;Resize=(412,232))
ಭ್ರಷ್ಟಾಚಾರ ಇತಿಹಾಸದ ಪಕ್ಷದಿಂದ ಪ್ರಾಮಾಣಿಕತೆ ಪಾಠ - ಕಾಂಗ್ರೆಸ್ ಕಾಲದಲ್ಲಿಯೂ ಸಾಲು ಸಾಲು ಪತ್ರಿಕೆ ಸೋರಿಕೆ
ಸಿಜೆಪಿ ಪ್ರತಿಭಟನೆಗಳು ದಿನೇ ದಿನೇ ಹೊಸ ಸ್ವರೂಪ ಪಡೆದುಕೊಳ್ಳುತ್ತಿದ್ದು, ದೇಶದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿವೆ. ವ್ಯವಸ್ಥೆಯ ಬಗ್ಗೆ ಕಾಳಜಿ ಇರುವ ಅನೇಕರು, ವಿಶೇಷವಾಗಿ ಯುವಜನತೆ, ನೈಜ ಕಳಕಳಿಯಿಂದ ಈ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬುದು ಅಕ್ಷರಶಃ ಸತ್ಯ. ಆದರೆ, ದುರಂತವೆಂದರೆ ಅವರಲ್ಲಿ ಬಹುತೇಕರು ಅರ್ಧಸತ್ಯ ಮತ್ತು ವ್ಯವಸ್ಥಿತವಾಗಿ ಹರಿಬಿಡಲಾದ ತಪ್ಪು ಮಾಹಿತಿಗಳ ಬಲೆಗೆ ಬಿದ್ದಿದ್ದಾರೆ.
ವಾಸ್ತವದ ಅರಿವಿಗಿಂತ ಭಾವನಾತ್ಮಕ ಪ್ರಚೋದನೆಯೇ ಮೇಲುಗೈ ಸಾಧಿಸುತ್ತಿದೆ. ಗೊಂದಲಮಯ ಮತ್ತು ಸೂಕ್ಷ್ಮ ವಾತಾವರಣದಲ್ಲಿ, ಹೋರಾಟದ ಸಂಪೂರ್ಣ ಲಾಭವನ್ನು ತನ್ನದಾಗಿಸಿಕೊಳ್ಳಲು ಹಾಗೂ ರಾಜಕೀಯ ಮೈಲೇಜ್ ಪಡೆಯಲು ಪ್ರತಿಪಕ್ಷ ಕಾಂಗ್ರೆಸ್ ಬಹಳ ತಡವಾಗಿ, ಆದರೆ ನಾಟಕೀಯವಾಗಿ ಎಂಟ್ರಿ ಕೊಟ್ಟಿದೆ. ಹೋರಾಟದ ಕಾವು ಏರುತ್ತಿದ್ದಂತೆ, ತಾವೇ ಇದರ ರೂವಾರಿಗಳು ಎಂದು ಬಿಂಬಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಮುಗಿಬೀಳುತ್ತಿದ್ದಾರೆ.
ವ್ಯವಸ್ಥಾ ವಿರೋಧಿಗಳು:
ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಾಯಕರ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹೋರಾಟದ ಅಸಲಿ ಬಣ್ಣ ಮತ್ತು ಉದ್ದೇಶ ಬಯಲಾಗುತ್ತದೆ. ಇವರು ಕೇವಲ ಸರ್ಕಾರದ ನೀತಿಗಳ ವಿರೋಧಿಗಳಲ್ಲ, ಬದಲಾಗಿ ಮೂಲಭೂತವಾಗಿ ''ವ್ಯವಸ್ಥಾ ವಿರೋಧಿಗಳು''. ಇವರ ಕಾರ್ಯವೈಖರಿ, ಭಾಷಣಗಳು ಮತ್ತು ಗುಪ್ತ ಉದ್ದೇಶಗಳನ್ನು ನೋಡಿದರೆ ಇವರು ರಾಷ್ಟ್ರವಿರೋಧಿ ಶಕ್ತಿಗಳೇನೋ ಎಂಬ ಅನುಮಾನ ಸಾಮಾನ್ಯ ಜನರಿಗೂ ಕಾಡದಿರದು. ಇಂತಹ ''ವೃತ್ತಿಪರ'' ಹೋರಾಟಗಾರರಿಗೆ ಯಾವುದೇ ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಬಗ್ಗೆ ಅಥವಾ ಸರ್ಕಾರದ ಬಗ್ಗೆ ಒಲವಿಲ್ಲ.
