ರಾಜ್ಯದಲ್ಲಿ ಇದುವರೆಗಿನ ಅಧ್ಯಯನ ಪ್ರಕಾರ 102 ತಾಲೂಕುಗಳು ಬರಪೀಡಿತ ಎಂದು ಘೋಷಿಸಲು ಅರ್ಹವಾಗಿವೆ. ಆದರೆ, ಈಗಲೇ ಬರ ಘೋಷಣೆಗೆ ಕೇಂದ್ರ ಸರ್ಕಾರದ ಮಾನದಂಡಗಳು ಅಡ್ಡಿಯಾಗಿವೆ .ರೈತರಿಗೆ ಪೂರಕವಾಗಿ ಇಲ್ಲ. ಹಾಗಾಗಿ ಈ ನಿಯಮಗಳನ್ನು ಸರಳೀಕರಣಗೊಳಿಸಬೇಕು

ವಿಧಾನಸಭೆ/ವಿಧಾನಪರಿಷತ್ತು : ರಾಜ್ಯದಲ್ಲಿ ಇದುವರೆಗಿನ ಅಧ್ಯಯನ ಪ್ರಕಾರ 102 ತಾಲೂಕುಗಳು ಬರಪೀಡಿತ ಎಂದು ಘೋಷಿಸಲು ಅರ್ಹವಾಗಿವೆ. ಆದರೆ, ಈಗಲೇ ಬರ ಘೋಷಣೆಗೆ ಕೇಂದ್ರ ಸರ್ಕಾರದ ಮಾನದಂಡಗಳು ಅಡ್ಡಿಯಾಗಿವೆ. ರೈತರಿಗೆ ಪೂರಕವಾಗಿ ಇಲ್ಲ. ಹಾಗಾಗಿ ಈ ನಿಯಮಗಳನ್ನು ಸರಳೀಕರಣಗೊಳಿಸಬೇಕು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಒತ್ತಾಯಿಸಿದ್ದಾರೆ.

ಪ್ರತಿಪಕ್ಷಗಳ ಪ್ರತಿಭಟನೆ, ಗದ್ದಲದ ನಡುವೆಯೇ ಕೆಲ ದಿನಗಳ ಕಾಲ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ನಡೆದ ಬರದ ಮೇಲಿನ ಚರ್ಚೆಗೆ ಉಭಯ ಸದನಗಳಲ್ಲೂ ಸೋಮವಾರ ಉತ್ತರ ನೀಡಿದ ಪರಮೇಶ್ವರ್‌ ಅವರು, ಅನೇಕ ಸದಸ್ಯರು ಬರ ಘೋಷಣೆಗೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ಈಗಲೇ ಬರ ಘೋಷಣೆಗೆ ಕೇಂದ್ರ ಸರ್ಕಾರ ಬರ ನಿರ್ಧರಿಸಲು ನೀಡಿರುವ ಹೊಸ ಮಾರ್ಗಸೂಚಿಗಳು ಅಡ್ಡಿಯಾಗಿವೆ ಎಂದರು.

ಮಾಸಾಂತ್ಯದವರೆಗೂ ಬರ ಘೋಷಣೆ ಮಾಡುವಂತಿಲ್ಲ. ಅನೇಕ ಮಾರ್ಗಸೂಚಿಗಳು ರೈತರಿಗೆ ಪೂರಕವಾಗಿಲ್ಲ. ಆದ್ದರಿಂದ ಅವುಗಳನ್ನು ಸಡಿಲಗೊಳಿಸಿ ಎಂದು ನಮ್ಮ ಸರ್ಕಾರ ನಿರಂತರವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ದೆಹಲಿಗೂ ಹೋಗಿ ಪ್ರಧಾನ ಮಂತ್ರಿ ಆದಿಯಾಗಿ ಕೇಂದ್ರದ ಸಂಬಂಧಿಸಿದ ಸಚಿವರನ್ನೂ ಭೇಟಿ ಮಾಡಿ ಒತ್ತಾಯಿಸಿದ್ದೇವೆ. ನಾನು ಮತ್ತು ಮುಖ್ಯಮಂತ್ರಿ ಅವರು ಸೇರಿ ಎರಡು ಪತ್ರಗಳನ್ನು ಬರೆದಿದ್ದೇವೆ. ಈ ವಿಚಾರದಲ್ಲಿ ವಿರೋಧ ಪಕ್ಷದ ಸದಸ್ಯರೂ ಸರ್ಕಾರದ ನೆರವಿಗೆ ಬರಬೇಕು, ಕೇಂದ್ರದ ಮೇಲೆ ತಾವೂ ಒತ್ತಡ ತರಬೇಕೆಂದು ಮನವಿ ಮಾಡಿದರು.

