ಒಂದು ತಿಂಗಳೊಳಗೆ ರಸ್ತೆ ಗುಂಡಿ ಮುಚ್ಚಿ : ಎಂಜಿನಿಯರ್‌ಗಳಿಗೆ ಸಿಎಂ ತೀವ್ರ ತರಾಟೆ

KannadaprabhaNewsNetwork |  
Published : Sep 21, 2025, 02:00 AM IST
CM | Kannada Prabha

ಸಾರಾಂಶ

 ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಂದು ತಿಂಗಳೊಳಗೆ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡದಿದ್ದರೆ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

 ಬೆಂಗಳೂರು :  ನಗರದ ರಸ್ತೆ ಗುಂಡಿ ಸಮಸ್ಯೆ ಹೆಚ್ಚಳದ ಕುರಿತು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಂದು ತಿಂಗಳೊಳಗೆ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡದಿದ್ದರೆ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನಗರ ರಸ್ತೆಗಳ ಸುಧಾರಣೆ ಹಾಗೂ ಸಂಚಾರ ವ್ಯವಸ್ಥೆ ಕುರಿತು ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಸಿದ್ದರಾಮಯ್ಯ, ರಸ್ತೆ ಗುಂಡಿ ಸಮಸ್ಯೆ ಹೆಚ್ಚಳಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯುದ್ದಕ್ಕೂ ವಾರ್ಡ್‌ ಎಂಜಿನಿಯರ್‌, 5 ಪಾಲಿಕೆಗಳ ಮುಖ್ಯ ಎಂಜಿನಿಯರ್‌ ಸೇರಿದಂತೆ ಅಧಿಕಾರಿಗಳ ವಿರುದ್ಧ ಗರಂ ಆದರು.

ರಸ್ತೆ ಗುಂಡಿಗಳಿಂದ ಜನರು ಹೈರಾಣಾಗಿದ್ದು, ಜನರ ಸಂಕಷ್ಟ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ. ಸಮಸ್ಯೆಗೆ ತುರ್ತು ಕ್ರಮ ತೆಗೆದುಕೊಳ್ಳಲು ನಿರ್ಲಕ್ಷ್ಯವಹಿಸುತ್ತಿರುವುದೇಕೆ? ವಾರ್ಡ್‌ನ ಎಂಜಿನಿಯರ್‌ಗಳು ಮತ್ತು ಮುಖ್ಯ ಎಂಜಿನಿಯರ್‌ಗಳು ಏನು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಜತೆಗೆ ಈಗಾಗಲೇ ಮುಚ್ಚಿರುವ ರಸ್ತೆ ಗುಂಡಿ ಕಾಮಗಾರಿಯೂ ಗುಣಮಟ್ಟದಿಂದ ಕೂಡಿಲ್ಲ. ನಿಮ್ಮ ನಿರ್ಲಕ್ಷ್ಯದಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ತಿಂಗಳ ಗಡುವು, ಇಲ್ಲದಿದ್ದರೆ ಕ್ರಮ:

ನಗರದ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಇನ್ನು ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಅಷ್ಟರೊಳಗೆ ನಗರ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ರಸ್ತೆಗಳು ಸಂಚಾರ ಯೋಗ್ಯವಾಗಿ ಮಾಡಬೇಕು. ರಸ್ತೆ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗದೆ ಒದಗಿಸಲಾಗಿರುವ ಅನುದಾನವನ್ನು ಗುಣಮಟ್ಟದ ಕಾಮಗಾರಿಗೆ ಬಳಸಬೇಕು. ವೈಜ್ಞಾನಿಕವಾಗಿ ರಸ್ತೆ ದುರಸ್ತಿ ಕಾಮಗಾರಿ ಅನುಷ್ಠಾನಗೊಳಿಸಬೇಕು ಎಂದು ಸಿಎಂ ಸೂಚಿಸಿದರು.

ಬಿಡಿಎ, ಬಿಎಂಆರ್‌ಸಿಎಲ್‌, ಜಲಮಂಡಳಿ ಅಧಿಕಾರಿಗಳ ನಡುವೆ ಸಮನ್ವಯತೆಯೇ ಇಲ್ಲ. ರಸ್ತೆ ಗುಂಡಿ ಮುಚ್ಚುವಲ್ಲಿ ಎಲ್ಲ ಇಲಾಖೆಗಳೂ ಸಮನ್ವಯತೆಯಿಂದ ಕೆಲಸ ಮಾಡಬೇಕು.ತಿಂಗಳಲ್ಲಿ ರಸ್ತೆ ಗುಂಡಿ ಮುಕ್ತವಾಗಿಸಬೇಕು. ಜಿಬಿಎ ಮುಖ್ಯ ಆಯುಕ್ತರು ಪ್ರತಿವಾರ ಐದೂ ಪಾಲಿಕೆಗಳೊಂದಿಗೆ ಸಭೆ ನಡೆಸಿ, ನಿರಂತರ ಸಂಪರ್ಕದಲ್ಲಿರಬೇಕು. ಹಣದ ಕೊರತೆಯಿದ್ದರೆ ಆರ್ಥಿಕ ಇಲಾಖೆಯಿಂದ ಬಿಡುಗಡೆ ಮಾಡಲಾಗುವುದು. ಒಂದು ತಿಂಗಳ ನಂತರ ಮತ್ತೊಮ್ಮೆ ಸಭೆ ನಡೆಸಿ, ರಸ್ತೆ ಗುಂಡಿ ಮುಚ್ಚಿರುವ ಮೌಲ್ಯಮಾಪನ ಮಾಡಲಾಗುವುದು ಎಂದರು.