ನಾಳೆ ಇದೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ (!!!), ಇವರು ಅದೇ ಸರ್ಕಾರದ ವಿರುದ್ಧವೂ ಇದೇ ರೀತಿ ಬೀದಿಗಿಳಿಯುತ್ತಾರೆ. ಏಕೆಂದರೆ, ಕತ್ತಲೆಯಲ್ಲಿ ಮತ್ತು ಕೊಳಕಿನಲ್ಲಿಯೇ ಬದುಕುವ ಜಿರಳೆಗಳಂತೆ, ಸದಾ ಅಶಾಂತಿ, ಅರಾಜಕತೆ ಮತ್ತು ಗಲಭೆಯ ವಾತಾವರಣದಲ್ಲಿಯೇ ಬೇಳೆ ಬೇಯಿಸಿಕೊಳ್ಳುವುದು ಇವರ ಮೂಲಭೂತ ಗುಣ. ಇವರ ಈ ನೈಜ ಗುಣವನ್ನು ಅರಿಯದ ಅಥವಾ ಅರಿತೂ ಜಾಣಕುರುಡು ಪ್ರದರ್ಶಿಸುತ್ತಿರುವ ಕಾಂಗ್ರೆಸ್, ಇವರ ಬೆನ್ನೇರಿ ಸವಾರಿ ಮಾಡಲು ಹೊರಟಿರುವುದು ಹಾಸ್ಯಾಸ್ಪದ.
ಕೆಂಬೂತದ ನರ್ತನ:
ಕಾಂಗ್ರೆಸ್ ಪಕ್ಷದ ಇಂದಿನ ಈ ವರ್ತನೆಯನ್ನು ನೋಡಿದರೆ ನಮ್ಮ ಹಳ್ಳಿಗಾಡಿನ ಜನಪ್ರಿಯ ಮತ್ತು ಮಾರ್ಮಿಕ ಗಾದೆಮಾತು ನೆನಪಾಗುತ್ತದೆ. ಅದು, ‘ನವಿಲು ಕುಣೀತೂಂತ ಕೆಂಬೂತ ಪುಕ್ಕ ತೆರೆದುಕೊಂಡಿತಂತೆ’.
ಇಲ್ಲಿ ನೈಜ ಕಾಳಜಿಯಿಂದ, ಆದರೆ ತಪ್ಪು ಮಾಹಿತಿಯಿಂದ ದಾರಿ ತಪ್ಪಿರುವ ಯುವಕರ ಹೋರಾಟದ ಕಿಚ್ಚು ನವಿಲಿನಂತಿದ್ದರೆ, ಅದನ್ನು ನೋಡಿ ತಾನೂ ನೈತಿಕತೆಯ ಹರಿಕಾರ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್ ಕೆಂಬೂತದಂತಿದೆ. ಹೋರಾಟಗಾರರು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ನೋಡಿ, ತಾವೂ ಕೂಡಾ ಸದಾ ಜನರ ಪರವಾಗಿದ್ದೇವೆ ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ನಾಯಕರು ನಕಲಿ ಕಾಳಜಿಯ ಪುಕ್ಕಗಳನ್ನು ಬಿಚ್ಚಿ ಕುಣಿಯಲು ಯತ್ನಿಸುತ್ತಿದ್ದಾರೆ. ಇಲ್ಲಿವರೆಗೆ ಸತತವಾಗಿ ಜನರಿಂದ ತಿರಸ್ಕೃತವಾಗುತ್ತಲೇ ಬಂದವರಿಗೆ, ಈ ಕಾಕ್ರೋಚ್‌ಗಳನ್ನೇ ಏಣಿಯಾಗಿಸಿಕೊಂಡು ಗದ್ದುಗೆ ಏರುವ ಕನಸು. ಆದರೆ, ಎಷ್ಟೇ ಸುಂದರವಾಗಿ ಪುಕ್ಕ ಬಿಚ್ಚಿದರೂ ಕೆಂಬೂತ ಎಂದಿಗೂ ನವಿಲಾಗಲು ಸಾಧ್ಯವಿಲ್ಲ. ಅದೇ ರೀತಿ, ಎಷ್ಟೇ ನಾಟಕ ಮಾಡಿದರೂ ಕಾಂಗ್ರೆಸ್ ತನ್ನ ಮೇಲಿರುವ ಕಪ್ಪು ಚುಕ್ಕೆಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂಬುದನ್ನು ಈ ಪುರಾತನ ಪಕ್ಷ ಮರೆತಂತಿದೆ.
