ನೈಸ್‌ ಕಂಪನಿ ಖರೀದಿಗೆ ಸಿಎಂ ಯತ್ನ: ಎಚ್‌ಡಿಕೆ!

Published : Aug 25, 2026, 11:36 AM IST
HD Kumaraswamy

ಸಾರಾಂಶ

ರಾಜ್ಯದ ಈಗಿನ ಮುಖ್ಯಮಂತ್ರಿಯೇ ನೈಸ್ ಕಂಪನಿಯನ್ನು ಖರೀದಿ ಮಾಡಲು ಹೊರಟಿದ್ದಾರೆ. ಮುಂದಿನ ವಾರ ದಾಖಲೆ ಸಮೇತ ಹೇಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಹೊಸ ‘ಬಾಂಬ್‌’ ಸಿಡಿಸಿದ್ದಾರೆ.

ಬೆಂಗಳೂರು : ರಾಜ್ಯದ ಈಗಿನ ಮುಖ್ಯಮಂತ್ರಿಯೇ ನೈಸ್ ಕಂಪನಿಯನ್ನು ಖರೀದಿ ಮಾಡಲು ಹೊರಟಿದ್ದಾರೆ. ಮುಂದಿನ ವಾರ ದಾಖಲೆ ಸಮೇತ ಹೇಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಹೊಸ ‘ಬಾಂಬ್‌’ ಸಿಡಿಸಿದ್ದಾರೆ.

ಸೋಮವಾರ ಜೆಡಿಎಸ್‌ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದ ಈಗಿನ ಮುಖ್ಯಮಂತ್ರಿಯೇ ಬೇನಾಮಿ ಕಂಪನಿಗಳ ಮೂಲಕ ನೈಸ್ ಕಂಪನಿ ಖರೀದಿಗೆ ಹೊರಟಿದ್ದಾರೆ. ಈ ರಾಜ್ಯದಲ್ಲಿ ರೈತರಿಗೊಂದು, ಮುಖ್ಯಮಂತ್ರಿಗೊಂದು ಕಾನೂನು ಇದೆಯಾ? ಬಿಎಂಐಸಿ ಯೋಜನೆ ಹೆಸರಲ್ಲಿ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಹೊಡೆಯಲು ಸಂಚು ರೂಪಿಸಿದ್ದಾರೆ. ನಾನಿಲ್ಲಿ ಕೂತು ಸಂತೆ ಭಾಷಣ ಮಾಡುತ್ತಿಲ್ಲ. ಮುಂದಿನ ವಾರ ದಾಖಲೆ ಸಮೇತ ಹೇಳುತ್ತೇನೆ ಎಂದು ಗುಡುಗಿದರು.

ನೈಸ್‌ ಅಕ್ರಮದಲ್ಲಿ ಸಿಎಂ ನೇರ ಶಾಮೀಲು:

ರಾಜ್ಯದ ಹಾಲಿ ಮುಖ್ಯಮಂತ್ರಿ ನೈಸ್ ಅಕ್ರಮಗಳಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ರಾಷ್ಟ್ರದಲ್ಲಿಯೇ ಅತಿ ದೊಡ್ಡ ಭೂ ಲೂಟಿಯ ಮಹಾನಾಯಕ ಈ ಮುಖ್ಯಮಂತ್ರಿ. ವಿಧಾನಸೌಧದ ಮೂರನೇ ಮಾಡಿಯಲ್ಲಿ ಕೂತು ಈ ಮುಖ್ಯಮಂತ್ರಿ ನೇರ ವ್ಯವಹಾರಕ್ಕೆ ಇಳಿದಿದ್ದಾರೆ. ನೈಸ್ ಕಂಪನಿಯನ್ನು ಯಾರು ಟೇಕ್ ಓವರ್ ಮಾಡುತ್ತಿದ್ದಾರೆ ಎಂಬುದನ್ನು ತಾಕತ್ತಿದ್ದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜನತೆಯ ಮುಂದೆ ಹೇಳಲಿ ಎಂದು ಸವಾಲು ಹಾಕಿದರು.

ಯೋಜನೆಯನ್ನು ಯಾರು ಸ್ವಾಧೀನ ಮಾಡಿಕೊಳ್ಳುತ್ತಿದ್ದಾರೆ? ಬೇನಾಮಿ ಕಂಪನಿಗಳ ಮೂಲಕ ಯಾರೆಲ್ಲಾ ಈ ವ್ಯವಹಾರಕ್ಕೆ ಇಳಿದಿದ್ದಾರೆ ಎಂಬ ಮಾಹಿತಿ ಇದೆ. ಈ ಮುಖ್ಯಮಂತ್ರಿ ಎದೆ ಮುಟ್ಟಿಕೊಂಡು ಮಾತನಾಡಲಿ. ಈ ಬಗ್ಗೆ ರಾಜ್ಯದ ಜನತೆಯ ಮುಂದೆ ಸತ್ಯವನ್ನು ಬಾಯಿ ಬಿಡಲಿ ಎಂದು ಆಗ್ರಹಿಸಿದರು.

