ಕದನದಿಂದ ಸಂಧಾನದತ್ತ

KannadaprabhaNewsNetwork |  
Published : Nov 26, 2025, 04:00 AM IST
ರಾಹುಲ್‌ ಗಾಂಧಿ | Kannada Prabha

ಸಾರಾಂಶ

ಅಧಿಕಾರ ಹಸ್ತಾಂತರ ಕಗ್ಗಂಟು ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರವೇಶಕ್ಕೆ ಮನಸ್ಸು ಮಾಡಿರುವ ಕಾಂಗ್ರೆಸ್ ಹೈಕಮಾಂಡ್‌, ಕದನೋತ್ಸಾಹದಲ್ಲಿರುವ ರಾಜ್ಯ ನಾಯಕರನ್ನು ಸಂಧಾನದ ಮೇಜಿನತ್ತ ಒಯ್ಯುವ ಸಾಧ್ಯತೆಗಳು ಗೋಚರವಾಗತೊಡಗಿವೆ.

- ಸೋನಿಯಾಗೆ ತಲುಪಿದ ಅಧಿಕಾರ ಹಸ್ತಾಂತರ ಕಗ್ಗಂಟು । 28ಕ್ಕೆ ಕೈ ವರಿಷ್ಠೆ ದಿಲ್ಲಿಗೆ- ರಾಹುಲ್‌ ಗಾಂಧಿ ಮಧ್ಯಸ್ಥಿಕೆಯಲ್ಲಿ 29ರ ಬಳಿಕ ಸಿದ್ದು-ಡಿಕೆ ಸಂಧಾನ ಮಾತುಕತೆ?

---

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಧಿಕಾರ ಹಸ್ತಾಂತರ ಕಗ್ಗಂಟು ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರವೇಶಕ್ಕೆ ಮನಸ್ಸು ಮಾಡಿರುವ ಕಾಂಗ್ರೆಸ್ ಹೈಕಮಾಂಡ್‌, ಕದನೋತ್ಸಾಹದಲ್ಲಿರುವ ರಾಜ್ಯ ನಾಯಕರನ್ನು ಸಂಧಾನದ ಮೇಜಿನತ್ತ ಒಯ್ಯುವ ಸಾಧ್ಯತೆಗಳು ಗೋಚರವಾಗತೊಡಗಿವೆ.

ಮಂಗಳವಾರ ದೆಹಲಿ ಹಾಗೂ ಬೆಂಗಳೂರಿನಲ್ಲಿ ನಡೆದಿರುವ ಕೆಲ ಬೆಳವಣಿಗೆಗಳು ಈ ಸೂಚನೆ ನೀಡುತ್ತಿದ್ದು, ಈ ಮಾಸಾಂತ್ಯ ಅಥವಾ ಡಿಸೆಂಬರ್‌ ಮೊದಲ ವಾರ ಈ ಕದನ-ಸಂಧಾನಕ್ಕೆ ಬಹುಮುಖ್ಯ ದಿನಗಳಾಗುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ, ರಾಜ್ಯ ನಾಯಕರ ಈ ಕದನ ವಿಚಾರ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಮುಟ್ಟಿದ್ದು, ಸದ್ಯ ದೆಹಲಿಯಿಂದ ಹೊರಗಿರುವ ಅವರು ನ.28ರ ರಾತ್ರಿ ದೆಹಲಿಗೆ ಹಿಂತಿರುಗಲಿದ್ದಾರೆ. ಇದಾದ ನಂತರ ಅಂದರೆ ನ.29ರ ಬಳಿಕ ರಾಹುಲ್‌ ಗಾಂಧಿ ಅವರು ಈ ಕದನ ಕಲಿಗಳನ್ನು ಸಂಧಾನದ ಮೇಜಿನಲ್ಲಿ ಕೂರಿಸುವ ಪ್ರಕ್ರಿಯೆಗೆ ಚಾಲನೆ ನೀಡಬಹುದು ಎನ್ನಲಾಗುತ್ತಿದೆ.

ಅನಿವಾರ್ಯತೆಯಲ್ಲಿ ಹೈಕಮಾಂಡ್‌:

ಸಂಧಾನ ಪ್ರಕ್ರಿಯೆ ಆರಂಭಿಸುವ ಅನಿವಾರ್ಯತೆಗೆ ಹೈಕಮಾಂಡ್‌ ಸಿಲುಕಿದ್ದು, ಹಾಲಿ ತೋರುತ್ತಿರುವ ತನ್ನ ಮೌನ ತಂತ್ರಗಾರಿಕೆಯನ್ನು ಮತ್ತಷ್ಟು ಕಾಲ ಮುಂದುವರೆಸುವ ಸ್ಥಿತಿಯಲ್ಲಿಲ್ಲ. ಏಕೆಂದರೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಹಸ್ತಾಂತರ ಸಂಬಂಧ ರಹಸ್ಯ ಒಪ್ಪಂದ ಯಾವ ಐದು ಜನರ ಮುಂದೆ ನಡೆದಿತ್ತೋ ಆ ಐದು ಮಂದಿಯೇ ಮುಂದೇನು ಮಾಡಬೇಕು ಎಂದು ತಮಗೆ ನೇರವಾಗಿ ಹೇಳಲಿ ಎಂದು ಪಟ್ಟು ಹಿಡಿದಿದ್ದಾರೆ.

