;Resize=(412,232))
ಸುವರ್ಣ ವಿಧಾನಸಭೆ : ಮುಖ್ಯಮಂತ್ರಿ ಬದಲಾವಣೆ ವಿಷಯ ಬೆಳಗಾವಿ ಅಧಿವೇಶನದಲ್ಲೂ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ‘ಇಂದು ನಾನೇ ಮುಖ್ಯಮಂತ್ರಿ. ಮುಂದೆಯೂ ನಾನೇ ಮುಖ್ಯಮಂತ್ರಿ. ನಮ್ಮಲ್ಲಿ ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಐದು ವರ್ಷಕ್ಕೆ ನಮಗೆ ಜನ ಆಶೀರ್ವಾದ ಮಾಡಿದ್ದಾರೆ’ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರತಿಪಕ್ಷಗಳು ನಾಯಕತ್ವ ಬದಲಾವಣೆಯಂಥ ವಿಚಾರ ಪ್ರಸ್ತಾಪಿಸಿ ಉರಿಯುವ ಬೆಂಕಿಗೆ ಉಪ್ಪು ಹಾಕುವ ಕೆಲಸ ಮಾಡಬೇಡಿ ಎಂದು ಅಸಮಾಧಾನ ಹೊರಹಾಕಿದ್ದಾರೆ.
ವಿಧಾನಸಭೆಯ ಶೂನ್ಯವೇಳೆಯಲ್ಲಿ ಮಂಗಳವಾರ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಂಗನಾಥ್ ಅವರು ತಮ್ಮ ಕ್ಷೇತ್ರಕ್ಕೆ ಆಗುತ್ತಿರುವ ಅನುದಾನ ತಾರತಮ್ಯ ಬಗ್ಗೆ ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಅದಕ್ಕೆ ಉತ್ತರ ನೀಡಿದರು. ಈ ವೇಳೆ ಎದ್ದು ನಿಂತ ವಿಪಕ್ಷ ನಾಯಕ ಅಶೋಕ್, ಈ ತಾರತಮ್ಯ ಉದ್ದೇಶಪೂರ್ವಕವೇ ಎಂದು ಕೆಣಕಿದರು. ರಂಗನಾಥ್ ಅವರು ಡಿಕೆಶಿ ಬಣದವರಾದ ಹಿನ್ನೆಲೆಯಲ್ಲಿ ಅಶೋಕ್ ಈ ರೀತಿ ಕೇಳಿದರು. ಅದಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ, ಉರಿಯುವ ಬೆಂಕಿಗೆ ಉಪ್ಪು ಸುರಿಯಬೇಡ ಎಂದು ಹೇಳಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಅಶೋಕ್, ಹಾಗಿದ್ದರೆ ಬೆಂಕಿ ಇದೆ. ಡಿಕೆಶಿ ಸಿಎಂ ಆಗಲಿ ಎಂದು ರಂಗನಾಥ್ ಪೂಜೆಗಳನ್ನು ಮಾಡುತ್ತಿದ್ದಾರೆ ಎಂದು ಕುಟುಕಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾಯಕತ್ವ ಬದಲಾವಣೆ ಸೇರಿ ಕಾಂಗ್ರೆಸ್‌ನ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ ವಿರೋಧ ಪಕ್ಷಗಳು ಉರಿಯುವ ಬೆಂಕಿಗೆ ಉಪ್ಪು ಹಾಕಬಾರದು. ನಮ್ಮಲ್ಲಿ ಎಲ್ಲರೂ ಸುಮ್ಮನಿದ್ದಾರೆ. ಆದರೆ ವಿರೋಧ ಪಕ್ಷಗಳು ಮಾತ್ರ ಸುಮ್ಮನಿರುತ್ತಿಲ್ಲ. ಪ್ರತಿಪಕ್ಷಗಳಿಗೆ ಉರಿಯುವ ಬೆಂಕಿಗೆ ಉಪ್ಪು ಹಾಕುವುದೇ ಕೆಲಸ ಎಂದು ತಿರುಗೇಟು ನೀಡಿದರು.
ಆಗ ಅಶೋಕ್, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರು ಅಸ್ಥಿರತೆ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ಕಳವಳಕಾರಿ ಎಂದರು.
ಆಡಳಿತ ಪಕ್ಷದವರೇ ಮೌನವಾಗಿರುವಾಗ ಪ್ರತಿಪಕ್ಷದವರು ಸುಮ್ಮನಿರಬೇಕು ಎಂದು ಸಿದ್ದರಾಮಯ್ಯ ಹೇಳಿದಾಗ, ನಿಮ್ಮ ಪಕ್ಷದ ಶಾಸಕರೇ ಸುಮ್ಮನಿಲ್ಲವಲ್ಲ! ನಿತ್ಯ ಪೂಜೆ-ಪುನಸ್ಕಾರ ಮಾಡುತ್ತಿದ್ದಾರೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ಅವರು ಬಯಸುತ್ತಿದ್ದಾರೆ. ನಾನು ಪ್ರತಿದಿನ ಪತ್ರಿಕೆಗಳಲ್ಲಿ ಅದನ್ನು ಓದುತ್ತಿದ್ದೇನೆ ಎಂದು ಸಿದ್ದರಾಮಯ್ಯ ಕಾಲೆಳೆದರು ಅಶೋಕ್.
