ಕನ್ನಡಪ್ರಭ ವಾರ್ತೆ ಮೈಸೂರು
ಬುಧವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಎಂಡಿಎ ವತಿಯಿಂದ 50:50 ಅನುಪಾತದಡಿ ಪಡೆದುಕೊಂಡ ನಿವೇಶನ ಹಿಂದಿರುಗಿಸುವಂತೆ ಹೇಳಿದ್ದೆ. ನಾನು ಸಿಎಂ ಸಿದ್ದರಾಮಯ್ಯ ಅವರ ಮೇಲಿನ ಕಾಳಜಿ, ಪ್ರೀತಿ, ಗೌರವದಿಂದ ಸಲಹೆ ಕೊಟ್ಟಿದ್ದೆ. ಅದನ್ನು ಅರ್ಥ ಮಾಡಿಕೊಳ್ಳದೇ ಮರಿಗೌಡನಂತಹ ಬಕ್ರಾಗಳನ್ನು ಜೊತೆಗಿಟ್ಟುಕೊಂಡಿದ್ದೀರಿ ಎಂದು ಮೊದಲಿಸಿದರು.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ. ಶಿಖಾ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಒಂದೂವರೆ ತಿಂಗಳು ತಲೆ ಮರೆಸಿಕೊಂಡಿದ್ದ ಮರೀಗೌಡ. ಅಂತಹ ವ್ಯಕ್ತಿಯನ್ನು ಎಂಡಿಎ ಅಧ್ಯಕ್ಷನನ್ನಾಗಿ ಮಾಡಿದ್ದೀರಿ. ನಾನು ಸಂಸದನಾಗಿದ್ದೆ. ಜಿ ಕೆಟಗರಿ ಸೈಟ್ ಗೆ ಕಾನೂನಾತ್ಮಕ ಸಿಆರ್ ಕೊಡಿ ಎಂದು ಕೇಳಿದ್ದೆ. ಜುಜುಬಿ ಶೇ. 25 ರಷ್ಟು ದಂಡ ಉಳಿಸಲು ಹೋಗಿಲ್ಲ. ಕಾನೂನು ರೀತಿ ಇಲ್ಲ ಎಂದು ನಾನೇ ಎಂಡಿಎ ಆಯುಕ್ತರಿಗೆ ಹೇಳಿ ರದ್ದು ಮಾಡಿಸಿದ್ದೆ ಎಂದರು.ನಾನು ಕಟ್ಟಬೇಕಿರುವುದು ಒಂದೆರಡು ಲಕ್ಷ ರೂಪಾಯಿ ದಂಡ. ಅದಕ್ಕೂ ಎಂಡಿಎನ ಕೋಟ್ಯಂತರ ರೂಪಾಯಿಯ 50:50 ಅನುಪಾತದಡಿಯಲ್ಲಿ ನಿವೇಶನ ಹಂಚಿಕೆ ಹಗರಣಕ್ಕೂ ಏನು ಸಂಬಂಧ? ಇಂತಹ ತಿಳಿಗೇಡಿ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಕನಿಷ್ಠ ಜ್ಞಾನವಿಲ್ಲದ ಮರೀಗೌಡ ಒಬ್ಬ ಬಕ್ರಾ. ಇಂತಹ ಬಕ್ರಾಗಳಿಂದಲೇ ಸಿಎಂ ಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಅವರು ದೂರಿದರು.
ಈಗ ಸಿದ್ದರಾಮಯ್ಯ ಅವರ ಬಗ್ಗೆಯೂ ಅನುಮಾನ ಶುರುವಾಗಿದೆ. ನಿವೇಶನ ಹಿಂದಕ್ಕೆ ಕೊಟ್ಟು ತನಿಖೆ ಮಾಡಿಸಿ. ಇಲ್ಲದಿದ್ದರೇ ಸಿಎಂ ಕುಟುಂಬದ ಪ್ರಕರಣ ಇಟ್ಟುಕೊಂಡು ಹಲವರು ಬಚಾವ್ ಆಗುತ್ತಾರೆ. 40 ವರ್ಷದಲ್ಲಿ ಕಳಂಕ ಅಂಟಿಸಿ ಕೊಳ್ಳದಿರುವ ನೀವು ಇದ್ಯಾವುದೋ 16 ಸೈಟಿಗಾಗಿ ಕಳಂಕ ಅಂಟಿಸಿಕೊಳ್ಳುತ್ತಿದ್ದೀರಿ. ಇದು ಬೇಕಾ ನಿಮಗೆ? ಮುಂದಿನ ಮೂರುವರೆ ವರ್ಷ ನೀವೇ ಸಿಎಂ ಆಗಿ ಇರುತ್ತೀರಿ. ಇಡೀ ಮೂರುವರೆ ವರ್ಷ ಇದೇ ಆರೋಪಕ್ಕೆ ತುತ್ತಾಗುತ್ತೀರಿ. ನೊಣ ತಿಂದು ಜಾತಿ ಕೆಡಿಸಿಕೊಳ್ಳಬೇಡಿ ಎಂದು ಅವರು ಸಲಹೆ ನೀಡಿದರು.
ರಾಜಕೀಯದಲ್ಲಿ ಇದೇ ಅಂತಿಮವಲ್ಲ:
ಸಿದ್ದರಾಮಯ್ಯ ಮೂರುವರೆ ವರ್ಷ ಸಿಎಂ ಅಗಿರುತ್ತಾರೆ ಎಂದು ಅವರ ಹಿಂಬಾಲಕರು ಹೇಳುತ್ತಿರುತ್ತಾರೆ. ಹೀಗಾಗಿ ನಾನು ಸಹ ಹೇಳಿದೆ ಅಷ್ಟೇ. ಡಿ.ಕೆ. ಶಿವಕುಮಾರ್ ಸಿಎಂ ಆದರೂ ಖುಷೀನೆ ನನಗೆ. ಅವರೂ ಕೂಡ ಹಳೇ ಮೈಸೂರು ಭಾಗದವರೆ. ಸಿದ್ದರಾಮಯ್ಯ ಸಹ ಮೈಸೂರಿನವರೆ. ಅವರು ಬೇರೆ ಪಕ್ಷದವರು ಆಗಿರಬಹುದು, ಆದರೆ ಅವರು ಮೈಸೂರಿನವರು ಎಂಬ ಹೆಮ್ಮೆ ಇದೆ ಎಂದು ಅವರು ಹೇಳಿದರು.