ಕರಾಳ ಇತಿಹಾಸ:
ಇಂದು ಸಿಜೆಪಿ ಪ್ರತಿಭಟನಾಕಾರರ ಬೆನ್ನಿಗೆ ನಿಂತು ಪ್ರಜಾಪ್ರಭುತ್ವ, ಪಾರದರ್ಶಕತೆ ಮತ್ತು ವಾಕ್-ಸ್ವಾತಂತ್ರ್ಯದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಿರುವ ಕಾಂಗ್ರೆಸ್, ತನ್ನದೇ ಆಡಳಿತಾವಧಿಯಲ್ಲಿ ಮಾಡಿದ್ದೇನು ಎಂಬುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ನಡೆದ ಹಗರಣಗಳು ಜಾಗತಿಕ ಮಟ್ಟದಲ್ಲಿ ದೇಶದ ಮಾನ ಹರಾಜು ಹಾಕಿದ್ದವು. 2ಜಿ ಸ್ಪೆಕ್ಟ್ರಮ್ ಹಗರಣ, ಕಲ್ಲಿದ್ದಲು ಹಗರಣ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಹಗರಣಗಳು ದೇಶದ ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ಕನ್ನ ಹಾಕಿದ್ದವು. ಇಂತಹ ಭ್ರಷ್ಟ ಇತಿಹಾಸವುಳ್ಳ ಪಕ್ಷ ಇಂದು ಪ್ರಾಮಾಣಿಕತೆಯ ಪಾಠ ಮಾಡುತ್ತಿದೆ.
2011ರಲ್ಲಿ ಭ್ರಷ್ಟಾಚಾರದ ವಿರುದ್ಧ ದೆಹಲಿಯ ರಾಮಲೀಲಾ ಮೈದಾನದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಬಾಬಾ ರಾಮದೇವ್ ಮತ್ತು ಅಣ್ಣಾ ಹಜಾರೆ ಬೆಂಬಲಿಗರ ಮೇಲೆ, ಕತ್ತಲಲ್ಲಿ ಮಲಗಿದ್ದವರ ಮೇಲೆ ಮಧ್ಯರಾತ್ರಿ ಪೊಲೀಸರನ್ನು ಛೂಬಿಟ್ಟು ನಡೆಸಿದ ಭೀಕರ ಲಾಠಿಚಾರ್ಜ್ ಅನ್ನು ದೇಶದ ಜನತೆ ಇನ್ನೂ ಮರೆತಿಲ್ಲ. ಅದು ಪ್ರಜಾಪ್ರಭುತ್ವದ ಮೇಲಿನ ಅತ್ಯಂತ ಕರಾಳ ಮತ್ತು ಹೇಡಿ ದಾಳಿಯಾಗಿತ್ತು.
ಇಂದು ವಿದ್ಯಾರ್ಥಿಗಳು ಮತ್ತು ಯುವಜನರ ಭವಿಷ್ಯದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಇದೇ ಕಾಂಗ್ರೆಸ್, ತನ್ನ ಆಡಳಿತಾವಧಿಯಲ್ಲಿ ಯುವಜನರ ಬದುಕಿನ ಜೊತೆ ಕ್ರೂರವಾಗಿ ಚೆಲ್ಲಾಟವಾಡಿತ್ತು. ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡಿದ ಇತಿಹಾಸ ಇವರಿಗಿದೆ.
ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆಗಳ ಸರಮಾಲೆಯೇ ಇದಕ್ಕೆ ಸಾಕ್ಷಿ. ದೆಹಲಿಯಲ್ಲಿ ಶೀಲಾ ದೀಕ್ಷಿತ್ ಸರ್ಕಾರವಿದ್ದಾಗ, 2006ರಲ್ಲಿ ಸಿಬಿಎಸ್‌ಇ 12ನೇ ತರಗತಿಯ ಲೆಕ್ಕಶಾಸ್ತ್ರ ಪತ್ರಿಕೆ ಹಾಗೂ 2012ರಲ್ಲಿ ದೆಹಲಿಯ ಏಮ್ಸ್ ಪ್ರವೇಶ ಪರೀಕ್ಷೆಯ ಪತ್ರಿಕೆಯೂ ಸೋರಿಕೆಯಾಗಿ ಇವರ ಆಡಳಿತ ವೈಫಲ್ಯವನ್ನು ಜಗಜ್ಜಾಹೀರು ಮಾಡಿತ್ತು.
2007ರಲ್ಲಿ ರಾಷ್ಟ್ರಮಟ್ಟದ ಎಐಇಇಇ ಹಾಗೂ 2008ರಲ್ಲಿ ಪಿಎಂಟಿ ಪರೀಕ್ಷಾ ಪತ್ರಿಕೆಗಳು ಸೋರಿಕೆಯಾಗಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಕಂಗೆಡಿಸಿದ್ದವು. 2011ರಲ್ಲಿ ಹರಿಯಾಣದಲ್ಲಿ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಯ ಪತ್ರಿಕೆಗಳು ಬಹಿರಂಗವಾಗಿದ್ದವು.
