ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಇ.ಡಿ. ದಾಳಿ ಬೆನ್ನಲ್ಲೇ ಕೆಪಿಎಸ್ಸಿ ಮಾಜಿ ಪರೀಕ್ಷಾ ನಿಯಂತ್ರಕ, ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಅವರು ರಾಜ್ಯ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ, ತುರ್ತು ರಜೆ ಪಡೆದು, ಮನೆಯನ್ನೂ ಭಾಗಶಃ ಖಾಲಿ ಮಾಡಿ ಪರಾರಿಯಾಗಿದ್ದಾರೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ.)ದ ದಾಳಿ ಬೆನ್ನಲ್ಲೇ ಕೆಪಿಎಸ್ಸಿ ಮಾಜಿ ಪರೀಕ್ಷಾ ನಿಯಂತ್ರಕ, ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಅವರು ರಾಜ್ಯ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ, ತುರ್ತು ರಜೆ ಪಡೆದು, ಮನೆಯನ್ನೂ ಭಾಗಶಃ ಖಾಲಿ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಜ್ಞಾನೇಂದ್ರ ಕುಮಾರ್‌ ಆ.19ರಂದು ತುರ್ತು ರಜೆ ಕೋರಿ ಎಂಎಸ್‌ಎಂಇ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ವಯಸ್ಸಾದ ತಂದೆಗೆ ಆ.14ರಂದು ಮಧ್ಯಾಹ್ನ ಹೃದಯಸ್ತಂಭನ ಸಂಭವಿಸಿದೆ. ಪ್ರಸ್ತುತ ಅವರು ತೀವ್ರ ನಿಗಾ ಘಟಕದಲ್ಲಿದ್ದಾರೆ. ನಾಳೆ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಅವರ ಆರೋಗ್ಯ ಗಂಭೀರವಾಗಿರುವುದರಿಂದ ನಾನು ಅವರೊಂದಿಗೆ ಇರಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ನನಗೆ 15 ದಿನ ತುರ್ತು ರಜೆ ಮಂಜೂರು ಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದರು.

ಹೀಗೆ ತುರ್ತು ರಜೆ ಪಡೆದ ಜ್ಞಾನೇಂದ್ರ ಕುಮಾರ್‌, ಉತ್ತರಪ್ರದೇಶದ ಸ್ವಂತ ಊರಿಗೂ ಹೋಗಿಲ್ಲ. ಮೊಬೈಲ್‌ ಸ್ವಿಚ್ಡ್‌ ಆಫ್ ಮಾಡಿಕೊಂಡಿರುವ ಅವರು ಸದ್ಯಕ್ಕೆ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆ.20ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿದ ಜ್ಞಾನೇಂದ್ರ ಕುಮಾರ್‌ ಬಳಿಕ ಎಲ್ಲಿಗೆ ಹೋದರು ಎಂಬುದು ನಿಗೂಢವಾಗಿದೆ.

ಹಳೇ ಬಟ್ಟೆ, ಫರ್ನಿಚರ್‌ ಬಿಟ್ಟರೆ ಬೇರೇನಿಲ್ಲ:

ಕೆಪಿಎಸ್ಸಿ ನೇಮಕಾತಿ ಹಗರಣ ಸಂಬಂಧ ಇ.ಡಿ.ಅಧಿಕಾರಿಗಳು ಭಾನುವಾರ ಜ್ಞಾನೇಂದ್ರ ಕುಮಾರ್‌ ಅವರ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆಸಿದ್ದರು. ಮನೆಯಲ್ಲಿ ಯಾರೂ ಇಲ್ಲದ ಪರಿಣಾಮ ಬೀಗ ಹಾಕಿತ್ತು. ಈ ವೇಳೆ ನ್ಯಾಯಾಲಯದಿಂದ ಆದೇಶ ತಂದು ಬೀಗ ಒಡೆದು ಮನೆ ಪ್ರವೇಶಿಸಿದ ಇ.ಡಿ. ಅಧಿಕಾರಿಗಳು, ಸೋಮವಾರ ಮುಂಜಾನೆವರೆಗೂ ತಲಾಶ್‌ ನಡೆಸಿದ್ದಾರೆ. ಈ ವೇಳೆ ಹಳೇ ಬಟ್ಟೆ, ಪೀಠೋಪಕರಣಗಳು ಬಿಟ್ಟರೆ ಬೇರೆ ಯಾವುದೇ ವಸ್ತುಗಳು ಮನೆಯಲ್ಲಿ ಪತ್ತೆಯಾಗಿಲ್ಲ.