ಜತೆಗೆ, ಡಿ.ಕೆ.ಶಿವಕುಮಾರ್‌ ಬೆಂಬಲಿಗ ಶಾಸಕರು ಅತ್ಯಂತ ಸಕ್ರಿಯವಾಗಿದ್ದು, ನಂಬರ್‌ ಗೇಮ್‌ ತೀವ್ರಗತಿಯಲ್ಲಿ ನಡೆಯತೊಡಗಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣವೂ ಪ್ರತಿತಂತ್ರವನ್ನು ತೀವ್ರವಾಗಿ ಆರಂಭಿಸುವ ಲಕ್ಷಣಗಳಿವೆ. ಈ ಎಲ್ಲ ಬೆಳವಣಿಗೆಗಳನ್ನು ತಡೆಯದಿದ್ದರೆ ಪಕ್ಷ ಹಾಗೂ ಸರ್ಕಾರಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು ಎಂಬುದು ಹೈಕಮಾಂಡ್‌ಗೂ ಮನದಟ್ಟಾದಂತಿದೆ.

ಹೀಗಾಗಿ ಮಂಗಳವಾರ ಸಕ್ರಿಯವಾದ ವರಿಷ್ಠ ರಾಹುಲ್ ಗಾಂಧಿ ಅವರು ವಿದೇಶದಿಂದ ಆಗಮಿಸಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರೊಂದಿಗೆ ದೆಹಲಿಯಲ್ಲಿ ಸುಮಾರು ಒಂದು ತಾಸಿಗೂ ಹೆಚ್ಚಿನ ಕಾಲ ರಾಜ್ಯ ರಾಜಕಾರಣದ ಬಗ್ಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡಿದ್ದಾರೆ.

ರಾಹುಲ್‌ ಭೇಟಿ ನಂತರ ನಗರಕ್ಕೆ ಆಗಮಿಸಿದ ಪ್ರಿಯಾಂಕ್ ಖರ್ಗೆ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದು, ಈ ವೇಳೆ ಹೈಕಮಾಂಡ್‌ ಸಂದೇಶವನ್ನು ಉಭಯ ನಾಯಕರಿಗೂ ರವಾನಿಸಿದರು ಎನ್ನಲಾಗುತ್ತಿದೆ.

ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಆಪ್ತ ಸಚಿವ ಜಮೀರ್ ಅಹಮದ್‌ ಖಾನ್‌ ಅವರು ಮೊದಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ನಂತರ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ.

ಇದರರ್ಥ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ನಡುವೆ ಅಭಿಪ್ರಾಯ ವಿನಿಮಯವು ಸಂದೇಶ ವಾಹಕರ ಮೂಲಕ ನಡೆದಿದೆ. ಆದರೆ, ವಿನಿಮಯಗೊಂಡ ಸಂದೇಶವೇನು ಎಂಬುದು ಮಾತ್ರ ಗೌಪ್ಯವಾಗಿದೆ.

ಈ ಬೆಳವಣಿಗೆಯೂ ಹೈಕಮಾಂಡ್‌ ರಾಜ್ಯಾಧಿಕಾರ ಬಿಕ್ಕಟ್ಟಿಗೆ ಸಂಧಾನ ರೂಪಿಸುವ ಮನಸ್ಥಿತಿ ಮುಟ್ಟಿರುವುದು ಹಾಗೂ ಇದನ್ನರಿತ ಉಭಯ ಬಣಗಳು ಹೈಕಮಾಂಡ್‌ ನಡುವಿನ ಚರ್ಚೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿರುವುದನ್ನು ಸ್ಪಷ್ಟವಾಗಿ ಗೋಚರವಾಗುವಂತೆ ಮಾಡಿದೆ. ಆದರೆ, ಹೈಕಮಾಂಡ್‌ ಯಾವ ರೀತಿಯ ಸಂಧಾನ ಸೂತ್ರ ಮಂಡಿಸಬಹುದು. ಆ ಸೂತ್ರಕ್ಕೆ ಉಭಯ ನಾಯಕರ ಪ್ರತ್ರಿಕ್ರಿಯೆ ಹೇಗಿರುತ್ತದೆ ಎಂಬುದು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ.

PREV

Recommended Stories

ಕೈ ರೆಬೆಲ್ಸ್‌ ಜತೆ ಸೇರಿ ನಾವು ಸರ್ಕಾರ ಮಾಡಲ್ಲ : ಅಶೋಕ್‌
ಸಿದ್ದರಾಮಯ್ಯ ಕಾಂಗ್ರೆಸ್‌ ಆಸ್ತಿ: ಡಿಕೆ - ಅವರ ಮಾತೇ ವೇದವಾಕ್ಯ : ಡಿಸಿಎಂ ಡಿ.ಕೆ.ಶಿವಕುಮಾರ್‌