ಇಂದು ಸಿಎಂ, ಸಚಿವರ ಮಹತ್ವದ ಸಭೆ - ಜಾತಿಗಣತಿ, ಒಳಮೀಸಲು, ಪಂಚಮಸಾಲಿ, ಉಪಚುನಾವಣೆ ಬಗ್ಗೆ ಚರ್ಚೆ

ಸಾರಾಂಶ

ಜಾತಿಗಣತಿ, ಒಳ ಮೀಸಲಾತಿ, ಪಂಚಮಸಾಲಿ ಮೀಸಲಾತಿ ಹಾಗೂ ಉಪ ಚುನಾವಣೆ ವಿಚಾರಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಸಂಜೆ ತಮ್ಮ ನಿವಾಸದಲ್ಲಿ ಎಲ್ಲ ಸಚಿವರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.

ಬೆಂಗಳೂರು : ಜಾತಿಗಣತಿ, ಒಳ ಮೀಸಲಾತಿ, ಪಂಚಮಸಾಲಿ ಮೀಸಲಾತಿ ಹಾಗೂ ಉಪ ಚುನಾವಣೆ ವಿಚಾರಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಸಂಜೆ ತಮ್ಮ ನಿವಾಸದಲ್ಲಿ ಎಲ್ಲ ಸಚಿವರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.

ಇದೇ ವೇಳೆ ಮುಡಾ ಸಂಬಂಧ ಇ.ಡಿ. ತನಿಖೆ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಭೆ ತೀವ್ರ ಕುತೂಹಲ ಮೂಡಿಸಿದೆ.

ಪ್ರಸ್ತುತ ಸರ್ಕಾರಕ್ಕೆ ಜಾತಿಗಣತಿ, ಒಳ ಮೀಸಲಾತಿ ಹಾಗೂ ಪಂಚಮಸಾಲಿ ಮೀಸಲಾತಿ ವಿಷಯಗಳು ಸವಾಲಾಗಿ ಪರಿಣಮಿಸಿದೆ. ಮತ್ತೊಂದೆಡೆ ಮೂರು ಕ್ಷೇತ್ರಗಳಿಗೆ ಘೋಷಣೆಯಾಗಿರುವ ಉಪಚುನಾವಣೆ ಗೆಲ್ಲಲು ರಣತಂತ್ರ ಹೆಣೆಯಬೇಕಿದೆ. ಈ ಹಿನ್ನೆಲೆಯಲ್ಲಿ ಸಭೆ ಕರೆದಿರುವುದಾಗಿ ತಿಳಿದುಬಂದಿದೆ.

ಇದಕ್ಕೂ ಮೊದಲು ಜಾತಿಗಣತಿ ವರದಿ ಬಗ್ಗೆ ಲಿಂಗಾಯತ ಹಾಗೂ ಒಕ್ಕಲಿಗ ಸಚಿವರೊಂದಿಗೆ ಮಾತ್ರ ಭಾನುವಾರ ಸಭೆ ನಡೆಸಲಿದ್ದಾರೆ ಎನ್ನಲಾಗಿತ್ತು. ಇದರ ನಡುವೆ ಪಂಚಮಸಾಲಿ 2-ಎ ಮೀಸಲಾತಿ ಕೂಗು ಜೋರು ಪಡೆದಿದೆ. ಜತೆಗೆ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವ ಎಚ್. ಆಂಜನೇಯ ಅವರಿಂದ ಒಳ ಮೀಸಲಾತಿ ಒತ್ತಾಯ ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಸಚಿವರನ್ನೂ ಸಭೆಗೆ ಆಹ್ವಾನಿಸಿದ್ದಾರೆ. ಇದೇ ವೇಳೆ ಮುಡಾ ವಿಚಾರವಾಗಿಯೂ ಮುಂದಿನ ಕ್ರಮಗಳ ಬಗ್ಗೆ ಚರ್ಚೆಯಾಗಬಹುದು ಎಂದು ಮೂಲಗಳು ತಿಳಿಸಿವೆ.

Share this article