ದಾಖಲೆಗಳೊಂದಿಗೆ ಎಸ್ಕೇಪ್‌?:

ಜ್ಞಾನೇಶ್‌ ಕುಮಾರ್‌ ಬೆಂಗಳೂರಿನಿಂದ ಹೊರಡುವಾಗ ಮನೆಯಲ್ಲಿದ್ದ ಲ್ಯಾಪ್‌ಟಾಪ್‌, ಮೊಬೈಲ್‌ಗಳು, ಕೆಲವು ಕಡತಗಳು, ದಾಖಲೆಗಳು ಸೇರಿದಂತೆ ಪ್ರಮುಖ ವಸ್ತುಗಳನ್ನು ಕೊಂಡೊಯ್ದಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಮನೆ ತಪಾಸಣೆ ವೇಳೆ ಇ.ಡಿ. ಅಧಿಕಾರಿಗಳಿಗೆ ಮಹತ್ವದ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಹೀಗಾಗಿ ದಾಳಿ ಅಂತ್ಯಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇ.ಡಿ. ಅಧಿಕಾರಿಗಳು ಜ್ಞಾನೇಂದ್ರ ಕುಮಾರ್ ಅವರ ಮನೆ ಬಾಗಿಲಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಅಂಟಿಸಿದ್ದಾರೆ. ಕೆಪಿಎಸ್‌ಸಿಯ ಪಶುವೈದ್ಯಾಧಿಕಾರಿ ಪರೀಕ್ಷೆ ಸಂಬಂಧ ನಡೆದಿರುವ ಅಕ್ರಮಗಳ ಕುರಿತು ಆ.26ರಂದು ಬೆಳಗ್ಗೆ 11 ಗಂಟೆಗೆ ಖುದ್ದು ಶಾಂತಿನಗರದ ಇ.ಡಿ. ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ಲಖನೌ ನಿವಾಸದ ಮೇಲೂ ದಾಳಿ:

ಇ.ಡಿ. ಅಧಿಕಾರಿಗಳು ಭಾನುವಾರ ಜ್ಞಾನೇಂದ್ರ ಕುಮಾರ್ ಅವರ ಸ್ವಂತ ಊರಾದ ಉತ್ತರಪ್ರದೇಶದ ಲಖನೌ ನಿವಾಸದ ಮೇಲೂ ದಾಳಿ ನಡೆಸಿದ್ದರು. ಈ ದಾಳಿ ವೇಳೆ ಮನೆಯಲ್ಲಿ ವೃದ್ಧ ತಂದೆ, ಅವರ ಕೇರ್‌ ಟೇಕರ್ ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಕುಟುಂಬ ಸದಸ್ಯರು ಕೂಡ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಹೀಗಾಗಿ ವೃದ್ಧ ತಂದೆ ಅವರ ಹೇಳಿಕೆ ದಾಖಲಿಸಿಕೊಂಡು ದಾಳಿ ಅಂತ್ಯಗೊಳಿಸಿದ್ದಾರೆ. ಅಧಿಕಾರಿ ಮತ್ತು ಅವರ ಕುಟುಂಬ ಸದಸ್ಯರ ಸ್ಥಿರಾಸ್ತಿ ಮತ್ತು ಚರಾಸ್ತಿ, ಬ್ಯಾಂಕ್‌ ದಾಖಲೆಗಳು ಸೇರಿ ಆರ್ಥಿಕ ಸ್ಥಿತಿಗತಿ ಬಗ್ಗೆ ದಾಖಲೆ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಮಗ ಇಲ್ಲಿಗೆ ಬಂದಿಲ್ಲ ಎಂದ ತಂದೆ:

