;Resize=(412,232))
ಸುವರ್ಣ ವಿಧಾನ ಪರಿಷತ್ತು : ಬೆಂಗಳೂರು ವಿಶ್ವವಿದ್ಯಾಲಯದ ಎಡವಟ್ಟಿನಿಂದ ವಿವಿಧ ಸಂಯೋಜಿತ ಕಾಲೇಜುಗಳ 400 ಎಂ.ಕಾಂ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವ ಕುರಿತು ‘ಕನ್ನಡಪ್ರಭ’ ಪ್ರಕಟಿಸಿದ್ದ ವಿಶೇಷ ವರದಿಯು ಮಂಗಳವಾರ ಸದನದಲ್ಲಿ ಪ್ರತಿಧ್ವನಿಸಿತು. ವಿಶ್ವವಿದ್ಯಾಲಯದ ತಪ್ಪಿಂದ ಫೇಲಾಗಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂಬ ಆಗ್ರಹ ವ್ಯಕ್ತವಾಯಿತು.
ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಬೆಂಗಳೂರು ವಿವಿಯು ಯುಯುಸಿಎಂಎಸ್ ತಂತ್ರಾಂಶದಲ್ಲಿ ಎಂ.ಕಾಂ ವಿದ್ಯಾರ್ಥಿಗಳ ಅಂಕಗಳನ್ನು ಅಲ್‌ಲೋಡ್ ಮಾಡುವಾಗ ಡೆಸರ್ಟೇಷನ್ ಮತ್ತು ವೈವಾ ಕುರಿತು ಫಲಿತಾಂಶ ಅಂಕಗಳನ್ನು ತಪ್ಪಾಗಿ ಅಪ್‌ಲೋಡ್ ಮಾಡಿರುವುದರಿಂದ ವಿವಿಧ ಸಂಯೋಜಿತ ಕಾಲೇಜುಗಳು ಹಾಗೂ ಸ್ವತಃ ವಿವಿಯ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ನಾಡಿದ 400 ಎಂ.ಕಾಂ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ವಿಶ್ವವಿದ್ಯಾಲಯ ಮಾಡಿರುವ ತಪ್ಪಿಗೆ ವಿದ್ಯಾರ್ಥಿಗಳ ಅನುತ್ತೀರ್ಣದ ಆತಂಕ ಎದುರಿಸುತ್ತಿದ್ದಾರೆ ಎಂದರು.
ವಿವಿಯ ಎಡವಟ್ಟಿಗೆ ವಿದ್ಯಾರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಡಿ.13ರಂದು ವಿಶೇಷ ವರದಿ ಪ್ರಕಟವಾಗಿದೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಆ ಎಲ್ಲಾ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಇದಕ್ಕೆ, ಸಭಾನಾಯಕ ಎನ್.ಎಸ್. ಬೋಸರಾಜು ಅವರು ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಕೊಡಿಸುವ ಭರವಸೆ ನೀಡಿದರು.