ಮಳೆಗಾಲ ಬರುವವರೆಗೆ ಸುಮ್ಮನಿದ್ದಿದ್ದೇಕೆ?:

ಮಳೆಗಾಲಕ್ಕೆ ಮುನ್ನವೇ ರಸ್ತೆ ದುರಸ್ತಿ ಮಾಡದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ಮಳೆಗಾಲ ಬರುವವರೆಗೆ ಸುಮ್ಮನಿರಲು ಕಾರಣವೇನು? ಮಳೆಗಾಲದಲ್ಲಿಯೇ ಕಾಮಗಾರಿಗಳನ್ನು ಆರಂಭಿಸಿದ್ದೇಕೆ ಎಂದು ಪ್ರಶ್ನಿಸಿ, ಗ್ರೇಟರ್ ಬೆಂಗಳೂರು ವ್ಯಾಪ್ತಿಯ 5 ಪಾಲಿಕೆಗಳ ನೂತನ ಆಯುಕ್ತರು ಕಚೇರಿಯಲ್ಲಿರದೆ ರಸ್ತೆಗಿಳಿದು ಕೆಲಸ ಮಾಡಿ. ರಸ್ತೆ ದುರಸ್ತಿ ಕಾಮಗಾರಿಗಳ ಮೇಲೆ ನಿಗಾವಹಿಸಿ ಎಂದು ಸಿದ್ದರಾಮಯ್ಯ ನಿರ್ದೇಶಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಕೆ.ಜೆ. ಜಾರ್ಜ್‌, ಜಮೀರ್‌ ಅಹಮದ್‌ ಖಾನ್‌, ಬಿ.ಎಸ್‌. ಸುರೇಶ್‌, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಡಿಜಿಪಿ ಎಂ.ಎ. ಸಲೀಂ, ನಗರ ಪೊಲೀಸ್‌ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಇತರರಿದ್ದರು.

ರಸ್ತೆ ಗುಂಡಿ, ಕಾಮಗಾರಿಗಳ ವಿವರ

* 5 ಪಾಲಿಕೆ ವ್ಯಾಪ್ತಿಯಲ್ಲಿ 14,795 ಗುಂಡಿ ಗುರುತಿಸಲಾಗಿದ್ದು, ಈವರೆಗೆ 6,749 ಗುಂಡಿ ಮುಚ್ಚಲಾಗಿದೆ

* 8,046 ಗುಂಡಿಗಳನ್ನು ಮುಚ್ಚುವುದು ಬಾಕಿಯಿದೆ

* 401.63 ಕಿಮೀ ರಸ್ತೆಗಳ ಡಾಂಬರೀಕರಣ ಪೂರ್ಣಗೊಂಡಿದ್ದು, 440.92 ಕಿಮೀನಲ್ಲಿ ನಡೆಯುತ್ತಿದೆ

* 143.68 ಕಿ.ಮೀ ಉದ್ದದ ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ಪ್ರಗತಿಯಲ್ಲಿ

* ಮುಖ್ಯ, ಉಪಮುಖ್ಯ ರಸ್ತೆಗಳಲ್ಲಿ ಗುಂಡಿ ಮುಚ್ಚಲು 18 ಕೋಟಿ ಅನುದಾನ ಒದಗಿಸಲಾಗಿದೆ

* 5 ಪಾಲಿಕೆಗಳಿಗೆ ತುರ್ತು ಕಾಮಗಾರಿಗಳಿಗೆ ತಲಾ 25 ಕೋಟಿ ರು. ಅನುದಾನ ಬಿಡುಗಡೆ

* 5 ಪಾಲಿಕೆಗಳೊಂದಿಗೆ ಸಮನ್ವಯ ಸಾಧಿಸಲು ಒಬ್ಬ ತಾಂತ್ರಿಕ ಸಮನ್ವಯಾಧಿಕಾರಿ ನೇಮಕಕ್ಕೆ ಕ್ರಮ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!
36 ವರ್ಷದ ಬಳಿಕ ರಾಜ್ಯದಲ್ಲಿ ವಿದ್ಯಾರ್ಥಿ ಸಂಘಕ್ಕೆ ಎಲೆಕ್ಷನ್‌?