2013ರ ವರ್ಷವಂತೂ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಪರ್ವವೇ ಆಗಿತ್ತು. ಮಹಾರಾಷ್ಟ್ರದ ಪೃಥ್ವಿರಾಜ್ ಚವಾಣ್ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಎಚ್‌ಎಸ್‌ಸಿ ಪರೀಕ್ಷೆ ಹಾಗೂ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರವಿದ್ದಾಗ ರಾಜಸ್ಥಾನ ವಿಶ್ವವಿದ್ಯಾಲಯ ಮತ್ತು ಪ್ರತಿಷ್ಠಿತ ಆರ್‌ಪಿಎಸ್‌ಸಿ ಪರೀಕ್ಷಾ ಪತ್ರಿಕೆಗಳು ಲೀಕ್ ಆಗಿದ್ದವು.
2014ರಲ್ಲಿ ಯುಪಿಎ ಆಡಳಿತದ ಕೊನೆಯ ದಿನಗಳಲ್ಲಿ ಸಿಬಿಎಸ್‌ಇ 10ನೇ ತರಗತಿಯ ಗಣಿತ ಹಾಗೂ 12ನೇ ತರಗತಿಯ ಅರ್ಥಶಾಸ್ತ್ರ ಪತ್ರಿಕೆಗಳು ಸೋರಿಕೆಯಾಗಿದ್ದವು. ಇನ್ನು, ನಮ್ಮ ರಾಜ್ಯ ಕರ್ನಾಟಕದಲ್ಲೂ 2016ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪತ್ರಿಕೆ ಸೋರಿಕೆಯಾಗಿ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಾ ಬೀದಿಗಿಳಿದು ಪ್ರತಿಭಟಿಸಿದ್ದು ಇನ್ನೂ ಜನಮಾನಸದಲ್ಲಿ ಹಸಿರಾಗಿದೆ.
ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ನಡೆದ ''ರೀಟ್'' ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ, ಲಕ್ಷಾಂತರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯವನ್ನು ಕಸಿದುಕೊಂಡಿತ್ತು. ಇದು ಕೇವಲ ಒಂದು ಆಕಸ್ಮಿಕವಾಗಿರಲಿಲ್ಲ, ಇವರ ಆಡಳಿತದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯೆಂಬುದು ಒಂದು ವ್ಯವಸ್ಥಿತ ದಂಧೆಯಾಗಿ ಮಾರ್ಪಟ್ಟಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, ಸಿಜೆಪಿ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಇಂದಿನ ಪಾಲ್ಗೊಳ್ಳುವಿಕೆ ಕೇವಲ ಒಂದು ರಾಜಕೀಯ ಹತಾಶೆಯ ಪ್ರತೀಕ. ತಾವೇ ಸೃಷ್ಟಿಸಿದ ಭ್ರಷ್ಟಾಚಾರ, ದೌರ್ಜನ್ಯ ಮತ್ತು ಅರಾಜಕತೆಯ ಇತಿಹಾಸವನ್ನು ಮುಚ್ಚಿಟ್ಟುಕೊಂಡು, ಬೇರೊಬ್ಬರ ಹೋರಾಟದ ವೇದಿಕೆಯ ಮೂಲಕ ''ನೈತಿಕತೆಯ'' ಕಿರೀಟ ತೊಡಲು ಕಾಂಗ್ರೆಸ್ ಹವಣಿಸುತ್ತಿದೆ.
ಆದರೆ, ಭಾರತದ ಪ್ರಜ್ಞಾವಂತ ಜನತೆಗೆ ನವಿಲು ಯಾವುದು ಮತ್ತು ಕೆಂಬೂತ ಯಾವುದು ಎಂಬ ಸ್ಪಷ್ಟ ಅರಿವಿದೆ. ವ್ಯವಸ್ಥಾ ವಿರೋಧಿ ಪುಂಡರೊಡನೆ ಕೈಜೋಡಿಸಿ, ದೇಶದ ಅಶಾಂತಿಯ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳಲು ಬಂದಿರುವ ಕಾಂಗ್ರೆಸ್‌ನ ಈ ಅವಕಾಶವಾದಿ ರಾಜಕಾರಣ, ಮುಂದೊಂದು ದಿನ ಅದೇ ಪಕ್ಷಕ್ಕೆ ದೊಡ್ಡ ತಿರುಗುಬಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೋರಾಟದ ನೈಜ ಕಾಳಜಿಗೂ ಮತ್ತು ಈ ಪಕ್ಷದ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಂತ್ರಕ್ಕೂ ಇರುವ ಅಜಗಜಾಂತರ ವ್ಯತ್ಯಾಸವನ್ನು ಕಾಲವೇ ಬಯಲು ಮಾಡಲಿದೆ.