ ಹೆಸರಿದೆ ಎಂದು ಹೇಳಿದ್ದಾರೆ. ಸೋಮ ತುಮಕೂರು ನಗರ ಪೊಲೀಸ್ ಠಾಣೆಯ ರೌಡಿಶೀಟರ್, ಈ ಹಿಂದೆ ತುಮಕೂರು ಜೈಲಿಗೆ ಕಳುಹಿಸಲಾಗಿತ್ತು. ಸದ್ಯ ಬೇಲ್ ಮೇಲೆ ‌ಹೊರಗಡೆ ಇದ್ದಾನೆ. ಈ ಬಗ್ಗೆಯೂ ಸಹ ತನಿಖೆ ನಡೆಸಲಾಗುತ್ತದೆ ಎಂದರು.

Share this article