ಉ.ಕ. ಚರ್ಚೆ ವೇಳೆ ವಿಪಕ್ಷಕ್ಕೆ ತಿರುಗೇಟು : ಸಿಎಲ್‌ಪಿ ನಿರ್ಧಾರ

Published : Dec 10, 2025, 04:43 AM IST
Belagavi session

ಸಾರಾಂಶ

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಕುರಿತ ಚರ್ಚೆ ವೇಳೆ ರಾಜ್ಯ ಸರ್ಕಾರ ಈ ಭಾಗಕ್ಕೆ ನೀಡಿರುವ ಕೊಡುಗೆ ಪ್ರಸ್ತಾಪಿಸುವ ಜತೆಗೆ ಮೆಕ್ಕೆಜೋಳ, ಕಬ್ಬು ಬೆಲೆ ನಿಗದಿಯಲ್ಲಿ ಕೇಂದ್ರದ ಅನ್ಯಾಯ ಪ್ರಸ್ತಾಪಿಸಿ ಪ್ರತಿಪಕ್ಷಗಳ ವಿರುದ್ಧ ಹರಿಹಾಯಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ.

  ಬೆಳಗಾವಿ :  ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಕುರಿತ ಚರ್ಚೆ ವೇಳೆ ರಾಜ್ಯ ಸರ್ಕಾರ ಈ ಭಾಗಕ್ಕೆ ನೀಡಿರುವ ಕೊಡುಗೆ ಪ್ರಸ್ತಾಪಿಸುವ ಜತೆಗೆ ಮೆಕ್ಕೆಜೋಳ, ಕಬ್ಬು ಬೆಲೆ ನಿಗದಿಯಲ್ಲಿ ಕೇಂದ್ರದ ಅನ್ಯಾಯ ಪ್ರಸ್ತಾಪಿಸಿ ಪ್ರತಿಪಕ್ಷಗಳ ವಿರುದ್ಧ ಹರಿಹಾಯಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ವೇಳೆ ಅಧಿವೇಶನದ ಉಭಯ ಸದನಗಳಲ್ಲಿ ಮೊದಲ ವಾರವೇ ಉತ್ತರ ಕರ್ನಾಟಕ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿಪಕ್ಷಗಳು ರೈತರ ಸಮಸ್ಯೆ, ಉ.ಕ. ಸಮಸ್ಯೆ ಪ್ರಸ್ತಾಪಿಸುವ ಸಾಧ್ಯತೆಯಿದೆ. ಹೀಗಾಗಿ ಕಳೆದ ಎರಡೂವರೆ ವರ್ಷದಲ್ಲಿ ಉ.ಕ. ಭಾಗಕ್ಕೆ ನೀಡಿರುವ ಅನುದಾನ, ಯೋಜನೆಗಳು ಹಾಗೂ ಕೊಡುಗೆಗಳ ಬಗ್ಗೆ ಪ್ರಸ್ತಾಪಿಸಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ತೀರ್ಮಾನಿಸಲಾಯಿತು.

ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ 138 ಶಾಸಕರ ಪೈಕಿ 115 ಮಂದಿ, 37 ಮಂದಿ ಪರಿಷತ್‌ ಸದಸ್ಯರ ಪೈಕಿ 33 ಮಂದಿ ಭಾಗವಹಿಸಿದ್ದರು. ಈ ವೇಳೆ ಶಾಸಕಾಂಗ ಪಕ್ಷದ ನಾಯಕರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘವಾಗಿ ಸಭೆ ಉದ್ದೇಶಿಸಿ ಮಾತನಾಡಿದರು.

ಕಬ್ಬು ಬೆಲೆ ಹಾಗೂ ಮುಸುಕಿನ ಜೋಳದ ಬೆಲೆ ನಿಗದಿಯಲ್ಲಿ ಕೇಂದ್ರ ಸರ್ಕಾರದಿಂದ ರೈತರಿಗೆ ಅನ್ಯಾಯವಾಗಿದೆ. ಬೆಂಬಲ ಬೆಲೆ ನಿಗದಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಕಬ್ಬು ಬೆಲೆ ನಿಗದಿ ಬಗ್ಗೆ ಪ್ರಧಾನಿಗಳನ್ನೂ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಆದರೆ, ಕೇಂದ್ರ ಸಚಿವರೊಂದಿಗೆ ಸಭೆಗೆ ಅವಕಾಶವನ್ನೇ ನೀಡಿಲ್ಲ. ಹೀಗಿದ್ದರೂ ರಾಜ್ಯದಲ್ಲಿ ಬಿಜೆಪಿಯು ರೈತರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ತಕ್ಕ ತಿರುಗೇಟು ನೀಡಬೇಕು. ಕಬ್ಬಿಗೆ ಹೆಚ್ಚುವರಿ ಬೆಲೆ ನಿಗದಿ, ಮುಸುಕಿನ ಜೋಳ ರೈತರಿಂದ ನೇರ ಖರೀದಿ ಮಾಡಿರುವಂತಹ ರಾಜ್ಯ ಸರ್ಕಾರದ ಕೆಲಸ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಬೇಕು ಎಂದು ಸಿದ್ದರಾಮಯ್ಯ ಹೇಳಿರುವುದಾಗಿ ತಿಳಿದುಬಂದಿದೆ.

ಜತೆಗೆ, ಉತ್ತರ ಕರ್ನಾಟಕ ಸೇರಿ ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ನೆರವು ನೀಡಿಲ್ಲ. ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ ಅಧಿಸೂಚನೆ ಹೊರಡಿಸಿಲ್ಲ. ಈ ರೀತಿಯ ನಿರ್ಲಕ್ಷ್ಯ ಹಾಗೂ ವೈಫಲ್ಯಗಳನ್ನು ಎತ್ತಿ ತೋರಿಸಬೇಕು ಎಂದು ಹೇಳಿದರು.