ಇ.ಡಿ. ಅಧಿಕಾರಿಗಳು ಜ್ಞಾನೇಂದ್ರ ಕುಮಾರ್‌ ಅವರ ತಂದೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ತಮ್ಮ ಮಗ ಇಲ್ಲಿಗೆ ಬಂದಿಲ್ಲ. ಮೊಬೈಲ್‌ ಸ್ವಿಚ್ಡ್‌ ಆಫ್‌ ಬರುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಕರೆ ಮಾಡಿ ಮಾತನಾಡಿದ್ದರು. ನಂತರ ನನಗೂ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ತಂದೆ ಅನಾರೋಗ್ಯದ ಕಾರಣ ನೀಡಿ ರಜೆ ಪಡೆದಿದ್ದ ಜ್ಞಾನೇಂದ್ರ ಕುಮಾರ್‌ ಇದೀಗ ಊರಿಗೂ ಹೋಗದೆ, ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕೆಪಿಎಸ್ಸಿಯಿಂದ ಅಮಾನತುಗೊಂಡ ಅಧ್ಯಕ್ಷ ಸಾಹುಕಾರ್‌ ಸೇರಿ ಹಲವರ ಮೇಲೆ ಇತ್ತೀಚೆಗೆ ಇ.ಡಿ ದಾಳಿ

ಅದರ ಬೆನ್ನಲ್ಲೇ ತಂದೆಗೆ ಅನಾರೋಗ್ಯ ಕಾರಣ ನೀಡಿ 15 ದಿನ ರಜೆ ಕೋರಿ ಅರ್ಜಿ ಸಲ್ಲಿಸಿದ್ದ ಜ್ಞಾನೇಂದ್ರ

ತಮ್ಮ ಮೇಲೂ ದಾಳಿ ಸಾಧ್ಯತೆ ಮನಗಂಡ ಎಐಎಸ್‌ ಅಧಿಕಾರಿ ದಿಢೀರ್ ಬೆಂಗಳೂರಿನಿಂದ ಪ್ರಯಾಣ

ಬೆಂಗಳೂರಿಂದ ದಿಲ್ಲಿಗೆ ತೆರಳಿದ ಬಳಿಕ ಮೊಬೈಲ್ ಸ್ವಿಚಾಫ್ ಮಾಡಿಕೊಂಡಿದ್ದರಿಂದ ಸಾಕಷ್ಟು ಗುಮಾನಿ

ರಜೆಗೆ ಕಾರಣ ಕೋರಿದಂತೆ ಉತ್ತರಪ್ರದೇಶದಲ್ಲಿನ ತಮ್ಮ ಹುಟ್ಟೂರಿಗೆ ತೆರಳದೇ ಅಧಿಕಾರಿ ನಾಪತ್ತೆ

ಲಖನೌದ ಜ್ಞಾನೇಂದ್ರ ಮನೆ ಮೇಲೆ ಇ.ಡಿ. ದಾಳಿ ವೇಳೆ ಅಲ್ಲಿ ಅವರ ತಂದೆ, ಕೇರ್‌ಟೇಕರ್‌ ಮಾತ್ರ ಪತ್ತೆ

ಬೆಂಗಳೂರಿಂದ ತೆರಳುವ ವೇಳೆ ಮನೆಯಲ್ಲಿನ ಬಹುತೇಕ ವಸ್ತು ಖಾಲಿ ಮಾಡಿದ್ದರಿಂದ ಭಾರೀ ಅನುಮಾನ