ನೈಸ್‌ಗೂ ಸಿಎಂಗೂ ಸಂಬಧವೇನು?

ಈ ಮುಖ್ಯಮಂತ್ರಿಗೂ ನೈಸ್ ಯೋಜನೆಗೂ ಇರುವ ಸಂಬಂಧವೇನು? ನೈಸ್ ಜೊತೆ ಸಿಎಂ ಒಡಂಬಡಿಕೆ ಏನು? ಈ ಕಂಪನಿಯ ಮಾಲೀಕರ ಜೊತೆ ಈ ವ್ಯಕ್ತಿಗೆ ಇರುವ ಸಂಬಂಧಗಳು ಮತ್ತು ವ್ಯವಹಾರಗಳು ಏನು? ಧೈರ್ಯವಿದ್ದರೆ ಜನರ ಮುಂದೆ ಈ ಬಗ್ಗೆ ಮಾತನಾಡಲಿ. ನಾನು ಸತ್ಯ ಹೇಳುವುದಕ್ಕೆ ಅಂಜುವುದಿಲ್ಲ ಎಂದು ಹೇಳಿದರು.

ನೈಸ್ ರಸ್ತೆ ಅಕ್ರಮದ ಬಗ್ಗೆ ರಾಜ್ಯ ಸರ್ಕಾರ ಮೌನಕ್ಕೆ ಶರಣಾಗಿದೆ. ಯೋಜನಾ ಚೌಕಟ್ಟು ಒಪ್ಪಂದ ಸಂಪೂರ್ಣವಾಗಿ ಉಲ್ಲಂಘನೆ ಆಗಿದೆ. ರೈತರ ಭೂಸ್ವಾಧೀನವಾಗಿ 20 ವರ್ಷಗಳೇ ಆಗಿದೆ. ರೈತರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಒಪ್ಪಂದದಂತೆ ನೈಸ್‌ ಕಂಪನಿ 111 ಕಿ.ಮೀ. ರಸ್ತೆ ನಿರ್ಮಿಸುವ ಬದಲು ಕೇವಲ 5 ಕಿ.ಮೀ. ನಿರ್ಮಿಸಿದೆ. ಒಪ್ಪಂದ ಅಂಶಗಳ ಉಲ್ಲಂಘಿಸಿ ಅನೇಕ ವರ್ಷಗಳಿಂದ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರಿಂದ ಅಕ್ರಮವಾಗಿ ಹಣ ಸುಲಿಗೆ ಮಾಡುತ್ತಿದೆ. ಇದರ ವಿರುದ್ಧ ಯುವ ಜನತೆ ಹೋರಾಟಬೇಕು ಎಂದು ಕರೆ ನೀಡಿದರು.

ಇಷ್ಟೆಲ್ಲಾ ಅಕ್ರಮಗಳನ್ನು ಎಸಗಿರುವ ಕಾರಣದಿಂದಲೇ ರಾಜ ಹೈಕೋರ್ಟ್ ನೈಸ್ ಯೋಜನೆಯ ಬಗ್ಗೆ ಕಠಿಣವಾದ ಶಬ್ದಗಳ ಮೂಲಕ ತನ್ನ ಅಭಿಪ್ರಾಯವನ್ನು ದಾಖಲಿಸಿದೆ. ದುರಂತವೆಂದರೆ ರಾಜ್ಯದ ಮುಖ್ಯಮಂತ್ರಿಯೇ ನೇರವಾಗಿ ನೈಸ್ ಕಂಪನಿ ಜೊತೆ ಶಾಮೀಲಾಗಿದ್ದಾರೆ. ಅಲ್ಲಿ ಸುಲಿಗೆ ಮಾಡುವ ಹಣವನ್ನು ಇವರೆಲ್ಲರೂ ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ನನ್ನ ಬೇನಾಮಿ ಆಸ್ತಿ ಯಾವುದಾದರೂ ಇದ್ದರೆ ತೋರಿಸಲಿ. ಈ ಸರ್ಕಾರಕ್ಕೆ ನನ್ನ ನೇರ ಸವಾಲು. ಅಂತಹ ಒಂದು ಬೇನಾಮಿ ಆಸ್ತಿ ಇದ್ದರೆ ರಾಜಕೀಯವಾಗಿ ನಿವೃತ್ತಿಯಾಗುತ್ತೇನೆ

- ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಕೈಗಾರಿಕಾ ಸಚಿವ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮೈಸೂರು ವಿಭಾಗಕ್ಕೆ ಮಂಗಳೂರು ರೈಲು ಸೇರಿದ್ರೆ ಕಾಂಗ್ರೆಸ್‌ಗೇನು ಕಷ್ಟ?: ಆರ್‌ಸಿ
ರಾಜ್ಯದ 102 ತಾಲೂಕಲ್ಲಿ ಬರಗಾಲ : ಡಾ। ಜಿ.ಪರಂ