ಚಿತ್ತಾಪುರ ಕದನ ಕೋರ್ಟಿಗೆ : ಹೊಸದಾಗಿ ಮನವಿ ಪತ್ರ ಸಲ್ಲಿಸುವಂತೆ ನಿರ್ದೇಶನ

KannadaprabhaNewsNetwork |  
Published : Oct 20, 2025, 01:02 AM ISTUpdated : Oct 20, 2025, 05:18 AM IST
RSS 100 Years

ಸಾರಾಂಶ

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಡೆಸಲು ಉದ್ದೇಶಿಸಿದ್ದ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ಸರ್ಕಾರದ ಕ್ರಮ ನ್ಯಾಯಾಲಯದ ಮೆಟ್ಟಿಲೇರಿದ್ದು, ನ.2ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸುವಂತೆ ಆರ್‌ಎಸ್‌ಎಸ್‌ಗೆ ಹೈಕೋರ್ಟ್‌ ನಿರ್ದೇಶಿಸಿದೆ.  

  ಬೆಂಗಳೂರು :  ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಭಾನುವಾರ ನಡೆಸಲು ಉದ್ದೇಶಿಸಿದ್ದ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ಸರ್ಕಾರದ ಕ್ರಮ ನ್ಯಾಯಾಲಯದ ಮೆಟ್ಟಿಲೇರಿದ್ದು, ನ.2ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಹೊಸದಾಗಿ ಮನವಿ ಪತ್ರ ಸಲ್ಲಿಸುವಂತೆ ಆರ್‌ಎಸ್‌ಎಸ್‌ಗೆ ಹೈಕೋರ್ಟ್‌ ನಿರ್ದೇಶಿಸಿದೆ. ಇದರಿಂದಾಗಿ, ಸಚಿವ ಪ್ರಿಯಾಂಕ್‌ ಖರ್ಗೆ ಸ್ವಕ್ಷೇತ್ರ ಚಿತ್ತಾಪುರದಲ್ಲಿ ನಡೆಯಬೇಕಿದ್ದ ಪಥಸಂಚಲನ ಮುಂದೂಡಿಕೆಯಾದಂತಾಗಿದೆ.

ಅಕ್ಟೋಬರ್ 19ರಂದು ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಶುರುವಾಗಿ ಮತ್ತೆ ಅಲ್ಲಿಗೆ ಮರಳುವ ಪಥಸಂಚಲನ ಮತ್ತು ನಂತರ ಸಾರ್ವಜನಿಕ ಸಮಾವೇಶ ನಡೆಸುವುದಕ್ಕೆ ಅನುಮತಿ ನಿರಾಕರಿಸಿ ಸ್ಥಳೀಯ ತಹಶೀಲ್ದಾರ್ ಅ.18ರಂದು ಹೊರಡಿಸಿದ ಆದೇಶ ರದ್ದುಪಡಿಸಬೇಕು. ಪಥಸಂಚಲನಕ್ಕೆ ಅನುಮತಿಸಲು ತಹಶೀಲ್ದಾರ್‌ಗೆ ನಿರ್ದೇಶಿಸಬೇಕು ಎಂದು ಕೋರಿ ಆರ್‌ಎಸ್‌ಎಸ್‌ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ವಿಶೇಷ ಏಕಸದಸ್ಯ ಪೀಠ ಭಾನುವಾರ ಅರ್ಜಿಯನ್ನು ವಿಚಾರಣೆ ನಡೆಸಿತು.

ಈ ವೇಳೆ ಆರ್‌ಎಸ್‌ಎಸ್‌ ಪಥಸಂಚಲನ ನಡೆಸಬಾರದು ಎಂಬ ಉದ್ದೇಶದಿಂದ ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿಸಿದ ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ಅವರು, ನಂತರ ನ್ಯಾಯಾಲಯದ ಸಲಹೆ ಮೇರೆಗೆ ನ.2ರಂದು ಪಥಸಂಚಲನ ನಡೆಸುವುದಾಗಿ ತಿಳಿಸಿದರು.

