ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ರಾಜ್ಯದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಪ್ರಕ್ರಿಯೆಯ ಪ್ರಮುಖ ಹಂತ ಮುಕ್ತಾಯದ ಬೆನ್ನಲ್ಲೇ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟಿಸಿದೆ.

ಬೆಂಗಳೂರು : ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ರಾಜ್ಯದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಪ್ರಕ್ರಿಯೆಯ ಪ್ರಮುಖ ಹಂತ ಮುಕ್ತಾಯದ ಬೆನ್ನಲ್ಲೇ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟಿಸಿದೆ.

ಪತ್ರಿಕಾಗೋಷ್ಠಿ ನಡೆಸಿ ಕರಡು ಮತದಾರರ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌, ಎಸ್‌ಐಆರ್‌ ಪೂರ್ವದಲ್ಲಿ ರಾಜ್ಯದಲ್ಲಿ 5.54 ಕೋಟಿ ಮತದಾರರು ಇದ್ದರು. ಪರಿಷ್ಕರಣೆ ಬಳಿಕ ಈಗ 4.46 ಕೋಟಿ ಮತದಾರರ ಹೆಸರನ್ನು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ. ಈ 4.46 ಕೋಟಿ ಮತದಾರರ ಪೈಕಿ 2.21 ಕೋಟಿ ಪುರುಷರು, 2.24 ಕೋಟಿ ಮಹಿಳೆಯರು, 2,871 ಇತರೆ ಮತದಾರರು ಇದ್ದಾರೆ. ಎಸ್‌ಐಆರ್‌ ವೇಳೆ 1.07 ಕೋಟಿ ಮತದಾರರ (ಎಎಸ್‌ಡಿಡಿಒ) ಹೆಸರು ವೋಟರ್‌ಗಳ ಪಟ್ಟಿಯಿಂದ ಡಿಲೀಟ್‌ ಆಗಿದೆ ಎಂದು ತಿಳಿಸಿದರು.

ಈ 4.46 ಕೋಟಿ ಮತದಾರರ ಪೈಕಿ ನೋ ಮ್ಯಾಪಿಂಗ್‌- 23.45 ಲಕ್ಷ ಮತ್ತು ತಾರ್ಕಿಕ ವ್ಯತ್ಯಾಸ (ಅನೋಮಲಿಸ್‌) 20.35 ಲಕ್ಷ ಸೇರಿ ಒಟ್ಟು 43.81 ಲಕ್ಷ ಮತದಾರರಿಗೆ ನೋಟಿಸ್‌ ನೀಡಲಾಗುತ್ತದೆ. ಆ.24ರಿಂದ ಸೆ.23ರವರೆಗೆ ಈ ಕರಡು ಮತದಾರರ ಪಟ್ಟಿ ಸಂಬಂಧ ಕ್ಲೇಮ್‌ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಜೊತೆಗೆ ಆ.24ರಿಂದ ಅ.22ರವರೆಗೆ ನೋಟಿಸ್‌/ ಕ್ಲೈಮು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ಹೇಳಿದರು.

ನೋಟಿಸ್‌ ಪ್ರಕ್ರಿಯೆ ಹೇಗೆ?:

ರಾಜ್ಯದಲ್ಲಿ 224 ಮತದಾರರ ನೋಂದಣಾಧಿಕಾರಿ(ಇಆರ್‌ಒ), 332 ಸಹಾಯಕ ಮತದಾರರ ನೋಂದಣಾಧಿಕಾರಿಗಳು(ಎಇಆರ್‌ಒ) ಇದ್ದಾರೆ. ಇದೀಗ ನೋಟಿಸ್‌ ಹಂತದಲ್ಲಿ 3,926 ಹೆಚ್ಚುವರಿ ಎಇಆರ್‌ಒಗಳನ್ನು ನೇಮಿಸಿಕೊಳ್ಳಲಾಗಿದೆ. ಇವರು 43.81 ಲಕ್ಷ ನೋಟಿಸ್‌ ಜನರೇಟ್‌ ಮಾಡಲಿದ್ದಾರೆ. ಈ ನೋಟಿಸ್‌ಗಳನ್ನು ಬೂತ್‌ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮತದಾರರಿಗೆ ಖುದ್ದು ತಲುಪಿಸಲಿದ್ದಾರೆ.