ಈ ವೇಳೆ ನಿಮ್ಮ ಪ್ರಚೋದನೆ, ಕಿತಾಪತಿಗೆ ನಾವು ವಿಚಲಿತರಾಗುವುದಿಲ್ಲ. 140 ಶಾಸಕರೂ ಒಗ್ಗಟ್ಟಾಗಿದ್ದಾರೆ. ನೀವು ಹುಳಿ ಹಿಂಡುವ ಕೆಲಸ ಮಾಡಬೇಡಿ. 5 ವರ್ಷಕ್ಕೆ ಜನ ನಮಗೆ ಆಶೀರ್ವಾದ ಮಾಡಿದ್ದು, ಅದರಂತೆ ಕೆಲಸ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಅಶೋಕ್ ಸೇರಿ ಪ್ರತಿಪಕ್ಷದ ಸದಸ್ಯರು, ಹಾಗಾದರೆ ನೀವೇ 5 ವರ್ಷ ಸಿಎಂ ಆಗಿ ಇರುತ್ತೀರಾ ಎಂದು ಕಿಚಾಯಿಸಿದರು.
ಅದಕ್ಕೆ ಸಿದ್ದರಾಮಯ್ಯ, ಇಂದು ನಾನೇ ಮುಖ್ಯಮಂತ್ರಿ. ಮುಂದೆಯೂ ನಾನೇ ಮುಖ್ಯಮಂತ್ರಿ. ನಮ್ಮಲ್ಲಿ ಹೈಕಮಾಂಡ್ ಇದ್ದು, ಅವರು ಎಲ್ಲವನ್ನೂ ನಿರ್ಧಾರ ಮಾಡುತ್ತಾರೆ. 5 ವರ್ಷ ಕೆಲಸ ಮಾಡಲು ಜನ ನಮಗೆ ಅಧಿಕಾರ ನೀಡಿದ್ದಾರೆ. ನಮ್ಮ ಬಗ್ಗೆ ಹೇಳುವ ಬಿಜೆಪಿಯವರೇ ಈ ಹಿಂದೆ ಮೂರು ಸಿಎಂ ಬದಲಾವಣೆ ಮಾಡಿದ್ದರು ಎಂದು ತಿರುಗೇಟು ನೀಡಿದರು.
ಬಿಜೆಪಿ ಏನೇ ಮಾಡಿದರೂ 2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಅದರಂತೆ ಎಲ್ಲರೂ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಮಾತ್ರ ಈಗಿರುವ ಸ್ಥಾನಕ್ಕಿಂತ ಕಡಿಮೆ ಸ್ಥಾನ ಗೆಲ್ಲುತ್ತೆ. ಅವರನ್ನು ಮನೆಯಲ್ಲೇ ಕೂರಿಸುತ್ತಾರೆ. ನೀವು (ಬಿಜೆಪಿ) ಯಾವತ್ತೂ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲ ಮೂಲಕವೇ ಅಧಿಕಾರಕ್ಕೆ ಬಂದಿದ್ದು. ಮುಂದೆಯೂ ನೀವು ಸ್ವಂತ ಬಲದಿಂದ ಅಧಿಕಾರ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.
ಸಮ್ಮಿಶ್ರ ಸರ್ಕಾರದ ವಿಚಾರವೂ ಭಾರೀ ಚರ್ಚೆಗೆ ಬಂತು. ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬಂದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ವಿಪಕ್ಷ ನಾಯಕ ಆರ್.ಅಶೋಕ್ ಎದ್ದು ನಿಂತು, ಅದಕ್ಕಾಗಿಯೇ 2018ರಲ್ಲಿ ನೀವು ಜೆಡಿಎಸ್ ಮುಂದೆ ಕೈ ಕಟ್ಟಿ ನಿಂತಿದ್ದೀರಲ್ಲ ಎಂದು ಕಿಚಾಯಿಸಿದರು.
ಅದಕ್ಕೆ ಸಿದ್ದರಾಮಯ್ಯ, ನೀವು ಅಷ್ಟೇ 2006ರಲ್ಲಿ ಅವರ ಮುಂದೆ ನಿಂತಿದ್ದೀರಿ. ಈಗಲೂ ಅವರೊಂದಿಗೆ ಇದ್ದೀರಿ ಎಂದು ತಿರುಗೇಟು ನೀಡಿದರು.
ಜೆಡಿಎಸ್ ಸಖ್ಯದ ಕುರಿತು ಇಷ್ಟೆಲ್ಲ ಚರ್ಚೆ ನಡೆಯುತ್ತಿದ್ದರೂ ಜೆಡಿಎಸ್‌ನ ಎಚ್.ಡಿ.ರೇವಣ್ಣ ಮತ್ತು ಎಂ.ಟಿ.ಕೃಷ್ಣ ಹೊರತುಪಡಿಸಿ ಬೇರ್‍ಯಾವುದೇ ಶಾಸಕರೂ ಇರಲಿಲ್ಲ. ಅವರಿಬ್ಬರು ಚರ್ಚೆಯಲ್ಲಿ ಭಾಗವಹಿಸದೆ ಪ್ರೇಕ್ಷಕರಾಗಿ ನೋಡುತ್ತಿದ್ದರು.