ಆಗ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಅವರು, ಕಾರ್ಯಕ್ರಮ (ಆರ್‌ಎಸ್‌ಎಸ್‌ ಪಥಸಂಚಲನ) ನಡೆಸಲು ನಿರ್ದಿಷ್ಟ ಪ್ರದೇಶ ಗೊತ್ತು ಮಾಡಲಾಗುವುದು ಎಂದು ಪೀಠಕ್ಕೆ ಭರವಸೆ ನೀಡಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ ನ.2ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ (ಎಲ್ಲಿಂದ ಎಲ್ಲಿಯವರೆಗೆ ಪಥಸಂಚಲನ ನಡೆಯಲಿದೆ ಮತ್ತು ಏಕೆ ಪಥಸಂಚಲನ ನಡೆಸಲಾಗುತ್ತಿದೆ ಎಂಬುದನ್ನು ಉಲ್ಲೇಖಿಸಿ), ಸ್ಥಳ ಮತ್ತು ಸಮಯದ ಮಾಹಿತಿಯ ಜೊತೆಗೆ ಅರ್ಜಿದಾರರು ಕಲಬುರಗಿ ಜಿಲ್ಲಾಧಿಕಾರಿಗೆ ಹೊಸದಾಗಿ ಅ.19ರಂದು ಮನವಿ ಪತ್ರ ಸಲ್ಲಿಸಬೇಕು. ಅದರ ಪ್ರತಿಯನ್ನು ಉಪವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತು ಪೊಲೀಸರಿಗೆ ಸಲ್ಲಿಸಬೇಕು. ಜೊತೆಗೆ ಪಥಸಂಚಲನ ನಡೆಸುವ ವಿಚಾರದಲ್ಲಿ ಅ.18ರಂದು ತಹಶೀಲ್ದಾರ್ ಎತ್ತಿರುವ ವಿಚಾರಗಳಿಗೂ ಅರ್ಜಿದಾರರು ನಿರ್ದಿಷ್ಟವಾಗಿ ಉತ್ತರಿಸಬೇಕು ಎಂದು ಸೂಚಿಸಿತು.

ಅಲ್ಲದೆ, ಅರ್ಜಿದಾರರ ಈ ಮನವಿ ಮತ್ತು ಪಥಸಂಚಲನದ ಹಾದಿಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಅ.24ರಂದು ವರದಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಅಂದು ಮಧ್ಯಾಹ್ನ 2.30ಕ್ಕೆ ಮುಂದೂಡಿದ ಪೀಠ, ಅರ್ಜಿ ಕುರಿತು ಮೆರಿಟ್ ಮೇಲೆ ಯಾವುದೇ ಆದೇಶ ಮಾಡಿಲ್ಲ. ಸರ್ಕಾರ ಸಲ್ಲಿಸುವ ವರದಿ ಆಧರಿಸಿ ನ್ಯಾಯಾಲಯವು ಮುಂದೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿತು.

ಇದಕ್ಕೂ ಮುನ್ನ ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠ, ಪಥಸಂಚಲನಕ್ಕೆ ಅನುಮತಿಗಾಗಿ ಯಾವ ಪ್ರಾಧಿಕಾರವನ್ನು ಹಾಗೂ ಯಾವ ಕಾನೂನಿನ ಅಡಿ ಮನವಿ ಮಾಡಬೇಕು ಎಂಬ ವಿಚಾರ ಎಲ್ಲಿದೆ? ಗುಂಪೊಂದು ಪಂಥಸಂಚಲನ ನಡೆಸಲು ಅವಕಾಶವಿದೆಯೇ? ಅದು ಪ್ರತಿಭಟನೆಯೇ ಆಗಿರಬೇಕೆಂದಿಲ್ಲ. ಅದು ಮೌನ ಪ್ರತಿಭಟನೆಯಾಗಿರಬಹುದು? ಜನರಲ್ಲಿ ಜಾಗೃತಿ ಮೂಡಿಸಲು ಇಚ್ಛಿಸಬಹುದು? ಇದಕ್ಕೆ ಅನುಮತಿ ಬೇಕೆ? ಎಂದು ಸರ್ಕಾರವನ್ನು ಪ್ರಶ್ನಿಸಿತು.

ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಉತ್ತರಿಸಿ, ಬೆಂಗಳೂರಿನಲ್ಲಿ ಪ್ರತಿಭಟನೆ, ರ್‍ಯಾಲಿ, ಸಮಾವೇಶ ನಡೆಸುವುದಕ್ಕೆ ಸಂಬಂಧಿಸಿದಂತೆ 2021ರ ಅ.29ರಂದು ಆದೇಶ ಹೊರಡಿಸಲಾಗಿದೆ. ಆ ನಿಬಂಧನೆಯನ್ನು ರಾಜ್ಯದ ಬೇರೆ ಕಡೆಗೂ ಅನ್ವಯಿಸಬಹುದು. ಪೊಲೀಸ್ ಕಾಯ್ದೆ ಸೆಕ್ಷನ್ 31, 35 ಮತ್ತು 64 ಇದಕ್ಕೆ ಪೂರಕವಾಗಿದೆ. ಇದನ್ನು ಹೊರತುಪಡಿಸಿ ಮನವಿ ಪರಿಗಣಿಸಲು ಯಾವುದೇ ಕಾಯ್ದೆ ಇಲ್ಲ. ಅಲ್ಲದೇ, ಆರ್‌ಎಸ್‌ಎಸ್‌ ಪಥಸಂಚಲನ ನಡೆಸಲು ಕೋರಿರುವ ದಿನವೇ ಭೀಮಾ ಆರ್ಮಿ ಮತ್ತು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಗಳು ಅದೇ ಸ್ಥಳದಲ್ಲಿ, ಅದೇ ದಿನ ಸಮಾವೇಶ ನಡೆಸಲು ಉದ್ದೇಶಿಸಿದ್ದವು. ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ತಹಶೀಲ್ದಾರ್ ಅವರು ಅನುಮತಿ ನಿರಾಕರಿಸಿದ್ದಾರೆ ಎಂದು ವಿವರಿಸಿದರು.

