ಬಾಗಲಕೋಟೆ: ಮತ್ತೆ ಚರಂತಿಮಠ, ಮೇಟಿ ಕುಟುಂಬ ಮಧ್ಯೆ ಫೈಟ್‌

Published : Mar 16, 2026, 10:34 AM IST
Election

ಸಾರಾಂಶ

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎಚ್.ವೈ ಮೇಟಿ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷವಾದ ಬಿಜೆಪಿ ಮಧ್ಯೆ ಮತ್ತೊಮ್ಮೆ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ.

  ಬಾಗಲಕೋಟೆ :  ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎಚ್.ವೈ ಮೇಟಿ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷವಾದ ಬಿಜೆಪಿ ಮಧ್ಯೆ ಮತ್ತೊಮ್ಮೆ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ.

2023ರ ಮೇ ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ನಿಂದ ಸ್ಪರ್ಧಿಸಿ ಬಿಜೆಪಿಯ ಡಾ.ವೀರಣ್ಣ ಚರಂತಿಮಠ ಅವರನ್ನು ಮಣಿಸಿ ಆಯ್ಕೆಯಾಗಿದ್ದ ಎಚ್.ವೈ.ಮೇಟಿ ಅವರು 2025ರ ನವೆಂಬರ್ 4ರಂದು ನಿಧನರಾದ ಹಿನ್ನೆಲೆ ಉಪಚುನಾವಣೆ ಎದುರಾಗಿದ್ದು, ಪ್ರಮುಖ ಪಕ್ಷಗಳ ನಡುವಿನ ರಾಜಕೀಯ ಕದನಕ್ಕೆ ಮತ್ತೊಮ್ಮೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ವೇದಿಕೆಯಾಗಲಿದೆ.

ಮೇಟಿ ಕುಟುಂಬಕ್ಕೆ ಕೈ ಟಿಕೆಟ್:

ಎಚ್.ವೈ.ಮೇಟಿ ಅವರ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಟಿಕೆಟ್ ಖಚಿತ. ಆದರೆ ಹಿರಿಯ ಪುತ್ರ ಮಲ್ಲಿಕಾರ್ಜುನ, ಮತ್ತೊಬ್ಬ ಪುತ್ರ ಉಮೇಶ್, ಪುತ್ರಿ, ಜಿಪಂ ಮಾಜಿ ಅಧ್ಯಕ್ಷರಾದ ಬಾಯಕ್ಕ ಮೇಟಿ ನಡುವೆ ಪೈಪೋಟಿ ಇದೆ. ಮೇಟಿ ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ ಮೇಲೆ ಬಗ್ಗೆ ಪಕ್ಷ ಒಲವು ಹೊಂದಿದ್ದು, ಈ ಬಗ್ಗೆ ಸಮೀಕ್ಷೆ ನಡೆಸಿ ಅಂತಿಮ ನಿರ್ಧಾರ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಮೇಟಿ ಅವರಿಂದ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದ ಕ್ಷೇತ್ರ:

ಜನತಾ ಪರಿವಾರದಿಂದ ಸಿದ್ದರಾಮಯ್ಯ ಮೂಲಕ ಕಾಂಗ್ರೆಸ್ಸಿಗೆ ಪರಿಚಯಿಸಿಕೊಂಡ ಎಚ್.ವೈ.ಮೇಟಿ ಅವರು ಕ್ಷೇತ್ರ ಪುನರ್ವಿಂಗಡಣೆ ಕಾರಣದಿಂದ ಗುಳೇದಗುಡ್ಡ ಬಿಟ್ಟು 2008ರ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರಕ್ಕೆ ವಲಸೆ ಬಂದು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲುಕಂಡರು. ಆದರೆ, 2013ರ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಕ್ಷೇತ್ರವನ್ನು ಮರಳಿ ಕಾಂಗ್ರೆಸ್‌ ತೆಕ್ಕೆಗೆ ತೆಗೆದುಕೊಂಡರು. 2018ರಲ್ಲಿ ಮತ್ತೆ ಸೋಲು ಕಂಡ ಎಚ್.ವೈ.ಮೇಟಿಯವರು 2023ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.

ಮತ್ತೆ ಚರಂತಿಮಠ, ಮೇಟಿ ಕುಟುಂಬ ಹಣಾಹಣಿ?