ಈ ನೋಟಿಸ್‌ನಲ್ಲಿ ವಿಚಾರಣೆ ದಿನಾಂಕ, ಸಮಯ, ಸ್ಥಳದ ಮಾಹಿತಿ ಇರಲಿದೆ. ಯಾವ ಕಾರಣಕ್ಕೆ ನೋಟಿಸ್‌ ನೀಡಲಾಗಿದೆ? ವಿಚಾರಣೆ ವೇಳೆ ಯಾವ ದಾಖಲೆ ಸಲ್ಲಿಸಬೇಕು ಎಂದು ಉಲ್ಲೇಖಿಸಲಾಗಿರುತ್ತದೆ. ನಿಗದಿತ ದಿನಾಂಕದಂದು ಇಆರ್‌ಒ ಗ್ರಾಮ ಪಂಚಾಯಿತಿ ಅಥವಾ ಮತಗಟ್ಟೆಗೆ ಆಗಮಿಸಲಿದ್ದಾರೆ. ಅಂದು ನೋಟಿಸ್‌ ಪಡೆದ ಮತದಾರರು ಖುದ್ದು ಹಾಜರಾಗಿ ನಿಗದಿತ ದಾಖಲೆ ಸಲ್ಲಿಸಬೇಕು.

ಮೇಲ್ಮನವಿಗೆ ಅವಕಾಶ:

ಇಆರ್‌ಒಗಳು ಆ ದಾಖಲೆಗಳನ್ನು ಜಿಲ್ಲಾ ಚುನಾವಣಾಧಿಕಾರಿ(ಡಿಇಒ)ಗೆ ಕಳುಹಿಸಲಿದ್ದಾರೆ. ಈ ಡಿಇಒ ಆ ದಾಖಲೆಗಳನ್ನು ಪರಿಶೀಲಿಸಿ ಪುನಃ ಇಆರ್‌ಒಗೆ ಕಳುಹಿಸಲಿದ್ದಾರೆ. ದಾಖಲೆಗಳು ಸರಿ ಇದ್ದಲ್ಲಿ ಮತದಾರರನ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಿದ್ದಾರೆ. ಇಆರ್‌ಒ ಏನಾದರೂ ತಕರಾರು ತೆಗೆದಲ್ಲಿ ಏಳು ದಿನದೊಳಗೆ ಡಿಇಒಗೆ ಮೇಲ್ಮನವಿ ಸಲ್ಲಿಸಬಹುದು. ಡಿಇಒ ಸಹ ತಕರಾರು ತೆಗೆದಲ್ಲಿ 30 ದಿನದೊಳಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ (ಸಿಇಒ) ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

ಎಎಸ್‌ಡಿಡಿಒ ಮತದಾರರು ಏನು ಮಾಡಬೇಕು?

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ 1.07 ಕೋಟಿ ಮತದಾರರನ್ನು ಎಎಸ್‌ಡಿಡಿಒ ಎಂದು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಈ ಪೈಕಿ ಗೈರು, ಸ್ಥಳಾಂತರ, ಇತರೆ ವರ್ಗದ ಮತದಾರರು ಹೊಸದಾಗಿ ನಿಗದಿತ ದಾಖಲೆಗಳೊಂದಿಗೆ ಫಾರ್ಮ್‌ 6 ಭರ್ತಿ ಮಾಡಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಬಹುದು. ಅ.22ರೊಳಗೆ ಸಲ್ಲಿಕೆ ಮಾಡಿದರೆ, ಅ.27ರಂದು ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟವಾಗಲಿದೆ. ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕವೂ ಫಾರ್ಮ್‌ 6 ಸಲ್ಲಿಕೆ ಮಾಡಲು ಅವಕಾಶವಿದೆ. ಅ.1ಕ್ಕೆ 18 ವರ್ಷ ಪೂರೈಸಿದ ಯುವ ಮತದಾರರು ವಯಸ್ಸಿನ ಮತ್ತು ಪೌರತ್ವದ ದಾಖಲೆಗಳೊಂದಿಗೆ ಫಾರ್ಮ್‌ 6 ಭರ್ತಿ ಮಾಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು.

