ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರನ್ನು ಬೆಂಬಲಿಸಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಚಿವ ನಾಗೇಂದ್ರ ಬೆಂಬಲಿಗರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರನ್ನು ಬೆಂಬಲಿಸಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಚಿವ ನಾಗೇಂದ್ರ ಬೆಂಬಲಿಗರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸಚಿವ ನಾಗೇಂದ್ರ ಅವರು ಯಾವುದೇ ತಪ್ಪು ಮಾಡಿಲ್ಲ. ವಿನಾಕಾರಣ ವಾಲ್ಮೀಕಿ ಹಗರಣದಲ್ಲಿ ಸಿಲುಕಿಸಲಾಗುತ್ತಿದೆ. ಬಿಜೆಪಿಯವರು ಮಾಡುತ್ತಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ. ರಾಜಕೀಯವಾಗಿ ನಾಗೇಂದ್ರ ಅವರನ್ನು ಹತ್ತಿಕ್ಕುವ ಹುನ್ನಾರದಿಂದ ವಿನಾಕಾರಣ ಬಿಜೆಪಿ ನಾಯಕರು ಸದನದ ಒಳಗೆ ಹಾಗೂ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಬಳ್ಳಾರಿಯ ಬಿಜೆಪಿ ನಾಯಕರಾದ ಬಿ. ಶ್ರೀರಾಮುಲು, ಗಾಲಿ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಅವರು ರಾಜಕೀಯ ಅಸ್ತಿತ್ವ ಕಳೆದುಕೊಂಡಿದ್ದಾರೆ. ಸಚಿವ ನಾಗೇಂದ್ರ ಅವರು ರಾಜಕೀಯವಾಗಿ ಮುನ್ನೆಲೆಗೆ ಬಂದರೆ ತಾವು ಮೂಲೆಗುಂಪಾಗುವ ಭೀತಿಯಿಂದ ವಿನಾಕಾರಣ ನಾಗೇಂದ್ರ ಅವರ ವಿರುದ್ಧ ಇಲ್ಲ-ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆಪಾದಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಹಾಗೂ ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಮಾತನಾಡಿ, ಸಚಿವ ನಾಗೇಂದ್ರ ಅವರು ವಾಲ್ಮೀಕಿ ಸಮುದಾಯದ ರಾಜಕೀಯ ನಾಯಕರಾಗಿ ಬೆಳೆಯುತ್ತಿದ್ದಾರೆ. ಇದನ್ನು ಸಹಿಸದ ಪ್ರತಿಪಕ್ಷಗಳು ರಾಜಕೀಯ ಪ್ರೇರಿತವಾಗಿ ಹೋರಾಟ ನಡಸುತ್ತಿರುವುದು ಖಂಡನೀಯ. ಮಹರ್ಷಿ ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ನಾಗೇಂದ್ರ ಅವರು ಆರೋಪಿಯೇ ಹೊರತು, ಅಪರಾಧಿಯಲ್ಲ. ಬಿಜೆಪಿಯ ಅನೇಕ ನಾಯಕರ ಮೇಲೆ ಸಾಕಷ್ಟು ಆರೋಪಗಳಿವೆ. ಹಾಗಾದರೆ ಅವರು ರಾಜಿನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಮಾಜಿ ಬುಡಾ ಅಧ್ಯಕ್ಷ ಹುಮಾಯೂನ್ ಖಾನ್ ಮಾತನಾಡಿ, ವಾಲ್ಮೀಕಿ ನಾಯಕ ಎನಿಸಿಕೊಂಡಿದ್ದ ಶ್ರೀರಾಮುಲು ಅವರನ್ನು ಜನರು ಮರೆತು ಹೋಗಿದ್ದಾರೆ. ಹೀಗಾಗಿ, ಮತ್ತೆ ರಾಜಕೀಯವಾಗಿ ಗುರುತಿಸಿಕೊಳ್ಳಲು ನಾಗೇಂದ್ರ ವಿರುದ್ಧ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಜನಾರ್ದನ ರೆಡ್ಡಿ ಅವರು ಈ ಹಿಂದೆ ಅಕ್ರಮ ಗಣಿಗಾರಿಕೆ ಮಾಡಿ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದರು. ಜೈಲು ವಾಸ ಅನುಭವಿಸಿದರು. ಅವರಿಂದಾಗಿಯೇ ಬಳ್ಳಾರಿ ಹೆಸರು ಹಾಳಾಯಿತು. ಇದೀಗ ಅವರ ಬಾಯಲ್ಲಿ ಭ್ರಷ್ಟಾಚಾರ ವಿರೋಧಿ ಮಾತುಗಳು ಬರುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.

ನಗರದ ಇಂದಿರಾ ವೃತ್ತದಿಂದ ಮೆರವಣಿಗೆ ಆರಂಭಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಗೇಂದ್ರ ಬೆಂಬಲಿಗರು ಗಡಗಿಚನ್ನಪ್ಪ ವೃತ್ತದಲ್ಲಿ ಕೆಲ ಹೊತ್ತು ಧರಣಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರುಗಿನ ಗಾಂಧಿ ಪ್ರತಿಮೆಗೆ ಬಳಿ ಸಮಾವೇಶಗೊಂಡರು. ಇದೇ ವೇಳೆ ಪಕ್ಷದ ಜಿಲ್ಲಾ ಪ್ರಮುಖರು ಮಾತನಾಡಿದರು.

ಮೇಯರ್ ಪಿ. ಗಾದೆಪ್ಪ, ಪಕ್ಷದ ಹಿರಿಯ ಮುಖಂಡ ಎಲ್. ಮಾರೆಣ್ಣ, ಬುಡಾ ಅಧ್ಯಕ್ಷ ಆಂಜಿನೇಯಲು, ಬೋಯಪಾಟಿ ವಿಷ್ಣುವರ್ಧನ, ವೆಂಕಟೇಶ್ ಹೆಗಡೆ, ಬಿ.ರಾಮ್ ಪ್ರಸಾದ್, ಅಯಾಜ್ ಅಹ್ಮದ್, ಗೋನಾಳ್ ನಾಗಭೂಷಣಗೌಡ, ವಿವೇಕ್ (ವಿಕ್ಕಿ), ಜಗನ್‌, ಕೌಲ್‌ಬಜಾರ್ ಸೋಮು ಸೇರಿದಂತೆ ಸಾವಿರಕ್ಕೂ ಅಧಿಕ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.