ಈಗ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಇದ್ದು, ಕಳೆದಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡ ಮಾಜಿ ಶಾಸಕ ವೀರಣ್ಣ ಚರಂತಿಮಠ ಬಿಜೆಪಿ ಅಭ್ಯರ್ಥಿ ಆಗಲಿದ್ದು, ಕಾಂಗ್ರೆಸ್ ನಿಂದ ಎಚ್.ವೈ. ಮೇಟಿ ಅವರ ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಹೀಗಾಗಿ ಸಾಂಪ್ರದಾಯಿಕ ಎದುರಾಳಿಗಳ ಮಧ್ಯೆ ತುರುಸಿನ ಸ್ಪರ್ಧೆ ನಡೆಯಲಿದೆ.

ಕ್ಷೇತ್ರದ ಹಿನ್ನೋಟ:

ಸ್ವಾತಂತ್ರ್ಯಾ ನಂತರ ಬಹುತೇಕ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಹೊಂದಿತ್ತು. ಆದರೆ 1983ರಲ್ಲಿ ಜನತಾ ಪಕ್ಷದ ಪಾಲಾದ ಬಳಿಕ ಕ್ಷೇತ್ರದಲ್ಲಿ ಕೈ ಹಿಡಿತ ಸಡಿಲಗೊಂಡಿತು. ಬಳಿಕ ಜನತಾದಳ, ಬಿಜೆಪಿ ಪಕ್ಷಗಳು ಪ್ರಾಬಲ್ಯ ಸಾಧಿಸಿದವು.

1983ರಿಂದ 94ರವರೆಗೆ ಜನತಾ ಪರಿವಾರದ ಜಿ.ವಿ.ಮಂಟೂರ, ಅಜಯಕುಮಾರ ಸರನಾಯಕ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್‌ ಭದ್ರಕೋಟೆಯ ಹಣೆಪಟ್ಟಿ ಕಳಚಿದ್ದರು. ಆದರೆ 1997ರಲ್ಲಿ ಜನತಾ ದಳದಲ್ಲಿ ಉಂಟಾದ ಕಲಹದಿಂದ ರಾಮಕೃಷ್ಣ ಹೆಗಡೆ ಅವರನ್ನು ಪಕ್ಷದಿಂದ ಹೊರಹಾಕಿದ್ದರಿಂದ ಸಚಿವರಾಗಿದ್ದ ಜನತಾ ಪರಿವಾರದ ಅಜಯಕುಮಾರ ಸರನಾಯಕ ಅವರು ಹೆಗಡೆಯವರ ಜೊತೆಗೂಡಿ ಆರಂಭಿಸಿದ ರಾಷ್ಟ್ರೀಯ ನವನಿರ್ಮಾಣ ವೇದಿಕೆ ಮೂಲಕ ಲೋಕಸಭೆಗೆ ಸ್ಪರ್ಧಿಸಲು ಶಾಸಕ ಸ್ಥಾನ ತ್ಯಜಿಸಿದರು. ಆಗ ಎದುರಾದ ಉಪಚುನಾವಣೆಯಲ್ಲಿ ಬಿಜೆಪಿಯ ಪಿ.ಎಚ್.ಪೂಜಾರ ಅವರು ಸರನಾಯಕರ ಬೆಂಬಲದೊಂದಿಗೆ ಶಾಸಕರಾಗುವ ಮೂಲಕ ಬಿಜೆಪಿಯ ಖಾತೆ ತೆರೆದರು. 1999ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಯಿಂದ ಪೂಜಾರ ಮರು ಆಯ್ಕೆಯಾದರು.

2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರು ಆಯ್ಕೆಯಾಗುವ ಮೂಲಕ ಬಾಗಲಕೋಟೆ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿ ಬದಲಾಯಿತು.

ಕಳೆದ ಬಾರಿಯ ಫಲಿತಾಂಶ:

ಬಾಗಲಕೋಟೆ ಮತಕ್ಷೇತ್ರ: (ಕಾಂಗ್ರೆಸ್ ಗೆಲುವು)

ಎಚ್.ವೈ. ಮೇಟಿ ಪಡೆದ ಮತ -78494

ವೀರಣ್ಣ ಚರಂತಿಮಠ (ಬಿಜೆಪಿ) ಪಡೆದ ಮತ-72157

ಗೆಲುವಿನ ಅಂತರ-6337

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಾನಂತೂ ಜಿಬಿಎ ಚುನಾವಣೆ ಮಾಡುವವನೇ: ಡಿಕೆಶಿ ಶಪಥ
ಪಂಚರಾಜ್ಯ ಚುನಾವಣೆ ಘೋ಼ಷಣೆ