ಶಿಗ್ಗಾಂವಿ: ರಾಷ್ಟ್ರಧ್ವಜ ಕೇವಲ ಮೂರು ಬಣ್ಣಗಳ ಸಂಕೇತವಲ್ಲ. ಅದು ದೇಶದ ಸ್ವಾತಂತ್ರ‍್ಯ, ತ್ಯಾಗ, ಶೌರ್ಯ ಹಾಗೂ ಏಕತೆಯ ಪ್ರತೀಕವಾಗಿದೆ. ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಪ್ರಾಂಶಪಾಲೆ ಸೌಮ್ಯ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಫಿನಿಕ್ಸ್ ಇಂಟರನ್ಯಾಶನಲ್ ಸಮೂಹ ಸಂಸ್ಥೆಯ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹಿತ ಪಟ್ಟಣದ ಅಂಚೆ ಕಚೇರಿಯಿಂದ ಹಿಡಿದು ಪ್ರಮುಖ ಬೀದಿಗಳಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶಭಕ್ತಿ ಹಾಗೂ ರಾಷ್ಟ್ರಾಭಿಮಾನ ಸಾರುವ ಉದ್ದೇಶದಿಂದ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ದೇಶಭಕ್ತಿಯ ಜಾಗೃತಿ ಮೂಡಿಸುತ್ತಿದೆ. ಯುವಕರು ದೇಶದ ಭವಿಷ್ಯದ ಶಕ್ತಿಯಾಗಿದ್ದು, ಶಿಕ್ಷಣದ ಜೊತೆಗೆ ದೇಶಪ್ರೇಮ, ಶಿಸ್ತು, ಸಂಸ್ಕಾರ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಶಿಕ್ಷಕ ಗದಿಗೇಶ ಮಾತನಾಡಿ, ಸ್ವಾತಂತ್ರ್ಯವೆಂದರೆ ಕೇವಲ ರಾಜಕೀಯ ಸ್ವಾತಂತ್ರ‍್ಯವಲ್ಲ. ಪ್ರತಿಯೊಬ್ಬ ಸಾರ್ವಜನಿಕರು ಹಿಂಸೆ, ಶೋಷಣೆ, ಭಯ ಹಾಗೂ ಅವಲಂಬನೆಯಿಂದ ಮುಕ್ತರಾಗಿ ಸ್ವಾಭಿಮಾನ ಮತ್ತು ಸ್ವಾವಲಂಬನೆಯೊಂದಿಗೆ ಬದುಕುವಂತಾಗಬೇಕು. ಸರ್ವರ ಸಬಲೀಕರಣದಿಂದಲೇ ಸದೃಢ ಹಾಗೂ ಸಶಕ್ತ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.

ವಿದ್ಯಾರ್ಥಿಗಳು ತ್ರಿವರ್ಣ ಧ್ವಜಗಳನ್ನು ಹಿಡಿದು ವಂದೇ ಮಾತರಂ ಹಾಗೂ ಭಾರತ್ ಮಾತಾ ಕೀ ಜೈ, ಕರ್ನಾಟಕ ಮಾತಾಕೀ ಜೈ ಎಂದು ಘೋಷಣೆಗಳನ್ನು ಕೂಗುವ ಮೂಲಕ ರಾಷ್ಟ್ರ ಪ್ರೇಮ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಫಿನಿಕ್ಸ್ ಇಂಟರನ್ಯಾಶನಲ್ ಸಮೂಹ ಸಂಸ್ಥೆಯ ಶಿಕ್ಷಕರಾದ ಅಸ್ಮಾ, ಮಂಜುಳಾ, ಕಿರಣ, ಅಪ್ಪಣ್ಣಾ ಉಪಸ್ಥಿತರಿದ್ದರು.