ಶಿಡ್ಲಘಟ್ಟ: ರಾಜ್ಯದಲ್ಲಿ ಜೆಡಿಎಸ್ ನಿರ್ನಾಮ ಮಾಡಲು ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ರಾಜ್ಯದ ಜನತೆ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿದದ್ದಾರೆ ಎಂದು ಜೆಡಿಎಸ್ ಶಾಸಕ ಮೇಲೂರು ರವಿಕುಮಾರ್ ಹೇಳಿದರು.
ನಗರದ ಬಿಜೆಪಿಯ ಸೇವಾ ಸೌಧದಲ್ಲಿ ಮೈತ್ರಿಕೂಟದಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೂರನೇ ಬಾರಿಯ ಪದಗ್ರಹಣ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಪಕ್ಷಗಳಿಗೆ ಹೆಚ್ಚು ಸ್ಥಾನ ಬರಲು ಸಿದ್ದರಾಮಯ್ಯ, ಡಿಕೆಶಿಯೆ ಕಾರಣ ಎಂದರು. ಜನತೆ ಉತ್ತರ ಕೊಟ್ಟಿದ್ದಾರೆ
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ನೀಡಿದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ಕೊಡುಗೆ ಶೂನ್ಯ. ಅವರ ಅಭಿವೃದ್ಧಿ ಏನೆಂದರೆ ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದರ ಜೊತೆಗೆ ದೇವೇಗೌಡರ ಕುಟುಂಬವನ್ನು ಸಂಪೂರ್ಣ ನಾಶ ಮಾಡಲು ಹೊರಟರು. ಆದರೆ ಅದಕ್ಕೆ ತಕ್ಕ ಉತ್ತರವನ್ನು ಲೋಕಸಭಾ ಚುನಾವಣೆಯಲ್ಲಿ ಜನತೆ ಕೊಟ್ಟಿದ್ದಾರೆ ಎಂದು ಶಾಸಕ ಬಿಎನ್ ರವಿಕುಮಾರ್ ತಿಳಿಸಿದರು. ಎನ್ ಡಿಎ ಬೆಂಬಲದೊಂದಿಗೆ ಹೆಚ್ಚಿನ ಬಹುಮತಗಳಗಳೊಂದಿಗೆ ಜಯಗಳಿಸಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ರೈತರ ಪರವಾಗಿ ಉತ್ತಮವಾದ ಯೋಜನೆಗಳನ್ನು ನೀಡಿರುವುದರಿಂದ ಅವರನ್ನು ಈ ದೇಶದ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವ ಅಮಿತ್ ಶಾ ರವರು ವಿಶ್ವಾಸಕ್ಕೆ ಪಡೆದು ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದ್ದಾರೆ. ಅವರಿಗೆ ರಾಜ್ಯದ ಪರವಾಗಿ ನಾನು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.ಗ್ಯಾರಂಟಿಗೆ ಜನ ಬೆಂಬಲಿಸಿಲ್ಲ
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜಾತಿ ಹೆಸರಿನಲ್ಲಿ, ಗ್ಯಾರಂಟಿ ಭರವಸೆಗಳ ಹೆಸರಿನಲ್ಲಿ ಕರ್ನಾಟಕದ ಮಾದರಿಯಲ್ಲಿ ಗ್ಯಾರಂಟಿ ಮಂಕು ಬೂದಿ ಎರಚಿ ಹೇಗೆ ಅಧಿಕಾರಕ್ಕೆ ಬಂದಿದ್ದಾರೊ ಅದೇ ರೀತಿಯ ತಂತ್ರಗಾರಿಕೆಯನ್ನು ಈ ಲೋಕಸಭಾ ಚುನಾವಣೆಯಲ್ಲಿ ನಡೆಸಿದರು. ಆದರೆ ಅದು ನಡೆಯಲಿಲ್ಲ ಎಂದರು. ರಾಹುಲ್ ಗಾಂಧಿ ಈ ಬಾರಿ ನಮ್ಮ ಸರ್ಕಾರ ಬಂದರೆ ಮಹಿಳೆಯರ ಖಾತೆಗೆ ಟಕಾಟಕ್ ಟಕಾಟಕ್ ಪಟಾಪಟ್, ಪಟಾಪಟ್ ಅಂತ ಹಣ ಬಂದು ಬೀಳುತ್ತದೆ ಎಂದರು. ಮತ್ತು ಭಾರತ್ ಜೋಡೊ ಹಾಗೂ ಭಾರತ್ ನ್ಯಾಯ ಜೋಡೊ ಕಾರ್ಯಕ್ರಮಗಳು ಮಾಡಿದರು. ನರೇಂದ್ರ ಮೋದಿ ಅವರನ್ನು ಸೋಲಿಸುವ ತಂತ್ರಗಳು ಎಷ್ಟೇ ಮಾಡಿದರು ಅವರ ಆಟ ಸಾಗಲಿಲ್ಲ.
ಅವಳಿ ಜಿಲ್ಲೆಗೆ ನೀರಾವರಿ ಯೋಜನೆ
ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಕುಮಾರಣ್ಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಆ ಖಾತೆಯನ್ನು ನೀಡಿದ್ದಲ್ಲಿ ಯಶಸ್ವಿಯಾಗಿ ನಿರ್ವಹಿಸಲಿದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯ ಬಯಲು ಪ್ರದೇಶದ ನೀರಾವರಿ ಸಮಸ್ಯೆಗಳನ್ನು ಮುಖ್ಯಮಂತ್ರಿಯವರು ಸಹ ಮಾಡದ ಕೆಲಸವನ್ನು ನಾವು ಮತ್ತು ಶಾಸಕರು ಹೋಗಿ ಕೆಲಸಗಳನ್ನು ಮಾಡಿಕೊಂಡು ಬರುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಜೆಡಿಎಸ್ ನ ಬಂಕ್ ಮುನಿಯಪ್ಪ, ಹುಜಗೂರು ರಾಮಣ್ಣ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಆನಂದ್ ಗೌಡ,ನಗರ ಮಂಡಲ ಅಧ್ಯಕ್ಷ ನರೇಶ್ ,ತಾದೂರು ರಘು,ಸುರೇಂದ್ರಗೌಡ ಆಂಜನೇಯರೆಡ್ಡಿ, ಜಿಲ್ಲಾ ವಕ್ತಾರ ರಮೇಶ್ ಬಾಯರಿ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರ ಸೇರಿದಂತೆ ಮತ್ತಿತರರು ಹಾಜರಿದ್ದರು