ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಂದಿನ ಒಂದು ತಿಂಗಳೊಳಗೆ ನಗರದ ಎಲ್ಲ ಗುಂಡಿಗಳನ್ನು ಗುಣಮಟ್ಟ ಕಾಪಾಡಿಕೊಂಡು ಮುಚ್ಚಿ, ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಸಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವೈಟ್ ಟಾಪಿಂಗ್ ರಸ್ತೆ ಸರಿಯಾಗಿ ನಿರ್ವಹಿಸದ ಗುತ್ತಿಗೆದಾರರು ಹಾಗೂ ಎಂಜಿನಿಯರ್ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ.ಶನಿವಾರ ಮಧ್ಯಾಹ್ನ ಅಧಿಕಾರಿಗಳೊಂದಿಗೆ ದಿಢೀರ್ ನಗರ ಪ್ರದಕ್ಷಿಣೆ ಕೈಗೊಂಡು ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ. ಪರಿಶೀಲನೆ ವೇಳೆ ರಸ್ತೆಯೊಂದರಲ್ಲಿ ಜಲ್ಲಿ ಮಾತ್ರ ಹಾಕಿ ಟಾರು ಹಾಕದೇ ಬಿಟ್ಟಿದ್ದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಒಬ್ಬರನ್ನು ಅಮಾನತು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ರಸ್ತೆ ಗುಂಡಿ ಹೀಗೆಯೇ ಉಳಿದರೆ ಸಂಬಂಧಿಸಿದ ಪಾಲಿಕೆ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
1 ಕಿ.ಮೀಗೆ 13 ಕೋಟಿ ರು. ಖರ್ಚು ಮಾಡಿ ವೈಟ್ ಟಾಪಿಂಗ್ ಮಾಡಿರುವ ಬಾಗಲೂರು ರಸ್ತೆಯಲ್ಲಿ ಗುಂಡಿ ಬಿದ್ದಿವೆ. ರಸ್ತೆಯನ್ನು ಸರಿಪಡಿಸಿ ಗುಣಮಟ್ಟ ಕಾಪಾಡುವಂತೆ ಗುತ್ತಿಗೆದಾರ ಇನಾಯತ್ ಎಂಬುವರಿಗೆ ಅಧಿಕಾರಿಗಳ ಮೂಲಕ ನಿರ್ದೇಶನ ನೀಡಲಾಗಿದೆ. ನಗರದಲ್ಲಿ ಗುಂಡಿಗಳು ಇಲ್ಲ ಎನ್ನುವುದಿಲ್ಲ. ಆದರೆ, ಬಿಜೆಪಿಯವರ ಅವಧಿಯಲ್ಲಿ ಗುಂಡಿಗಳನ್ನು ಮುಚ್ಟಿಲ್ಲ. ಅವರು ಮುಚ್ಚಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. 14 ಸಾವಿರ ಗುಂಡಿಗಳ ಪೈಕಿ ಇನ್ನೂ ನಾಲ್ಕು ಸಾವಿರ ಉಳಿದಿವೆ. ಪ್ರತಿ ಮಳೆಗಾಲದಲ್ಲೂ ಗುಂಡಿಗಳು ಆಗುತ್ತವೆ. ಆದರೂ, ಸೂಕ್ತ ರೀತಿಯಲ್ಲಿ ಮುಚ್ಚುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.ಗುತ್ತಿಗೆದಾರರು, ಎಂಜಿನಿಯರ್‌ಗಳ ವಿರುದ್ಧ ಕ್ರಮ:
ವೈಟ್ ಟಾಪಿಂಗ್ ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.ಹೆಣ್ಣೂರಿನ ಬಾಗಲೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ರಸ್ತೆಯಲ್ಲಿ ಗುಂಡಿ ಇರುವುದನ್ನು ಗಮನಿಸಿದ ಮುಖ್ಯಮಂತ್ರಿಗಳು, ವೈಟ್ ಟಾಪಿಂಗ್ ರಸ್ತೆಯಲ್ಲಿ ಗುಂಡಿ ಬಿದ್ದಿರುವುದರ ಹೊಣೆಯನ್ನು ಗುತ್ತಿಗೆದಾರರೇ ಹೊರಬೇಕು. ಅಂತಹ ರಸ್ತೆಗಳ ನಿರ್ವಹಣೆಗೆ ಬಿಬಿಎಂಪಿ ಹಣ ನೀಡಲು ಬರುವುದಿಲ್ಲ. ವೈಟ್ ಟಾಪಿಂಗ್ ಮುಗಿಯಲು 2-3 ವರ್ಷ ಆಗುತ್ತದೆ. ಅಲ್ಲಿವರೆಗೂ ಗುತ್ತಿಗೆದಾರರೇ ರಸ್ತೆಗಳ ನಿರ್ವಹಣೆ ಮಾಡಬೇಕು. ಆದರೆ, ಹೇಳುವವರು, ಕೇಳುವವರು ಇಲ್ಲದಂತೆ ಗುತ್ತಿಗೆದಾರರು ವರ್ತಿಸುತ್ತಾರೆ ಎಂದು ಮುಖ್ಯಮಂತ್ರಿ ಗರಂ ಆದರು.
