ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪಿ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಉಭಯ ಸದನಗಳಲ್ಲಿ ಸತತ 8ನೇ ದಿನವೂ ಪ್ರತಿಪಕ್ಷಗಳ ಮುಂದುವರೆದ ಪ್ರತಿಭಟನೆ, ಇದರ ನಡುವೆ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ
ವಿಧಾನಸಭೆ/ವಿಧಾನಪರಿಷತ್ತು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪಿ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಉಭಯ ಸದನಗಳಲ್ಲಿ ಸತತ 8ನೇ ದಿನವೂ ಪ್ರತಿಪಕ್ಷಗಳ ಮುಂದುವರೆದ ಪ್ರತಿಭಟನೆ, ಇದರ ನಡುವೆ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಘೋಷಣೆ, ಉಭಯ ಸದನಗಳಲ್ಲಿ ‘ನೋಟಿಸ್ ನೀಡಿ ಚರ್ಚೆಗೆ ಬಾರದ ರಣಹೇಡಿಗಳು’ ಎಂಬ ಆಡಳಿತ ಪಕ್ಷದವರ ಪ್ರತಿದಾಳಿಯಂತಹ ಹೈಡ್ರಾಮಾಗಳ ನಡುವೆಯೇ ಉಭಯ ಸದನಗಳ ಕಲಾಪಗಳು ಅನಿದಿಷ್ಟಾವಧಿಗೆ ಮುಂದೂಡಿಕೆ ಕಂಡಿವೆ.
ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ಅಧಿವೇಶನ ಆರಂಭವಾದ ದಿನದಿಂದಲೂ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಕಡೆ ಪ್ರತಿಭಟನೆ ನಡೆಸಿಕೊಂಡು ಬಂದ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು, ವಿಧಾನಸಭೆಯಲ್ಲಿ ಸೋಮವಾರ ಬೆಳಗ್ಗೆ ಅಹೋರಾತ್ರಿ ಧರಣಿ ಆರಂಭಿಸುವುದಾಗಿ ಘೋಷಿಸಿದರು. ಇದರಿಂದ ರಾಜ್ಯ ಸರ್ಕಾರ ಬಾಕಿ ಇದ್ದ ಕಾರ್ಯಕಲಾಪಗಳನ್ನೆಲ್ಲಾ ಸೋಮವಾರ ಒಂದೇ ದಿನ ಮುಗಿಸಿಕೊಂಡಿತು. ಬಳಿಕ ವಿಧಾನಮಂಡಲದ ಉಭಯ ಸದನಗಳ ಕಲಾಪಕ್ಕೆ ನಿಗದಿಗಿಂತ ಮೂರು ದಿನ ಮೊದಲೇ ತೆರೆ ಎಳೆಯಲಾಯಿತು. ಆ.13ರಿಂದ 27ರವರೆಗೆ (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) 11 ದಿನಗಳ ಕಾಲ ನಿಗದಿಯಾಗಿದ್ದ ಅಧಿವೇಶನ 8ನೇ ದಿನವೇ ಅನಿರ್ದಿಷ್ಟಾವಧಿಗೆ ಮೂದೂಡಿಕೆಯಾಯಿತು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷಗಳು ಸಭಾಧ್ಯಕ್ಷರು, ಸಭಾಪತಿ ಅವರಿಂದ ನಮಗೆ ನ್ಯಾಯ ಸಿಗಲಿಲ್ಲ. ರಾಜ್ಯಪಾಲರ ಬಳಿಗೆ ದೂರು ಕೊಂಡೊಯ್ಯುತ್ತೇವೆ. ಜನತಾ ನ್ಯಾಯಾಲಯದ ಮುಂದೆ ಹೋರಾಟ ಮುಂದುವರೆಸುತ್ತೇವೆ ಎಂದು ಘೋಷಿಸಿದರು.
ಬಾವಿಗಿಳಿದು ಧರಣಿ:
ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಎರಡೂ ಸದನಗಳಲ್ಲಿ ಬಾವಿಗಿಳಿದು ಪ್ರತಿಭಟನೆ ಮುಂದುವರೆಸಿದ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಘೋಷಣೆ ಕೂಗಿದರು. ಈ ವೇಳೆ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದವೂ ನಡೆಯಿತು. ಈ ವೇಳೆ, ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಏಟಿಗೆ ಏದಿರೇಟು ನೀಡಿದ ಸಚಿವ ಕೃಷ್ಣ ಬೈರೇಗೌಡ, ಪ್ರತಿಪಕ್ಷದವರು ಚರ್ಚೆಗೆ ನೋಟಿಸ್ ನೀಡಲು ಯೋಗ್ಯತೆ ಇಲ್ಲದ ರಣಹೇಡಿಗಳು. ಧೈರ್ಯವಿದ್ದರೆ ನೋಟಿಸ್ ನೀಡಿ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು. ಆಗ ಆರ್.ಅಶೋಕ್, 187 ಕೋಟಿ ರು. ಲೂಟಿ ಹೊಡೆದು ಕಾಂಗ್ರೆಸ್‌ನವರೆಲ್ಲೂ ಹಂಚಿಕೊಂಡಿದ್ದಾರೆ. ಒಂದು ವಾರದಿಂದ ಪ್ರತಿಭಟನೆ ನಡೆಸಿದರೂ ಈ ಭಂಡ, ಭ್ರಷ್ಟ ಸರ್ಕಾರ ಸಚಿವ ನಾಗೇಂದ್ರ ರಾಜೀನಾಮೆ ಪಡೆಯುತ್ತಿಲ್ಲ. ನಾವು ಅಹೋರಾತ್ರಿ ಧರಣಿ ಮಾಡುತ್ತೇವೆ ಎಂದು ಘೋಷಿಸಿದರು.