ಕರಡು ಮತದಾರರ ಪಟ್ಟಿ: ಮತದಾರರ ವಯೋಮಾನ

ವಯಸ್ಸು ಪುರುಷ ಮಹಿಳೆ ತೃತೀಯಲಿಂಗಿ ಒಟ್ಟು

18-19 1,98,422 1,71,910 9 3,70,341

20-29 43,87,276 39,99,875 729 83,87,880

30-39 51,11,459 50,47,065 1,115 1,01,59,639

40-49 46,37,353 47,11,829 594 93,49,776

50-59 37,22,651 38,58,043 248 75,80,942

60-69 23,82,881 26,81,308 105 50,64,294

70-79 12,91,633 14,40,787 52 27,32,472

80-89 3,71,152 4,72,874 18 8,44,044

90 ಪ್ಲಸ್‌ 56,241 89,978 1 1,46,220

ಕರಡು ಮತದಾರರ ಪಟ್ಟಿ: ಮತದಾರರ ಮಾಹಿತಿ

ಸಾಮಾನ್ಯ ಮತದಾರರು 2,21,59,240(ಪುರುಷರು) 2.24,73,864(ಮಹಿಳೆಯರು) 2,871(ಇತರೆ) 4,46,35,975(ಒಟ್ಟು)

ಯುವ ಮತದಾರರು(18-19) 1,98,422 1,71,910 9 3,70,341

20-29 ವರ್ಷದ ಮತದಾರರು 43,87,276 39,99,875 729 83,87,880

ವಿಶೇಷ ಚೇತನ ಮತದಾರರು 3,21,600 2,34,056 35 5,55,691

85 ಪ್ಲಸ್‌ ವಯಸ್ಸಿನ ಮತದಾರರು 1,62,692 2,29,606 4 3,92,302

ಎನ್‌ಆರ್‌ಐ ಮತದಾರರು 696 255 0 951

ಸೇವಾ ಮತದಾರರು 42,487 1,689 0 44,176

ಯಾವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಡಿಲೀಟ್‌:

ಬೆಂಗಳೂರು ನಗರ 17.17 ಲಕ್ಷ

ಬಿಬಿಎಂಪಿ ದಕ್ಷಿಣ 10.58 ಲಕ್ಷ

ಬಿಬಿಎಂಪಿ ಉತ್ತರ 10.52 ಲಕ್ಷ

ಬಿಬಿಎಂಪಿ ಕೇಂದ್ರ 8.60 ಲಕ್ಷ

ಮೈಸೂರು 5.57 ಲಕ್ಷ

ಕಲಬುರಗಿ 5.21 ಲಕ್ಷ

ಬೆಳಗಾವಿ 5.13 ಲಕ್ಷ

ಯಾವ ಜಿಲ್ಲೆಗಳಲ್ಲಿ ಅತಿ ಕಡಿಮೆ ಡಿಲೀಟ್‌:

ಕೊಡಗು 62,854

ಉಡುಪಿ 63,331

ಚಾಮರಾಜನಗರ 88,275

1,873 ಮತಗಟ್ಟೆ ಹೆಚ್ಚಳ:

ಎಸ್ಐಆರ್‌ ಪ್ರಕ್ರಿಯೆ ಪೂರ್ವದಲ್ಲಿ ರಾಜ್ಯದಲ್ಲಿ 21,520 ನಗರ ಮತಗಟ್ಟೆಗಳು ಮತ್ತು 37,530 ಗ್ರಾಮೀಣ ಮತಗಟ್ಟೆ ಸೇರಿ ಒಟ್ಟು 59,050 ಮತಗಟ್ಟೆಗಳಿದ್ದವು. ಇದೀಗ ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ 21,862 ನಗರ ಮತಗಟ್ಟೆಗಳು ಮತ್ತು 39,061 ಗ್ರಾಮೀಣ ಮತಗಟ್ಟೆ ಸೇರಿ ಒಟ್ಟು 60,923 ಮತಗಟ್ಟೆಗಳಿವೆ. ಅಂದರೆ, 342 ನಗರ ಮತಗಟ್ಟೆ ಮತ್ತು 1,531 ಗ್ರಾಮೀಣ ಮತಗಟ್ಟೆ ಸೇರಿ ಒಟ್ಟು 1,873 ಮತಗಟ್ಟೆಗಳು ಹೆಚ್ಚಳವಾಗಿವೆ.