ಬಿ-ಸ್ಮೈಲ್ ಮುಖ್ಯ ಎಂಜಿನಿಯರ್ ಪ್ರಹ್ಲಾದ್‌ಗೆ ನೋಟಿಸ್:ವಾರ್ಡ್ ನಂಬರ್ 23ರ ಘನ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಒಳಗೆ ಇರಬೇಕಾದ ತ್ಯಾಜ್ಯ, ಹೊರಗೆ ಬಿದ್ದಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಅವರು ಅಧಿಕಾರಿಗಳ ವಿರುದ್ಧ ಸಿಟ್ಟಾಗಿ, ಸಂಗ್ರಹಣಾ ಕೇಂದ್ರದ ಒಳಗೆ ಸಾಕಷ್ಟು ಜಾಗವಿದೆ. ಆದರೂ, ಹೊರಗೆ ಏಕೆ ಎಸೆಯಲಾಗಿದೆ? ಈ ಕುರಿತು ಸ್ಪಷ್ಟನೆ ನೀಡುವಂತೆ ಬಿ-ಸ್ಮೈಲ್ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರಿಗೆ ನೋಟಿಸ್ ನೀಡಲು ಸೂಚನೆ ನೀಡಿದರು. ಅಲ್ಲಿಂದ ಸ್ವಲ್ಪ ದೂರದಲ್ಲಿ ರಸ್ತೆಯಲ್ಲಿ ಜೆಲ್ಲಿ ಕಲ್ಲುಗಳು ಬಿದ್ದಿರುವುದನ್ನು ಗಮನಿಸಿ ಇದಕ್ಕೆ ಕಾರಣರಾದ ಮತ್ತೋರ್ವ ಮುಖ್ಯ ಎಂಜಿನಿಯರ್ ರಾಘವೇಂದ್ರ ಪ್ರಸಾದ್ ಅವರಿಗೂ ನೋಟಿಸ್ ನೀಡಿ ಎಂದು ನಿರ್ದೇಶಿಸಿದರು.
ಕಸದ ರಾಶಿ ಕಣ್ಣಿಗೆ ಬಿದ್ದಿಲ್ಲವೇ?:ಹೆಣ್ಣೂರು ಫ್ಲೈಓವರ್ ಕೆಳಗೆ ಸುರಿದ ಕಟ್ಟಡ ತ್ಯಾಜ್ಯದೊಳಗೆ ಆಳೆತ್ತರದ ಗಿಡಗಳು ಬೆಳೆದು ನಿಂತಿರುವುದನ್ನು ಗಮನಿಸಿದ ಅವರು, ಇದು ತುಂಬಾ ಹಳೇ ತ್ಯಾಜ್ಯವಾಗಿದೆ. ಇಷ್ಟು ವರ್ಷಗಳಿಂದ ಎಷ್ಟು ಅಧಿಕಾರಿಗಳು ಇಲ್ಲಿ ಓಡಾಡುತ್ತೀರಿ, ಯಾರ ಕಣ್ಣಿಗೂ ಬಿದ್ದಿಲ್ಲವೇ. 24 ಗಂಟೆಗಳ ಒಳಗೆ ತ್ಯಾಜ್ಯ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ವಾಹನ ಜಪ್ತಿ ಮಾಡಲು ಸೂಚನೆ:ಪಣತ್ತೂರು ಟಿ ಕ್ರಾಸ್‌ನಲ್ಲಿ ತ್ಯಾಜ್ಯ ಸುರಿದಿರುವುದನ್ನು ಪತ್ತೆ ಹಚ್ಚಿ ವಾಹನ ಸೀಜ್ ಮಾಡಿ ಕೇಸ್ ದಾಖಲಿಸಬೇಕು. ಅಧಿಕಾರಿಗಳು ರಸ್ತೆಯಲ್ಲಿ ಕಣ್ಣು ಮುಚ್ಚಿಕೊಂಡು ಓಡಾಡ್ತೀರಾ? ರಸ್ತೆಗೆ ತ್ಯಾಜ್ಯ ಸುರಿದಿರುವುದು ಕಣ್ಣಿಗೆ ಬಿದ್ದಿಲ್ಲವೇ ಎಂದು ಜಿಬಿಎ, ಬಿಡಿಎ ಮತ್ತು ಟ್ರಾಫಿಕ್ ಪೊಲೀಸರನ್ನು ಖಾರವಾಗಿ ಪ್ರಶ್ನಿಸಿ ಸೂಕ್ತ ಕ್ರಮಕ್ಕೆ ಮುಖ್ಯಮಂತ್ರಿ ಸೂಚಿಸಿದರು.
ಹಾಳಾದ ರಸ್ತೆ ದುರಸ್ತಿಗೆ ನಿರ್ದೇಶನ:ಮೆಟ್ರೋ ಕಾಮಗಾರಿ ವೇಳೆ ಸರ್ವೀಸ್ ರಸ್ತೆಗಳ ನಿರ್ವಹಣೆಯನ್ನು ಗುತ್ತಿಗೆದಾರರು ನಿರ್ಲಕ್ಷಿಸಿದ್ದಾರೆ. ಇದರಿಂದ ರಸ್ತೆ ಬದಿ ನೀರು ನಿಲ್ಲುತ್ತಿದೆ. ವೈಟ್ ಟಾಪಿಂಗ್ ರಸ್ತೆಗಳು ಹಾಳಾಗುತ್ತಿವೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಯವರ ಗಮನಕ್ಕೆ ತಂದರು. ಸಂಬಂಧಪಟ್ಟವರು ನಿರ್ವಹಣೆ ಮಾಡಿ ರಸ್ತೆ ದುರಸ್ತಿಗೊಳಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ನೀರು ಹರಿಯುವಂತೆ ಮಾಡಿಪ್ರದಕ್ಷಿಣೆ ವೇಳೆ ವಿಂಡ್ಸರ್ ಮ್ಯಾನರ್ ಸೇತುವೆ ಬಳಿ ನೀರು ಹರಿದು ಹೋಗುವಂತೆ ಒಳಚರಂಡಿ ವ್ಯವಸ್ಥೆ ಮಾಡಬೇಕು. ರಾತ್ರಿ ವೇಳೆ ಕಾಮಗಾರಿ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.