ಪ್ರತಿಪಕ್ಷದವರ ಈ ಘೋಷಣೆಯ ಬೆನ್ನಲ್ಲೇ ಚುರುಕುಗೊಂಡ ಸರ್ಕಾರ, ಬೆಳಗಿನ ಅವಧಿಯಲ್ಲೇ ಉಭಯ ಸದನಗಳಲ್ಲಿ ಪ್ರಶ್ನೋತ್ತರ, ಶೂನ್ಯವೇಳೆ, ವಿವಿಧ ವಿಧೇಯಕಗಳ ಮಂಡನೆ ಪರ್ಯಾಲೋಚನೆ ಮತ್ತು ಅನುಮೋದನೆ ಪಡೆದುಕೊಂಡಿತು. ಭೋಜನ ವಿರಾಮದ ಬಳಿಕ ಉಭಯ ಸದನಗಳಲ್ಲೂ 2026-27ನೇ ಸಾಲಿನ 7042 ಕೋಟಿ ರು.ಗಳ ಪೂರಕ ಅಂದಾಜು ವಿಧೇಯಕ ಮಂಡಿಸಿ ಅನುಮೋದನೆ ಪಡೆಯಿತು. ಬರದ ಮೇಲಿನ ಚಚೆಗೂ ಸರ್ಕಾರ ಉತ್ತರ ನೀಡಿ ಮುಗಿಸಿತು.
ಭೋಜನವಿರಾಮದ ಬಳಿಕ ಮತ್ತೆ 3 ಗಂಟೆಗೆ ಆರಂಭವಾಗಬೇಕಿದ್ದ ವಿಧಾನಸಭೆ ಅಧಿವೇಶನ ಸಮಾವೇಶಗೊಂಡಿದ್ದು ಸಂಜೆ 4.30ಕ್ಕೆ ಈ ವೇಳೆ, ಸ್ವತಃ ಮುಖ್ಯಮಂತ್ರಿ ಅವರೇ ವಿಧಾನಸಭೆಗೆ ಹಾಜರಾಗಿ ಪ್ರತಿಭಟನೆ ನಡುವೆಯೇ 2026-27ನೇ ಸಾಲಿನ 7042 ಕೋಟಿ ರು.ಗಳ ಪೂರಕ ಅಂದಾಜು ವಿಧೇಯಕವನ್ನು ಮಂಡಿಸಿದರು. ಬಳಿಕ ಪರ್ಯಾಲೋಚನೆ ಮೂಲಕ ಅನುಮೋದನೆ ಕೋರಿದರು. ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಸಭಾಧ್ಯಕ್ಷರು ಧ್ವನಿಮತದ ಮೂಲಕ ಅದಕ್ಕೆ ಸದನದ ಒಪ್ಪಿಗೆ ಪಡೆದರು. ಬಳಿಕ ಕರ್ನಾಟಕ ಸಕಾಲ ಸೇವೆಗಳ ತಿದ್ದುಪಡಿ ವಿಧೇಯಕ 2026ಕ್ಕೂ ಒಪ್ಪಿಗೆ ಪಡೆಯಲಾಯಿತು.
ಆ ನಂತರ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಬರದ ಮೇಲಿನ ಚರ್ಚೆಗೆ ಗದ್ದಲದ ನಡುವೆಯೇ ಸುದೀರ್ಘ ಉತ್ತರ ನೀಡಿದರು. 15 ನಿಮಿಷ ಕಲಾಪ ಮುಂದೂಡಿದ ಸಭಾಧ್ಯಕ್ಷ ಜಿ.ಎಸ್.ಪಾಟೀಲ ಅವರು ನಂತರ ಸದನ ಸಮಾವೇಶಗೊಳ್ಳುತ್ತಿದ್ದಂತೆ ಮುಂಗಾರು ಅಧಿವೇಶನ ನಡೆದ ಎಂಟು ದಿನಗಳಲ್ಲಿ ನಡೆದ ಕಾರ್ಯಕಲಾಪಗಳ ವಿವರ, ವಿಧೇಯಕಗಳ ಅನುಮೋದನೆ ಕುರಿತು ವಿವರಣೆ ನೀಡಿ ಸದನದವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಬಳಿಕ ವಿಧಾನ ಪರಿಷತ್‌ಗೆ ತೆರಳಿದ ಮುಖ್ಯಮಂತ್ರಿ ಅವರು ಅಲ್ಲಿಯೂ ಪೂರಕ ಅಂದಾಜು ವಿಧೇಯಕ ಮಂಡಿಸಿ ಅನುಮೋದನೆ ಪಡೆದರು. ಉಪಮುಖ್ಯಮಂತ್ರಿ ಅವರು ಬರದ ಮೇಲಿನ ಚರ್ಚೆಗೆ ಉತ್ತರ ನೀಡಿದರು. ಬಳಿಕ ಸಭಾಪತಿ ಸಲೀಂ ಅಹ್ಮದ್ ಅವರು ಮುಂಗಾರು ಅಧಿವೇಶನದಲ್ಲಿ ಇದುವರೆಗೆ ನಡೆದ ಕಾರ್ಯಕಲಾಪಗಳ ವಿವರ ನೀಡಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
