ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ : ಕಾಂಗ್ರೆಸ್‌ಗೆ ಅಡ್ಡ ಮತದಾನದ ಆತಂಕ-ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ

KannadaprabhaNewsNetwork |  
Published : Sep 02, 2024, 02:04 AM ISTUpdated : Sep 02, 2024, 04:45 AM IST
Chikkaballapur MP Dr K Sudhakar

ಸಾರಾಂಶ

ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಸೆಪ್ಟೆಂಬರ್ 12 ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ಗೆ ಅಡ್ಡ ಮತದಾನದ ಆತಂಕ ಎದುರಾಗಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಚರ್ಚೆ ನಡೆಯುತ್ತಿದೆ.

 ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆ ಸೆಪ್ಟೆಂಬರ್ 12ಕ್ಕೆ ಚುನಾವಣಾ ಮುಹೂರ್ತ ನಿಗದಿಯಾಗಿದ್ದು, ಪ್ರಬಲ ಆಕಾಂಕ್ಷಿಗಳು ಬೆಂಬಲಿತ ನಾಯಕರ ಮಾರ್ಗದರ್ಶನದಲ್ಲಿ ಕಸರತ್ತು ಪ್ರಾರಂಭಿಸಿದ್ದಾರೆ. ಇದರ ನಡುವೆ ಕೈ ನಾಯಕರಿಗೆ ಅಡ್ಡ ಮತದಾನದ ಆತಂಕ ಶುರುವಾಗಿದ್ದು, ನಗರಸಭೆ ಸಂಸದ ಡಾ.ಕೆ. ಸುಧಾಕರ್ ಬಣದ ವಶವಾಗುವ ಎಲ್ಲಾ ಸೂಚನೆಗಳು ಕಾಣುತ್ತಿವೆ.

31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್‌ 16, ಜೆಡಿಎಸ್‌ನ 2. ಬಿಜೆಪಿಯ 9 ಮತ್ತು 4 ಪಕ್ಷೇತರ ಸದಸ್ಯರಿದ್ದು, ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರು ಸಹ ಮತ ಚಲಾಯಿಸಲಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮೀಸಲು ನಿಗದಿಪಡಿಸಲಾಗಿದೆ.ಆರು ಸದಸ್ಯರ ಬಗ್ಗೆ ಅನುಮಾನ

ಇದರ ನಡುವೆ ಕಾಂಗ್ರೆಸ್ ಚಿನ್ಹೆಯಡಿಯಲ್ಲಿ ಗೆದ್ದಿರುವ ಆರು ನಗರಸಭಾ ಸದಸ್ಯರು ಅಡ್ಡ ಮತದಾನದೊಂದಿಗೆ ಕಾಂಗ್ರೆಸ್‌ಗೆ ಕೈಕೊಡುವ ಸಾಧ್ಯತೆ ಹೆಚ್ಚಾಗಿದ್ದು, ಇವರೊಂದಿಗೆ ಇನ್ನೂ ಮೂವರು ಕಾಂಗ್ರೆಸ್ ನ ಸದಸ್ಯರು ಈಗಾಗಲೇ ರಾಜಕೀಯ ಲಾಭದ ಸ್ವಯಂ ತೀರ್ಮಾನಗಳನ್ನು ಬಹಿರಂಗವಾಗಿ ಚರ್ಚಿಸುತ್ತಿದ್ದಾರೆ.

ಕಾಂಗ್ರೆಸ್ ನ 16 ನಗರಸಭಾ ಸದಸ್ಯರಿದ್ದಾರೆ. ಶಾಸಕ ಮತ್ತು ಎಂಎಲ್ ಸಿ ಸೇರಿ 18 ಮತಗಳಾಗುತ್ತವೆ. ಕಳೆದ ಮೂರು ವರ್ಷಗಳ ಹಿಂದೆ ಅದ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದಾಗ ಪಕ್ಷೇತರ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಆದರೆ ಈ ಬಾರಿ ಹಾಗಾಗುವುದಿಲ್ಲಾ. ನಿಷ್ಟಾವಂತ ಕಾಂಗ್ರೆಸ್ ಸದಸ್ಯರೇ ಈ ಬಾರಿ ಅದ್ಯಕ್ಷ ಉಪಾಧ್ಯಕ್ಷರಾಗುತ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಬಿಜೆಪಿ ಬಳಿ 20 ಸ್ಥಾನ: ಸಂಸದ

ಸಂಸದ ಡಾ.ಕೆ.ಸುಧಾಕರ್‌, ತಮ್ಮ ಬಳಿ 19 ಸದಸ್ಯರು ಮತ್ತು ತಮ್ಮ ಮತ ಸೇರಿ 20 ಮತಗಳಿವೆ. ನಾವೇ ನಗರಸಭೆ ಚುಕ್ಕಾಣಿ ಹಿಡಿಯುತ್ತೇವೆ. ನಾವು 15 ತಿಂಗಳ ಹಿಂದೆ ನಗರಕ್ಕೆ ಬೇಕಾದ ಅಭಿವೃದ್ಧಿ ಕಾರ್ಯಗಳಿಗಾಗಿ ಸುಮಾರು 30 ರಿಂದ 40 ಕೋಟಿ ರೂ. ಅನುದಾನವನ್ನು ತಂದಿದ್ದೇವೆ. ಚಿಕ್ಕಬಳ್ಳಾಪುರದ ಅಭಿವೃದ್ಧಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದಿದ್ದಾರೆ.ಇದರ ನಡುವೆ ಶನಿವಾರ ತಾಲ್ಲೂಕಿನ ಪೆರೇಸಂದ್ರದ ಸಂಸದರ ಸ್ವಗೃಹದಲ್ಲಿ ನಗರಸಭೆ ಅಧ್ಯಕ್ಷ,ಉಪಾಧ್ಯಕ್ಷ ಚುನಾವಣೆ ಕುರಿತು ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಹಾಲಿ ಮತ್ತು ಮಾಜಿ ನಗರಸಭೆ ಸದಸ್ಯರ ಸಭೆ ನಡೆಸಿ ಚುನಾವಣಾ ರಣ ತಂತ್ರ ಹಣೆದಿದ್ದಾರೆ ಎನ್ನಲಾಗಿದೆ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