ಅತಿಹೆಚ್ಚು ನೋಟಿಸ್‌ ಯಾವ ಜಿಲ್ಲೆಗಳಿಗೆ?

ಜಿಲ್ಲೆ ನೋಟಿಸ್‌

ಬೆಂಗಳೂರು ನಗರ 9.46 ಲಕ್ಷ

ಬಿಬಿಎಂಪಿ ಉತ್ತರ 6.13 ಲಕ್ಷ

ಬಿಬಿಎಂಪಿ ಕೇಂದ್ರ 4.29 ಲಕ್ಷ

ಬಿಬಿಎಂಪಿ ದಕ್ಷಿಣ 4.17 ಲಕ್ಷ

ದಕ್ಷಿಣ ಕನ್ನಡ 1.50 ಲಕ್ಷ

ಮಂಡ್ಯ 1.50 ಲಕ್ಷ

ಕೋಲಾರ 1.42 ಲಕ್ಷ

ಮೈಸೂರು 1.28 ಲಕ್ಷ

ತುಮಕೂರು 1.11 ಲಕ್ಷ

ಕಲಬುರಗಿ 1.05 ಲಕ್ಷ

ಅತಿಕಡಿಮೆ ನೋಟಿಸ್‌?

ಜಿಲ್ಲೆ ನೋಟಿಸ್‌

ದಾವಣಗೆರೆ 7,088

ಚಾಮರಾಜನಗರ 7,480

ಕೊಪ್ಪಳ 14,399

4.73 ಲಕ್ಷ ಫಾರ್ಮ್‌ 6 ಸಲ್ಲಿಕೆ:

ರಾಜ್ಯದಲ್ಲಿ 2026ರ ಜೂ.16ರಿಂದ 2026ರ ಆ.23ರ ವರೆಗೆ 4,73,354 ಮಂದಿ ಫಾರ್ಮ್‌ 6, 3,880 ಮಂದಿ ಫಾರ್ಮ್‌ 6ಎ, 67,307 ಮಂದಿ ಫಾರ್ಮ್‌ 7, 9,23,388 ಮಂದಿ ಫಾರ್ಮ್‌ 8 ಸೇರಿದಂತೆ ಒಟ್ಟು 14,67,929 ಮಂದಿ ವಿವಿಧ ಫಾರ್ಮ್‌ ಸಲ್ಲಿಸಿದ್ದಾರೆ.

ಕರಡು ಮತ ಪಟ್ಟಿ ಎಲ್ಲಿ ಸಿಗುತ್ತೆ?

ಸಾರ್ವಜನಿಕರು https://www.ceo.karnataka.gov.in ಅಥವಾ ECINET ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಕರಡು ಮತದಾರರ ಪಟ್ಟಿ ವೀಕ್ಷಿಸಬಹುದು.

ಮರು ಸೇರ್ಪಡೆ ಹೇಗೆ?

ಗೈರು, ಸ್ಥಳಾಂತರ, ಇತರೆ ವರ್ಗದ ಮತದಾರರು ಹೊಸದಾಗಿ ನಿಗದಿತ ದಾಖಲೆಗಳೊಂದಿಗೆ ಫಾರ್ಮ್‌ 6 ಭರ್ತಿ ಮಾಡಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಬಹುದು. ಅ.22ರೊಳಗೆ ಸಲ್ಲಿಕೆ ಮಾಡಿದರೆ, ಅ.27ರಂದು ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟವಾಗಲಿದೆ.