ವಂಚನೆ ಕೇಸ್‌: ಜಾರಕಿಹೊಳಿ ಸಕ್ಕರೆ ಕಾರ್ಖಾನೆಗೆ ಸಿಐಡಿ ದಾಳಿ

KannadaprabhaNewsNetwork | Updated : Feb 07 2024, 08:51 AM IST

ಸಾರಾಂಶ

ಮಾಜಿ ಸಚಿವ, ಗೋಕಾಕ್‌ನ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಮಾಲೀಕತ್ವದ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ಮೇಲೆ ಮಂಗಳವಾರ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಾಜಿ ಸಚಿವ, ಗೋಕಾಕ್‌ನ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಮಾಲೀಕತ್ವದ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ಮೇಲೆ ಮಂಗಳವಾರ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಅಪೆಕ್ಸ್ ಬ್ಯಾಂಕ್‌ನಲ್ಲಿ ಕಾರ್ಖಾನೆ ಸ್ಥಾಪನೆಗೆ ₹439 ಕೋಟಿ ಸಾಲ ಪಡೆದು ಮರುಪಾವತಿ ಮಾಡದಿರುವ ಪ್ರಕರಣಕ್ಕೆ ಸಂಬಂಧಿಸಿ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದ ಸಮೀಪದಲ್ಲಿರುವ ಈ ಕಾರ್ಖಾನೆ ಸ್ಥಾಪನೆಗೆಂದು ₹439 ಕೋಟಿ ಸಾಲ ಪಡೆಯಲಾಗಿತ್ತು. ಇದೀಗ ಮಾಲೀಕರು ಸಾಲ ಮರು ಪಾವತಿಸದೆ ಮೋಸ ಮಾಡುವ ಉದ್ದೇಶ ಹೊಂದಿದ್ದಾರೆಂದು ಆರೋಪಿಸಿ ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್ ರಾಜಣ್ಣ ಮುತ್ತಶೆಟ್ಟಿ ಅವರು ಬೆಂಗಳೂರಿನ ವಿವಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಪ್ರಕರಣದ ತನಿಖೆಯನ್ನು ನಂತರ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು.ಮಧ್ಯಾಹ್ನ 3 ಗಂಟೆಗೆ ನಾಲ್ವರು ಅಧಿಕಾರಿಗಳ ನೇತೃತ್ವದ ಸಿಐಡಿ ತಂಡ ಕಾರ್ಖಾನೆಗೆ ದಾಳಿ ನಡೆಸಿದ್ದು, ಈ ವೇಳೆ ಕಾರ್ಖಾನೆಯ ಮುಖ್ಯ ಪ್ರವೇಶ ದ್ವಾರವನ್ನು ಬಂದ್‌ ಮಾಡಲಾಗಿತ್ತು.

ದಾಳಿ ಸಂದರ್ಭದಲ್ಲಿ ಹೊರಗಿನವರಿಗೆ ಕಾರ್ಖಾನೆಯೊಳಗೆ ಪ್ರವೇಶ ನಿರಾಕರಿಸಲಾಗಿತ್ತು. ಸಂಜೆವರೆಗೂ ಅಧಿಕಾರಿಗಳು ಕಾರ್ಖಾನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದು, ಶಾಸಕ ರಮೇಶ್‌ ಜಾರಕಿಹೊಳಿ ದಾಳಿ ವೇಳೆ ಊರಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.

ಸದ್ಯ ರಮೇಶ್‌ ಜಾರಕಿಹೊಳಿ ಪುತ್ರ ಸಂತೋಷ ಜಾರಕಿಹೊಳಿ ಅವರೇ ಕಾರ್ಖಾನೆ ನೋಡಿಕೊಳ್ಳುತ್ತಿದ್ದಾರೆ. ದಾಳಿಗೆ ಸಂಬಂಧಿಸಿ ಕಾರ್ಖಾನೆಯ ವ್ಯವಸ್ಥಾಪಕರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಅಲ್ಲದೆ, ದಾಳಿ ಕುರಿತು ಸ್ಥಳೀಯ ಪೊಲೀಸರಿಗೂ ಯಾವುದೇ ಮಾಹಿತಿ ಇರಲಿಲ್ಲ.

ಏನಿದು ಪ್ರಕರಣ?
ಅಪೆಕ್ಸ್‌ ಬ್ಯಾಂಕ್‌ನಿಂದ ಸಾಲ ಪಡೆಯುವಾಗ ರಮೇಶ್‌ ಜಾರಕಿಹೊಳಿ ಅವರು ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ವಸಂತ್, ಶಂಕರ್ ಎಂಬುವವರು ನಿರ್ದೇಶಕರಾಗಿದ್ದರು. 

ಬ್ಯಾಂಕ್‌ನಿಂದ ಸಾಲ ಪಡೆಯುವ ವೇಳೆ ನಿರ್ದೇಶಕರನ್ನು ಬದಲಿಸುವಂತಿಲ್ಲ ಎಂದು ಷರತ್ತು ಹಾಕಲಾಗಿತ್ತು.ಆದರೂ ನಿರ್ದೇಶಕರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಬೇರೆಯವರನ್ನು ಆ ಹುದ್ದೆಗೆ ನೇಮಿಸಲಾಗಿತ್ತು.

ಈ ಕುರಿತು ಬ್ಯಾಂಕ್‌ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರು ದೂರಿನಲ್ಲಿ ತಿಳಿಸಿದ್ದರು. ಅದರಂತೆ ಆರೋಪಿಗಳ ವಿರುದ್ಧ ರಮೇಶ್ ಜಾರಕಿಹೊಳಿ ಸೇರಿ ಹಲವರ ವಿರುದ್ಧ ಐಪಿಸಿ ಸೆಕ್ಷನ್ 406, 420 ಹಾಗೂ 34ರ ಅಡಿ ಪ್ರಕರಣ ದಾಖಲಾಗಿತ್ತು. 

ರಮೇಶ್‌ ಜಾರಕಿಹೊಳಿ ತಮ್ಮ ವಿರುದ್ಧ ದಾಖಲಾಗಿರುವ ದೂರು ಮತ್ತು ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು. ಈ ಮಧ್ಯೆ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.

Share this article