ಅನುದಾನ ಬಿಡುಗಡೆಗೆ ಆಗ್ರಹ:

ಮೊದಲ ಹಂತದಲ್ಲಿ ಬಿಡುಗಡೆ ಮಾಡಿದ್ದ 25 ಕೋಟಿ ರು. ಸೇರಿ ತಲಾ 50 ಕೋಟಿ ರು. ಅನುದಾನ ಹಾಗೂ 10 ಕೋಟಿ ರು. ಗ್ರಾಮೀಣಾಭಿವೃದ್ಧಿ ಇಲಾಖೆ ಅನುದಾನಕ್ಕೆ ಕ್ರಿಯಾಯೋಜನೆ ಸಲ್ಲಿಸಿದ್ದೇವೆ. ಆದರೆ, ಆರ್ಥಿಕ ಇಲಾಖೆಯಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ. ಶೀಘ್ರ ಅನುದಾನ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಕ್ಷೇತ್ರದಲ್ಲಿನ ರಸ್ತೆ ಗುಂಡಿ ಸೇರಿ ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತಿಲ್ಲ ಎಂದು ಪ್ರಸ್ತಾಪಿಸಿದರು.

ಇದಕ್ಕೆ ಸಿದ್ದರಾಮಯ್ಯ, ಸದ್ಯದಲ್ಲೇ ಆರ್ಥಿಕ ಇಲಾಖೆ ಜತೆ ಸಭೆ ನಡೆಸಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅಧಿಕಾರಿಗಳ ವಿರುದ್ಧ ಆಕ್ರೋಶ:

ಇದೇ ವೇಳೆ ಕೆಲ ಶಾಸಕರು ಅಧಿಕಾರಿಗಳು ಮಾತು ಕೇಳುತ್ತಿಲ್ಲ. ಆಡಳಿತ ಪಕ್ಷದ ಶಾಸಕರಿಗೆ ಗೌರವ ನೀಡುತ್ತಿಲ್ಲ. ಇದರಿಂದ ಕ್ಷೇತ್ರಗಳಲ್ಲಿ ತುಂಬಾ ಕೆಟ್ಟ ಹೆಸರು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಮಾಲೂರು ನಂಜೇಗೌಡ ಪ್ರಸ್ತಾಪಿಸಿದಾಗ ಹಲವು ಶಾಸಕರು ದನಿಗೂಡಿಸಿದರು.

ಹೀಗಾಗಿ ಸಿದ್ದರಾಮಯ್ಯ ಇದನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿ ಸೂಚನೆ ನೀಡುತ್ತೇನೆ ಎಂದಿರುವುದಾಗಿ ತಿಳಿದುಬಂದಿದೆ.

ಅಧಿಕಾರ ಹಂಚಿಕೆ ಹೇಳಿಕೆ ಕುರಿತು ಚರ್ಚೆಯೇ ಇಲ್ಲ

ಅಧಿವೇಶನದ ಹೊಸ್ತಿಲಲ್ಲೇ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದ ಬಗ್ಗೆ ನೀಡಿದ್ದ ಹೇಳಿಕೆ ಸಂಚಲನ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಅನಗತ್ಯ ಹೇಳಿಕೆಗಳ ಬಗ್ಗೆ ಚರ್ಚೆಯಾಗಲಿದೆ ಎಂಬ ನಿರೀಕ್ಷೆಯಿತ್ತು. ಕನಿಷ್ಠ ಈ ಬಗ್ಗೆ ಹೇಳಿಕೆ ನೀಡಬೇಡಿ ಎಂಬ ತಾಕೀತನ್ನಾದರೂ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅಚ್ಚರಿ ಎಂಬಂತೆ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ಅಧಿವೇಶನ ಡಿಸೆಂಬರ್‌ ಬದಲು ಜೂನ್‌ಗೆ: ಸಿಎಂ ಅಭಿಪ್ರಾಯ

ಪ್ರತಿ ವರ್ಷ ಡಿಸೆಂಬರ್‌ನಲ್ಲಿ ನಡೆಸುವ ಬೆಳಗಾವಿಯ ಚಳಿಗಾಲದ ಅಧಿವೇಶನವನ್ನು ಡಿಸೆಂಬರ್‌ ಬದಲಿಗೆ ಜೂನ್‌ನಲ್ಲಿ ನಡೆಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಡಿಸೆಂಬರ್‌ ವೇಳೆ ಕಬ್ಬು ಕಟಾವು ಮತ್ತಿತರ ಕೃಷಿ ಚಟುವಟಿಕೆ ಇರುತ್ತದೆ. ಹೀಗಾಗಿ ರೈತರ ಪ್ರತಿಭಟನೆ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಡಿಸೆಂಬರ್‌ ಬದಲಿಗೆ ಜೂನ್‌ನ ಮಾನ್ಸೂನ್‌ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಬಹುದು ಎಂದು ಹೇಳಿದರು. ಆದರೆ ಈ ಬಗ್ಗೆ ಬೇರೆ ಯಾವುದೇ ಚರ್ಚೆ ಹಾಗೂ ನಿರ್ಧಾರದ ಕುರಿತು ಮಾತನಾಡಲಿಲ್ಲ ಎನ್ನಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌
ಸಿಎಂ ಬದಲು ಕುರಿತು ಹೇಳಿಕೆ : ಯತೀಂದ್ರಗೆ ಸಿಎಂ ಸಿದ್ದು ಕ್ಲಾಸ್‌?