ಕೇಂದ್ರದ ಸದ್ಯದ ಮಾನದಂಡಗಳ ಪ್ರಕಾರ, 102 ತಾಲೂಕುಗಳು ಬರ ಘೋಷಣೆಗೆ ಅರ್ಹತೆ ಪಡೆದಿವೆ. ಇದನ್ನು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗುವುದು. ಇದು ನಿರಂತರ ಪ್ರಕ್ರಿಯೆಯಾಗಿದ್ದು, ಉಳಿದ ತಾಲೂಕುಗಳನ್ನು ಅವಲೋಕಿಸಿಕೊಂಡು ಮುಂದಿನ ದಿನಗಳಲ್ಲಿ ಬರ ಘೋಷಣೆಗೆ ಕ್ರಮ ವಹಿಸಲಾಗುವುದು. ನಂತರ ಕೇಂದ್ರ ಸರ್ಕಾರಕ್ಕೂ ವರದಿ ಕಳುಹಿಸಿ ಬರ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದರು.

ಕಂದಾಯ ಸಚಿವರು ಹೇಳಿದ್ದೇನು?

ಅಧ್ಯಯನದ ಪ್ರಕಾರ ರಾಜ್ಯದ 102 ತಾಲೂಕುಗಳು ಸದ್ಯ ಬರಪೀಡಿತ ಎಂದು ಘೋಷಿಸಲು ಅರ್ಹ

ಆದರೆ ಕೇಂದ್ರದ ಮಾನದಂಡದ ಪ್ರಕಾರ ಈಗಲೇ ಬರಪೀಡಿತ ತಾಲೂಕುಗಳ ಘೋಷಣೆ ಸಾಧ್ಯವಿಲ್ಲ

ಬರ ಪೀಡಿತ ಪ್ರದೇಶವೆಂದು ಘೋಷಿಸಲು ಕೇಂದ್ರ ರೂಪಿಸಿರುವ ಮಾರ್ಗಸೂಚಿಯಿಂದ ಅಡ್ಡಿ ಆಗಿದೆ

ಪರಿಣಾಮ ಮಾಸಾಂತ್ಯದವರೆಗೂ ಬರ ಘೋಷಣೆ ಇಲ್ಲ. ಮುಂದೆ ಇನ್ನಷ್ಟು ತಾಲೂಕು ಸೇರ್ಪಡೆ ಸಾಧ್ಯತೆ

ಹೀಗಾಗಿ ನಿಯಮ ಸರಳೀಕರಣ ಮಾಡಿ ಎಂದು ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಬರಪೀಡಿತ ತಾಲೂಕುಗಳ ಘೋಷಣೆ: ಸಚಿವ ಪರಂ

ಕೇಂದ್ರದ ನಿಯಮವೇ ಅಡ್ಡಿ

ಶಾಸಕರ ಒತ್ತಾಯದ ಹೊರತಾಗಿಯೂ ಈಗಲೇ ಬರಪೀಡಿತ ಪ್ರದೇಶಗಳ ಘೋಷಣೆ ಸಾಧ್ಯವಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಘೋಷಣೆ. ಬಳಿಕ ಕೇಂದ್ರಕ್ಕೂ ವರದಿ ಸಲ್ಲಿಸಿ ಬರ ಪರಿಹಾರಕ್ಕೆ ಮನವಿ ಮಾಡಲಾಗುವುದು.

ಜಿ.ಪರಮೇಶ್ವರ್‌, ಕಂದಾಯ ಸಚಿವ