ಸಿದ್ದರಾಮಯ್ಯ ತಂತ್ರಗಾರಿಕೆ ಪುಸ್ತಕ ಬರೆಯಬೇಕೆಂದಿದ್ದೇನೆ: ಆರ್.ಅಶೋಕ್
ಚಾಣಕ್ಯ ತಂತ್ರದ ರೀತಿಯಲ್ಲಿ ‘ಸಿದ್ದರಾಮಯ್ಯ ತಂತ್ರಗಾರಿಕೆ’ ಎಂದು ಪುಸ್ತಕ ಬರೆಯಬೇಕೆಂದಿದ್ದೇನೆ. ಅವರ ತಂತ್ರಗಾರಿಕೆ ಕೇವಲ ಕೃತಿಯಲ್ಲಲ್ಲ, ಮಾತುಗಾರಿಕೆಯಲ್ಲೂ ಇದೆ. ಅದನ್ನು ಪುಸ್ತಕ ರೂಪದಲ್ಲಿ ತರುತ್ತೇನೆ ಎಂದು ಚರ್ಚೆ ವೇಳೆ ಆರ್. ಅಶೋಕ್ ಹೇಳಿದರು.
ಏನಿದು ಚರ್ಚೆ?
- ಕುಣಿಗಲ್ ಕ್ಷೇತ್ರಕ್ಕೆ ಅನುದಾನ ತಾರತಮ್ಯವಾಗುತ್ತಿದೆ ಎಂದ ಡಿಕೆಶಿ ಆಪ್ತ ಶಾಸಕ ರಂಗನಾಥ್
- ಆ ಬಗ್ಗೆ ಗಮನಹರಿಸುತ್ತೇವೆ ಎಂದು ಸದನದಲ್ಲಿ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
- ಈ ತಾರತಮ್ಯ ‘ಉದ್ದೇಶಪೂರ್ವಕವೇ’ ಎಂದು ಕೇಳಿದ ಪ್ರತಿಪಕ್ಷ ನಾಯಕ ಆರ್. ಅಶೋಕ್
- ಉರಿಯುವ ಬೆಂಕಿಗೆ ಉಪ್ಪು ಹಾಕಬೇಡ ಎಂದ ಸಿದ್ದು. ಬೆಂಕಿ ಒಪ್ಪಿದಿರಿ ಎಂದು ಅಶೋಕ್ ಲೇವಡಿ
- ಐದು ವರ್ಷಕ್ಕೆ ಜನಾದೇಶ ಸಿಕ್ಕಿದೆ. ಸದ್ಯ ನಾನು ಸಿಎಂ. ಮುಂದೆಯೂ ಸಿಎಂ ಎಂದ ಸಿದ್ದು
ಜತೆಗೆ ಡಾ.ಪರಮೇಶ್ವರ್ ಪ್ರತಿ ಹಂತದಲ್ಲೂ ಸಿದ್ದರಾಮಯ್ಯ ಜತೆಗಿದ್ದಾರೆ, ಅವಕಾಶ ಸಿಕ್ಕರೆ ಪರಮೇಶ್ವರ್ ಕಡೆಗೂ ಸಿದ್ದರಾಮಯ್ಯ ಅವರು ನೋಡಬೇಕು ಎಂದು ಕಾಲೆಳೆದರು.
ಕನಕದಾಸರಿಗೆ ಹೋಲಿಸಬೇಡಿ: ಸಿಎಂ
ಸಿದ್ದರಾಮಯ್ಯ ಅವರು ಚರ್ಚೆ ವೇಳೆ 5 ವರ್ಷ ನಾವು ಅಧಿಕಾರ ಮಾಡುತ್ತೇವೆ ಎಂದು ಹೇಳಿದ್ದಕ್ಕೆ ವ್ಯಂಗ್ಯವಾಡಿದ ಬಿಜೆಪಿಯ ಸುರೇಶ್ ಕುಮಾರ್, ಹಿಂದೆ ‘ನಾನು’ ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ಈಗ ‘ನಾವು’ ಎನ್ನುತ್ತಿದ್ದಾರೆ. ಕನಕದಾಸರು ಹೇಳಿದಂತೆ ನಾನು ಹೋದರೆ, ನಾನು ಹೋದೇನು ಎನ್ನುವಂತಿದೆ ಎಂದರು. ಅದಕ್ಕೆ ಸಿದ್ದರಾಮಯ್ಯ, ಕನಕದಾಸರೊಂದಿಗೆ ನನ್ನ ಹೋಲಿಕೆ ಸರಿಯಲ್ಲ. ಹೋಲಿಕೆ ಮಾಡಬೇಡಿ ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.