ಆ ವೇಳೆ ಪ್ರತಿಕ್ರಿಯಿಸಿದ ಪೀಠ, ಬೇರೊಂದು ದಿನ ಪಥಸಂಚಲನ ನಡೆಸಲು ಸಾಧ್ಯವೇ ಎಂದು ಅರ್ಜಿದಾರರ ಪರ ವಕೀಲರನ್ನು ಕೇಳಿತು. ಅದಕ್ಕೆ ಉತ್ತರಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು, ನ.2ರಂದು ನಡೆಸಬಹುದು ಎಂದರು. ಅಡ್ವೊಕೇಟ್ ಜನರಲ್ ಅವರು, ಕಾರ್ಯಕ್ರಮ ನಡೆಸಲು ನಿರ್ದಿಷ್ಟ ಪ್ರದೇಶ ಗೊತ್ತು ಮಾಡಲಾಗುವುದು ಎಂದು ತಿಳಿಸಿದರು. ಅರುಣ್ ಶ್ಯಾಮ್ ಅವರು, ಈಗಾಗಲೇ ಸಲ್ಲಿಸಿರುವ ನಮ್ಮ ಪಥಸಂಚಲನದ ಹಾದಿಯನ್ನು ಸರ್ಕಾರ ಪರಿಗಣಿಸಬೇಕು ಎಂದು ಕೋರಿದರು.

ಅಡ್ವೋಕೇಟ್‌ ಜನರಲ್‌ ಅವರು, ರಸ್ತೆಗಳಲ್ಲಿ ಮೆರವಣಿಗೆ ನಡೆಸುವುದಕ್ಕೆ ನ್ಯಾಯಾಲಯಗಳು ಮಹತ್ವ ನೀಡಿಲ್ಲ. ಆದರೆ, ಸರ್ಕಾರ ಈ ವಿಚಾರವನ್ನು ಪರಿಶೀಲಿಸಲಿದೆ ಎಂದು ತಿಳಿಸಿದರು.

ಅರುಣ್‌ ಶ್ಯಾಮ್‌ ಅವರು ಉತ್ತರಿಸಿ, ಆರ್‌ಎಸ್ಎಸ್‌ಗೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕಳಕಳಿ ಇದೆ. ರಾಜ್ಯದಾದ್ಯಂತ ಇದುವರೆಗೆ 250 ಸಮಾವೇಶಗಳನ್ನು ನಡೆಸಲಾಗಿದೆ. ಯಾವುದೇ ಸಾಮರಸ್ಯ, ಕಾನೂನು, ಸುವ್ಯವಸ್ಥೆಗೆ ಭಂಗ ತರುವಂತಹ ದುರ್ಘಟನೆ ನಡೆದಿಲ್ಲ. ರಾಜ್ಯ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗಿದೆ. ಪಥಸಂಚನವನ್ನು ರದ್ದುಪಡಿಸುವುದು ಸರ್ಕಾರದ ಉದ್ದೇಶವಾಗಿದ್ದು, ಅದಕ್ಕಾಗಿ ಅನುಮತಿ ನಿರಾಕರಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠ, ಈ ಮೇಲಿನಂತೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

PREV
Read more Articles on

Recommended Stories

ಗುಜರಾತ್‌ ಸಂಪುಟ ಪುನಾರಚನೆ : 26 ಸಚಿವರಿಗೆ ಸ್ಥಾನ
ಸಮೀಕ್ಷೆಯಲ್ಲಿ 60 ಪ್ರಶ್ನೆ ಏಕೆ ಎನ್ನುವವರು ಸ್ವಾರ್ಥ ರಾಜಕಾರಣಿಗಳು: ಸಿದ್ದು ಟ್ವೀಟ್‌