ಚನ್ನಪಟ್ಟಣ ಅಭ್ಯರ್ಥಿ ಯಾರು? : ಇಂದು ಮತ್ತೆ ಮೈತ್ರಿಪಕ್ಷ ಸಭೆ - ನಿನ್ನೆ ಒಂದೂವರೆ ತಾಸು ಸಮಾಲೋಚನೆ

Published : Oct 20, 2024, 08:13 AM IST
Union Minister HD Kumaraswamy

ಸಾರಾಂಶ

ತೀವ್ರ ಕುತೂಹಲ ಮೂಡಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿ-ಜೆಡಿಎಸ್‌ ನಡುವೆ ಸಹಮತ ವ್ಯಕ್ತವಾಗದ ಕಾರಣ ಭಾನುವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ನಡುವೆ, ಜೆಡಿಎಸ್‌ಗೆ ಟಿಕೆಟ್‌ ಲಭ್ಯವಾಗುವುದು ಬಹುತೇಕ ಖಚಿತವಾಗಿದೆ.

ಬೆಂಗಳೂರು : ತೀವ್ರ ಕುತೂಹಲ ಮೂಡಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿ-ಜೆಡಿಎಸ್‌ ನಡುವೆ ಸಹಮತ ವ್ಯಕ್ತವಾಗದ ಕಾರಣ ಭಾನುವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ನಡುವೆ, ಜೆಡಿಎಸ್‌ಗೆ ಟಿಕೆಟ್‌ ಲಭ್ಯವಾಗುವುದು ಬಹುತೇಕ ಖಚಿತವಾಗಿದೆ.

ಶನಿವಾರ ಖಾಸಗಿ ಹೋಟೆಲ್‌ನಲ್ಲಿ ಉಭಯ ಪಕ್ಷಗಳ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು, ಮುಖಂಡರಾದ ಸಾ.ರಾ.ಮಹೇಶ್‌, ವೆಂಕಟರಾವ್‌ ನಾಡಗೌಡ ಮತ್ತು ಬಿಜೆಪಿಯಿಂದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗವಹಿಸಿದ್ದರು.

ಒಂದೂವರೆ ತಾಸುಗಿಂತ ಹೆಚ್ಚು ಕಾಲ ನಡೆದ ಸಭೆಯಲ್ಲಿ ಚನ್ನಪಟ್ಟಣ ಕ್ಷೇತ್ರದ ಸಾಧಕ-ಬಾಧಕ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ಶುಕ್ರವಾರ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಜತೆ ಜೆಡಿಎಸ್‌ ಮುಖಂಡರು ಸಭೆ ನಡೆಸಿ ಮನವೊಲಿಕೆ ಪ್ರಯತ್ನ ನಡೆಸಿದರಾದರೂ ಯಾವುದೇ ಫಲಪ್ರದವಾಗಲಿಲ್ಲ. ಈ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು ಎಂದು ತಿಳಿದುಬಂದಿದೆ.

ಸಂಡೂರು ಮತ್ತು ಶಿಗ್ಗಾವಿ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಯುತ್ತಿರುವುದರಿಂದ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಬಿಜೆಪಿ ಮುಖಂಡರು ಸಹ ಜೆಡಿಎಸ್‌ಗೆ ನೀಡಲು ಒಲವು ತೋರಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಲಭಿಸುವುದು ಬಹುತೇಕ ಖಚಿತವಾಗಿದೆ. ಆದರೂ ಚನ್ನಪಟ್ಟಣ ಕ್ಷೇತ್ರದ ಆಕಾಂಕ್ಷಿಯಾಗಿರುವ ಸಿ.ಪಿ.ಯೋಗೇಶ್ವರ್‌ ತಮ್ಮ ಪಟ್ಟು ಬಿಡದ ಕಾರಣ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಅಭ್ಯರ್ಥಿಯನ್ನು ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಸಭೆಯಲ್ಲಿ ಅಶೋಕ್‌ ಮತ್ತು ವಿಜಯೇಂದ್ರ ಅವರು ಸಿ.ಪಿ.ಯೋಗೇಶ್ವರ್‌ಗೆ ಟಿಕೆಟ್ ನೀಡುವ ಬಗ್ಗೆ ಪ್ರಸ್ತಾಪಿಸಿ ಕ್ಷೇತ್ರದ ವರದಿಗಳ ಪ್ರಕಾರ ಯೋಗೇಶ್ವರ್‌ ಪರ ಇರುವುದಾಗಿ ಎಂಬ ಮಾಹಿತಿ ನೀಡಿದರು. ಆದರೆ, ಇದಕ್ಕೆ ಸಹಮತ ವ್ಯಕ್ತಪಡಿಸದ ಎಚ್‌.ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರ ಜೆಡಿಎಸ್‌ ಭದ್ರಕೋಟೆಯಾಗಿದ್ದು, ಪಕ್ಷದ ಅಭ್ಯರ್ಥಿಯೇ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಹಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್‌ ಜತೆ ಸಮಾಲೋಚನೆ ಮತ್ತು ರಾಜ್ಯದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿದ ಬಳಿಕ ಅಂತಿಮ ನಿರ್ಣಯ ಕೈಗೊಳ್ಳುವ ಬಗ್ಗೆ ತೀರ್ಮಾನಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು ಎನ್ನಲಾಗಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು, ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್‌ ಸ್ಪರ್ಧಿಸಲಿದೆ. ಅದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಕ್ಷೇತ್ರವಾಗಿದ್ದು, ಭಾನುವಾರ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಲಾಗುತ್ತದೆ. ಬಿಜೆಪಿ ಹೈಕಮಾಡ್‌ ಸಹ ಸೂಚನೆ ನೀಡಿದ್ದು, ಕುಮಾರಸ್ವಾಮಿ ಅವರು ಯಾರನ್ನಾದರೂ ನಿಲ್ಲಿಸಬಹುದು ಎಂಬುದಾಗಿ ತಿಳಿಸಿದೆ ಎಂದು ಹೇಳಿದರು.

ಎನ್‌ಡಿಎ ಭದ್ರವಾಗಬೇಕಾಗಿದ್ದು, ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್‌ ಪಕ್ಷದಿಂದ ಅಭ್ಯರ್ಥಿಯಾಗಲಿದ್ದಾರೆ. ಸಿ..ಪಿ.ಯೋಗೇಶ್ವರ್‌ ಅವರು ಟಿಕೆಟ್‌ ಕೇಳುವುದರಲ್ಲಿ ತಪ್ಪಿಲ್ಲ. ಮೈತ್ರಿ ಪಕ್ಷದ ಒಮ್ಮತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ. ಯಾವುದೇ ಭಿನ್ನಮತವಾಗದ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಸಹ ಚನ್ನಪಟ್ಟಣ ಜೆಡಿಎಸ್‌ ಸ್ಥಾನವಾಗಿದ್ದು, ನೀವು ಕುಳಿತುಕೊಂಡು ತೀರ್ಮಾನ ಕೈಗೊಳ್ಳಿ ಎಂದಿದ್ದಾರೆ. ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯನ್ನು ಭಾನುವಾರ ಅಂತಿಮಗೊಳಿಸಿ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ರಾಜ್ಯದಲ್ಲಿ ಇ-ವಾಹನ ಕ್ಷೇತ್ರ ಅಭಿವೃದ್ಧಿಗೆ ಒತ್ತು : ಎಚ್‌.ಡಿ. ಕುಮಾರಸ್ವಾಮಿ