ಮಳೆ ಕೊರತೆಯಿಂದ ಜಿಲ್ಲೆಯ ಮುಂಗಾರು ಬೆಳೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಹಾವೇರಿ ಜಿಲ್ಲೆಯನ್ನು ತಕ್ಷಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ರೈತರ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿನ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಹಾವೇರಿ: ಮಳೆ ಕೊರತೆಯಿಂದ ಜಿಲ್ಲೆಯ ಮುಂಗಾರು ಬೆಳೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಹಾವೇರಿ ಜಿಲ್ಲೆಯನ್ನು ತಕ್ಷಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ರೈತರ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿನ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ನಗರದ ತೇರು ಬೀದಿಯ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಎಂ.ಎಂ. ವೃತ್ತದ ಮೂಲಕ ಸಾಗಿ ಮೈಲಾರ ಮಹದೇವಪ್ಪ ವೃತ್ತಕ್ಕೆ ಆಗಮಿಸಿ ಅಲ್ಲಿ ರೈತರು ಧರಣಿ ಸತ್ಯಾಗ್ರಹ ಆರಂಭಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 2,39,393 ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ, ಸೋಯಾಬಿನ್, ಭತ್ತ, ಜೋಳ, ರಾಗಿ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಈ ಪೈಕಿ 2,29,113 ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಬೆಳೆಯಲಾಗಿದ್ದು, ಮಳೆ ಕೊರತೆಯಿಂದ ತೆನೆ ಕಟ್ಟುವ ಹಂತ ತಲುಪಿಲ್ಲ. ಲದ್ದಿ ಹುಳದ ಬಾಧೆಯೂ ರೈತರನ್ನು ಕಾಡುತ್ತಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಬೆಳೆ ಕೈಕೊಟ್ಟರೆ ಸಾಲ ತೀರಿಸುವುದು ಹೇಗೆ ಎಂಬ ಆತಂಕದಲ್ಲಿದ್ದಾರೆ. ಸರಕಾರ ಕೂಡಲೇ ಸಮಗ್ರ ಬೆಳೆ ಸಮೀಕ್ಷೆ ನಡೆಸಿ, ಹಾವೇರಿ ಜಿಲ್ಲೆ ಬರ ಪೀಡಿತ ಎಂದು ಘೋಷಿಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿನ ರೈತರ ಬೆಳೆ ಸಾಲವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನ್ನಾ ಮಾಡಬೇಕು. ಖಾಸಗಿ ಫೈನಾನ್ಸಗಳು ಸಾಲ ವಸೂಲಿ ಮಾಡುವುದನ್ನು ಸ್ಥಗಿತಗೊಳಿಸಬೇಕು. ರೈತರಿಗೆ ಸಾಲ ಮರುಪಾವತಿಸುವಂತೆ ನೋಟಿಸ್ ನೀಡುವುದನ್ನೂ ನಿಲ್ಲಿಸಬೇಕು. ಒಂದೇ ತಿಂಗಳಲ್ಲಿ ಜಿಲ್ಲೆಯ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕಕಾರಿ. ಸರಕಾರ ಇನ್ನಾದರೂ ಎಚ್ಚೆತ್ತು ರೈತರ ನೆರವಿಗೆ ಧಾವಿಸಬೇಕು ಎಂದು ದೀವಿಗಿಹಳ್ಳಿ ಒತ್ತಾಯಿಸಿದರು.

ಮೂಲಸೌಕರ್ಯಕ್ಕೆ ಆಗ್ರಹ: ಹಿರೇಕೆರೂರು ತಾಲೂಕಿನ ಚನ್ನಳ್ಳಿ ಗ್ರಾಪಂ ವ್ಯಾಪ್ತಿಯ ಕಲ್ಯಾಣನಗರದ ದೇವದಾಸಿ ಕಾಲೋನಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಸಾತೇನಹಳ್ಳಿಯ ಐತಿಹಾಸಿಕ ಶ್ರೀ ಶಾಂತೇಶ್ವರ ದೇವಸ್ಥಾನ ಹಾಗೂ ಶಿವಾಲಿ ಮೂಕಪ್ಪಸ್ವಾಮಿಗಳ ಮಠಕ್ಕೆ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು. ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನಲ್ಲಿ ಮಹರ್ಷಿ ವಾಲ್ಮೀಕಿ ವಸತಿ ಶಾಲೆಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಚಂದ್ರಶೇಖರ ಕುದರಿಹಾಳ, ಬಿ.ಡಿ. ಪಾಟೀಲ, ಶಿವಪ್ಪ ಜವನರ, ಬಸವರಾಜ ಕೆಳಗಿನಮನಿ, ಚಂದ್ರು ಕೋಟಿಹಾಳ, ರವಿ ಮಾಳಗೇರ, ಚಂದ್ರಯ್ಯ ಹಿರೇಮಠ, ಹರೀಶಕುಮಾರ ಮೇಲ್ಮುರಿ, ಶಂಕ್ರಪ್ಪ ತಳವಾರ, ಮಲ್ಲನಗೌಡ ಸಾತೇನಹಳ್ಳಿ, ಲೋಕಪ್ಪ ಮುಚುಡಿ, ಹಾಲಪ್ಪ ಜಾಡರ, ಪ್ರಕಾಶ ಕಿಟ್ಟದ, ಗಂಗಮ್ಮ ಜಿ.ಎ., ಮಲ್ಲೇಶ ಹನುಮನಹಳ್ಳಿ, ರಮೇಶ ಬಂಡಿವಡ್ಡರ, ಲಲಿತಾ ಲಮಾಣಿ, ವಿನಾಯಕ ಪೂಜಾರ, ದೇವರಾಜ ಮಾನೇರ, ರಂಗಪ್ಪ ದಾಸರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.